ಕಾನ್ಪುರ: ಸ್ಪಿನ್ನರ್ ಗಳಾದ ಅಕ್ಷರ್ ಪಟೇಲ್ ಮತ್ತು ರವಿ ಅಶ್ವಿನ್ ಬೌಲಿಂಗ್ ದಾಳಿಯ ಪರಿಣಾಮ ನ್ಯೂಜಿಲ್ಯಾಂಡ್ ತಂಡವು ಪ್ರಥಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 296 ರನ್ ಗೆ ಆಲೌಟಾಗಿದೆ. ಇದರಿಂದ ಭಾರತ ತಂಡ 49 ರನ್ ಗಳ ಮುನ್ನಡೆ ಸಾಧಿಸಿದೆ.
ವಿಕೆಟ್ ನಷ್ಟವಿಲ್ಲದೆ 129 ರನ್ ಗಳಿಸಿದ್ದಲ್ಲಿಂದ ಮೂರನೇ ದಿನದಾಟ ಆರಂಭಿಸಿದ ಕಿವೀಸ್ 151 ರನ್ ಗೆ ಮೊದಲ ವಿಕೆಟ್ ಕಳೆದುಕೊಂಡಿತು. 89 ರನ್ ಗಳಿಸಿದ್ದ ಯಂಗ್ ಅಶ್ವಿನ್ ಗೆ ವಿಕೆಟ್ ಒಪ್ಪಿಸಿದರು. ಮತ್ತೊಬ್ಬ ಆರಂಭಿಕ ಆಟಗಾರ ಟಾಮ್ ಲ್ಯಾಥಂ ಕೂಡಾ ಶತಕದಂಚಿನಲ್ಲಿ ಎಡವಿದರು. 95 ರನ್ ಗಳಿಸಿದ್ದ ವೇಳೆ ಅಕ್ಷರ್ ಪಟೇಲ್ ಎಸೆತದಲ್ಲಿ ಸ್ಟಂಪ್ ಔಟಾದರು.
ಇದನ್ನೂ ಓದಿ:ಕಾನ್ಪುರ ಟೆಸ್ಟ್: ಸಾಹಾ ಬದಲು ವಿಕೆಟ್ ಕೀಪಿಂಗ್ ಗೆ ಆಗಮಿಸಿದ ಕೆ.ಎಸ್.ಭರತ್!
ಆರಂಭಿಕರಿಬ್ಬರನ್ನು ಹೊರತುಪಡಿಸಿ ಬೇರೆ ಯಾವುದೇ ಆಟಗಾರ ಉತ್ತಮ ಬ್ಯಾಟಿಂಗ್ ಬೆಂಬಲ ನೀಡಲಿಲ್ಲ. 23 ರನ್ ಗಳಿಸಿದ ಜೇಮಿಸನ್ ಅವರದ್ದೇ ಉತ್ತಮ ಗಳಿಕೆ. ಸತತ ವಿಕೆಟ್ ಕಳೆದುಕೊಂಡ ಕಿವೀಸ್ 296 ರನ್ ಗೆ ಸರ್ವಪತನ ಕಂಡಿತು.
ಭಾರತದ ಪರ ಅಕ್ಷರ್ ಪಟೇಲ್ ಮತ್ತೊಮ್ಮೆ ಐದು ವಿಕೆಟ್ ಗೊಂಚಲು ಪಡೆದರು. ನಾಲ್ಕನೇ ಟೆಸ್ಟ್ ಪಂದ್ಯ ಆಡುತ್ತಿರುವ ಅಕ್ಷರ್ ಪಟೇಲ್ ಐದನೇ ಸಲ ಐದು ವಿಕೆಟ್ ಪಡೆದ ಸಾಧನೆ ಮಾಡಿದರು. ಉಳಿದಂತೆ ಅಶ್ವಿನ್ ಗೆ ಮೂರು ವಿಕೆಟ್, ಜಡೇಜಾ ಮತ್ತು ಉಮೇಶ್ ಯಾದವ್ ತಲಾ ಒಂದು ವಿಕೆಟ್ ಕಿತ್ತರು.