Advertisement

ಎಡವಟ್ಟು ಗಣಪನ ಸಮ್‌ಕಷ್ಟ

05:24 PM Jul 27, 2018 | Team Udayavani |

“ನೀನು ಬೇರೆ, ನಿನ್ನ ಎಡಗೈ ಬೇರೇನಾ? ಏನು ಟೈಂಪಾಸ್‌ ಮಾಡೋಕೆ ಬಂದಿದ್ದೀಯಾ?’ ಅಂತ ರೇಗುತ್ತಾರೆ ಡಾಕ್ಟರ್‌. ಅವನು ಹೇಳುವುದು ಅವರಿಗೆ ನಂಬಲಿಕ್ಕೆ ಆಗುವುದೇ ಇಲ್ಲ. ಅವನು ಸುಳ್ಳು ಹೇಳುತ್ತಿದ್ದಾನೆ ಎನ್ನುವುದು ಅವರ ಬಲವಾದ ನಂಬಿಕೆ. ಆದರೆ, ಅವನ ಸಮಸ್ಯೆಯೇ ಬೇರೆ. ಅದೊಂದು ಆಪರೇಷನ್‌ ಆದ ನಂತರ, ಒಮ್ಮೆ ತಲೆ ಸುತ್ತಿ ಬೀಳುತ್ತಾನೆ. ಅಲ್ಲಿಂದ ಅವನಲ್ಲಿ ದೊಡ್ಡ ಪರಿವರ್ತನೆಯಾಗುತ್ತದೆ.

Advertisement

ಏನೋ ಕೆಮಿಕಲ್‌ ರಿಯಾಕ್ಷನ್‌ ಆಗಿ, ಅವನ ಮೆದುಳಿಗೂ, ಎಡಗೈಗೂ ಸಂವಹನ ನಿಂತು ಹೋಗುತ್ತದೆ. ಅಲ್ಲಿಂದ ಅವನ ಎಡಗೈ ಅವನ ಮಾತು ಕೇಳುವುದಿಲ್ಲ. ಯಾರೋ ಹುಡುಗಿಗೆ ಪುಂಡರ ಬಗ್ಗೆ ಎಚ್ಚರಿಸುವುದಕ್ಕೆ ಹೋಗಿ ಅವಳಿಗೆ ಹೊಡೆಯಬಾರದ ಜಾಗಕ್ಕೆ ಹೊಡೆದು ಕೆಟ್ಟವನಾಗುತ್ತಾನೆ. ಇನ್ನೊಮ್ಮೆ ಎಳೆ ಮಗುವನ್ನು ಬ್ಯಾಗ್‌ ಹಿಡಿದ ಹಾಗೆ ಕೈಯಲ್ಲಿ ಹಿಡಿದು ಬರುತ್ತಾನೆ.

ಹುಟ್ಟುಹಬ್ಬದ ಪಾರ್ಟಿಯಲ್ಲಿ ಇನ್ನೇನು ಮಗುವಿನಿಂದ ಚೆಂದದ ಕೇಕ್‌ ಕಟ್‌ ಮಾಡಿಸಬೇಕು ಎನ್ನುವಷ್ಟರಲ್ಲಿ ಆ ಕೇಕ್‌ನ ಅಪ್ಪಚ್ಚಿ ಮಾಡಿ ನಗೆಪಾಟಲಿಗೀಡಾಗುತ್ತಾನೆ. ಹೀಗೆ ಅವನು (ಅಲ್ಲಲ್ಲ ಅವನ ಎಡಗೈ) ಮಾಡುವ ಅವಾಂತರಗಳು ಒಂದಲ್ಲ, ಎರಡಲ್ಲ. ಒಂದು ಕಡೆ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದ್ದರೆ, ಇನ್ನೊಂದು ಕಡೆ ಇಷ್ಟಪಟ್ಟ ಹುಡುಗಿ ಕಣ್ಣೆದುರೇ ದೂರವಾಗುತ್ತಾಳೆ. ಇಂಥ ಸಂದರ್ಭದಲ್ಲಿ ಗಣಪತಿ ಏನು ಮಾಡಬೇಕು.

ಕನ್ನಡ ಚಿತ್ರರಂಗದಲ್ಲಿ ಅನೇಕ ಖಾಯಿಲೆಗಳ ಬಗ್ಗೆ ಚಿತ್ರಗಳಾಗಿವೆ. ಈ ಬಾರಿ ಏಲಿಯನ್‌ ಹ್ಯಾಂಡ್‌ ಸಿಂಡ್ರೋಮ್‌ ಎಂಬ ಕನ್ನಡಕ್ಕೆ ಹೊಸದಾದ ಖಾಯಿಲೆಯನ್ನು ತಂದು ಸಿನಿಮಾ ಮಾಡಿದ್ದಾರೆ. ಈ ಖಾಯಿಲೆಯ ಕುರಿತಾದ ಸಿನಿಮಾ ತಮಿಳಿನಲ್ಲಿ ಬಂದಿದ್ದರೂ, ಇದು ಯಾವುದೇ ಚಿತ್ರದ ರೀಮೇಕ್‌ ಅಲ್ಲ ಎನ್ನುವುದು ವಿಶೇಷ. ಈ ಚಿತ್ರದಲ್ಲಿ ಗಣಪತಿ ಎಂಬ ವ್ಯಂಗ್ಯಚಿತ್ರಕಾರನೊಬ್ಬನ ಕಥೆಯನ್ನು ಹೇಳುವ ಪ್ರಯತ್ನವನ್ನು ಅವರು ಮಾಡಿದ್ದಾರೆ.

ಏಲಿಯನ್‌ ಹ್ಯಾಂಡ್‌ ಸಿಂಡ್ರೋಮ್‌ ಎಂಬ ಖಾಯಿಲೆಯಿಂದ ಬಳಲುತ್ತಿರುವ ಅವನು, ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾನೆ ಮತ್ತು ಅದೆಲ್ಲದರಿಂದ ಹೇಗೆ ಆಚೆ ಬರುತ್ತಾನೆ ಎಂಬುದನ್ನು ಹಾಸ್ಯಮಯವಾಗಿ ಹೇಳುವುದಕ್ಕೆ ಅವರು ಪ್ರಯತ್ನಿಸಿದ್ದಾರೆ. ಖುಷಿಯ ವಿಚಾರ ಏನೆಂದರೆ, ಚಿತ್ರಕ್ಕೆ ಏನು ಬೇಕು, ಎಷ್ಟು ಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ಪೂರಕವಾಗಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.

Advertisement

ಇಲ್ಲಿ ಅರ್ಜುನ್‌ ಅನಾವಶ್ಯಕವಾಗಿ ಎಳೆದಾಡುವುದಿಲ್ಲ ಮತ್ತು ಬೋರ್‌ ಹೊಡೆಸುವುದಿಲ್ಲ. ಅವರ ಸ್ಕ್ರಿಪ್ಟ್ ಅಷ್ಟೊಂದು ಗಟ್ಟಿಯಾಗಿದೆಯೋ ಅಥವಾ ಸಂಕಲನಕಾರ ವಿಜೇತ್‌ ಚಂದ್ರ ಅವರ ಕೈಚಳಕವೋ, ಒಟ್ಟಾರೆ ಇಡೀ ಚಿತ್ರ ಕೇವಲ ಎರಡು ಗಂಟೆಯ ಅವಧಿಯಿದ್ದು, ಅದರಲ್ಲೂ ಮೊದಲಾರ್ಧ ಮುಗಿಯುವುದೇ ಗೊತ್ತಾಗುವುದಿಲ್ಲ ಎನ್ನುವಷ್ಟು ವೇಗವಾಗಿ ಮುಗಿದು ಹೋಗುತ್ತದೆ.

ದ್ವಿತೀಯಾರ್ಧ ಅಲ್ಲಲ್ಲಿ ನಿಧಾನವಾಗಿದೆಯಾದರೂ ಒಟ್ಟಾರೆ ಚಿತ್ರ ನೋಡಿಸಿಕೊಂಡು ಹೋಗುತ್ತದೆ ಎಂಬುದು ಚಿತ್ರದ ಹೆಗ್ಗಳಿಕೆ. ಚಿತ್ರದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳು ಕಾಣಬಹುದು. ಹೀಗಲ್ಲ, ಹಾಗೆ ಮಾಡಬಹುದಿತ್ತು ಎಂದನಿಸಬಹುದು. ಆದರೆ, ಮೊದಲ ಪ್ರಯತ್ನಕ್ಕೆ ಇದೊಂದು ನೀಟ್‌ ಆದ ಚಿತ್ರ ಎನ್ನಬಹುದು. ಇಡೀ ಚಿತ್ರ ಸುತ್ತುವುದು ಲಿಖೀತ್‌ ಶೆಟ್ಟಿ ಸುತ್ತ ಮತ್ತು ಅವರು ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ.

ಇಲ್ಲಿ ಅವರಿಗೆ ಅನಾವಶ್ಯಕ ಬಿಲ್ಡಪ್‌ಗ್ಳಿಲ್ಲ ಅಥವಾ ಹೀರೋಯಿಸಂ ಇಲ್ಲ. ಒಬ್ಬ ಸಾಮಾನ್ಯ ಹುಡುಗನಂತೆ ಅವರು ಸರಳವಾಗಿ ಚಿತ್ರದುದ್ದಕ್ಕೂ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಬಣ್ಣ ಹಚ್ಚಿರುವ ಶ್ರುತಿ ಗೊರಾಡಿಯಾ ಸಹ ಅಭಿನಯ ಮತ್ತು ಚೆಲುವಲ್ಲಿ ಕಡಿಮೆ ಇಲ್ಲ. ಮಿಕ್ಕಂತೆ ಪೋಷಕ ಪಾತ್ರಗಳೇ ಈ ಚಿತ್ರದ ಜೀವಾಳ.

ಅಚ್ಯುತ್‌ ಕುಮಾರ್‌ ಅಸಹಾಯಕ ತಂದೆಯಾಗಿ ಎಂದಿನಂತೆ ವೈನಾಗಿ ಅಭಿನಯಿಸಿದ್ದಾರೆ. ಇನ್ನು ನಾಗಭೂಷಣ್‌, ಮಂಜುನಾಥ ಹೆಗಡೆ ಮತ್ತು ಮನ್‌ದೀಪ್‌ ರಾಯ್‌ ಸಹ ಇಷ್ಟವಾಗುತ್ತಾರೆ. ಉದಯ್‌ ಲೀಲಾ ಛಾಯಾಗ್ರಹಣದಲ್ಲಿ ಇಡೀ ಪರಿಸರ ಕಣ್ಣಿಗೆ ಖುಷಿಕೊಟ್ಟರೆ, ರಿತ್ವಿಕ್‌ ಮುರಳೀಧರ್‌ರ ಎರಡು ಹಾಡುಗಳು ಕಿವಿಗೆ ಖುಷಿಕೊಡುತ್ತದೆ.

ಚಿತ್ರ: ಸಂಕಷ್ಟಕರ ಗಣಪತಿ
ನಿರ್ದೇಶನ: ಅರ್ಜುನ್‌ ಕುಮಾರ್‌
ನಿರ್ಮಾಣ: ರಾಜೇಶ್‌ ಬಾಬು, ಫೈಜಾನ್‌ ಖಾನ್‌ ಮುಂತಾದವರು
ತಾರಾಗಣ: ಲಿಖೀತ್‌ ಶೆಟ್ಟಿ, ಶ್ರುತಿ ಗೊರಾಡಿಯಾ, ಅಚ್ಯುತ್‌ ಕುಮಾರ್‌, ಮಂಜುನಾಥ ಹೆಗಡೆ, ನಾಗಭೂಷಣ್‌, ಮನದೀಪ್‌ ರಾಯ್‌ ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next