ಬೆಂಗಳೂರು: ಆನ್‌ಲೈನ್ ಮೂಲಕ ವಿದ್ಯಾರ್ಥಿಗಳ ಮಾಹಿತಿ ಪಡೆದು ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ವಂಚಿಸಿದ್ದ ಇಬ್ಬರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಗರದಲ್ಲಿ ಸಕ್ರಿಯವಾಗಿದ್ದ ವಂಚನೆ ಜಾಲವನ್ನು ಮೈಕೋ ಲೇಔಟ್ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ರಜತ್ ಶೆಟ್ಟಿ (31), ಜಾರ್ಖಂಡ್ ಮೂಲದ ಜಯಪ್ರಕಾಶ್ ಸಿಂಗ್ (31) ಬಂಧಿತರು. ಆರೋಪಿಗಳು ಐಷಾರಾಮಿ ಜೀವನಕ್ಕಾಗಿ ವಂಚನೆಯ ದಂಧೆ ನಡೆಸುತ್ತಿದ್ದರು ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಬಿಬಿಎಂ ಪದವೀಧರ ಜಯಪ್ರಕಾಶ್ ಸಿಂಗ್ ಮತ್ತು ಮಣಿಪಾಲ್ ನಲ್ಲಿ ಬಿಇ ಪದವಿ ಪಡೆದಿರುವ ರಜತ್ ಶೆಟ್ಟಿ ಎರಡು ವರ್ಷಗಳ ಕಾಲ ಐಟಿ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ.
ಆನ್‌ಲೈನ್ ಮೂಲಕ ಮಾಹಿತಿ: ಆರೋಪಿಗಳಿಬ್ಬರು ಹುಟ್ಟಿನಿಂದಲೇ ಶ್ರೀಮಂತರಾಗಿದ್ದು, ಉನ್ನತ ಹುದ್ದೆಯಲ್ಲಿರುವ ಸರ್ಕಾರಿ ಅಧಿಕಾರಿಗಳ ಬೆಂಬಲ ಪಡೆಯುತ್ತಿದ್ದರು. ಪ್ರತಿ ವರ್ಷ ಮೆಡಿಕಲ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪಿಜಿ ಸೀಟುಗಳಿಗೆ ಅರ್ಜಿ ಸಲ್ಲಿಸುವ ವೇಳೆ ವೆಬ್‌ಸೈಟ್ ಒಂದರ ಮೂಲಕ ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕುತ್ತಿದ್ದ ಆರೋಪಿಗಳು, ಕಡಿಮೆ ಅಂಕ ಪಡೆದು ಸೀಟು ದೊರಕದ ಶ್ರೀಮಂತರ ಮಕ್ಕಳನ್ನು ಟಾರ್ಗೆಟ್ ಮಾಡಿಕೊಂಡು, ಮಧ್ಯವರ್ತಿಗಳ ಮೂಲಕ ಅವರ ಪೋಷಕರನ್ನು ಸಂಪರ್ಕಿಸಿ ಹಣ ನೀಡಿದರೆ ಮಕ್ಕಳಿಗೆ ಮೆಡಿಕಲ್ ಸೀಟು ನೀಡುವುದಾಗಿ ನಂಬಿಸುತ್ತಿದ್ದರು. ಬಳಿಕ ಹಣ ಪಡೆದು ಕಾಲೇಜಿನ ಹೆಸರಿನಲ್ಲಿ ಪ್ರವೇಶ ಪತ್ರ ವಿತರಿಸುತ್ತಿದ್ದರು. ಈ ದಾಖಲೆಗಳನ್ನು ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಸಲ್ಲಿಸುವ ಹೊತ್ತಿಗೆ ಆರೋಪಿಗಳು ಕಚೇರಿ ಖಾಲಿ ಮಾಡಿ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗುತ್ತಿದ್ದರು.
ಕೋಟ್ಯಂತರ ರೂ. ವಶಕ್ಕೆ: ಜಯಪ್ರಕಾಶ್ ಸಿಂಗ್ ಅತ್ತೆ, ಮಾವನ ಹೆಸರಿನಲ್ಲಿ ಎಚ್‌ಡಿಎಫ್ಸಿ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದ್ದ 50 ಲಕ್ಷ ರೂ., ವೈಯಕ್ತಿಕ ಖಾತೆಯಲ್ಲಿದ್ದ 12 ಲಕ್ಷ ರೂ. ಹಾಗೂ ಪ್ರತಿಷ್ಠಿತ ಅಪಾರ್ಟ್ ಮೆಂಟ್‌ವೊಂದರಲ್ಲಿ ಫ್ಲಾಟ್ ಖರೀದಿಸಲು ರಜತ್ ಶೆಟ್ಟಿ ನೀಡಿದ್ದ 20 ಲಕ್ಷ ರೂ. ಮುಂಗಡ ಹಣ, ಖಾಸಗಿ ವ್ಯಕ್ತಿಗಳಿಗೆ ನೀಡಿದ್ದ 9.45 ಲಕ್ಷ ರೂ. ವಿವಿಧ ಕಂಪನಿಗಳಲ್ಲಿ ಹೂಡಿಕೆ ಮಾಡಿರುವ 12.5 ಲಕ್ಷ ಮೌಲ್ಯದ ಷೇರುಗಳು, ಒಂದು ಬಲೆರೋ ಕಾರು, ಒಂದು ಎನ್ ಫಿಲ್ಡ್ ಬೈಕ್, 3 ಲಕ್ಷ ಮೌಲ್ಯದ ಚಿನ್ನಾಭರಣ, ಐದು ಲ್ಯಾಪ್‌ಟಾಪ್, ಇತರೆ ದಾಖಲೆ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಬಿಟಿಎಂ ಲೇಔಟ್‌ನಲ್ಲಿ ಗ್ಲೋಬಲ್ ಲರ್ನಿಂಗ್ ಆ್ಯಂಡ್ ಎಜುಕೇಷನ್ ಕನ್ಸಲ್ಟೆನ್ಸಿ ಹೆಸರಿನಲ್ಲಿ ವಂಚಿಸಿದ್ದ ಸಂಬಂಧ 2017ರ ಮಾರ್ಚ್‌ನಲ್ಲಿ ಮೈಕೋಲೇಔಟ್ ಠಾಣೆಯಲ್ಲಿ 3 ಪ್ರಕರಣ ದಾಖಲಾಗಿದ್ದವು. ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದರಿಂದ ಡಾಲರ್ಸ್ ಕಾಲೋನಿಯ ಅಪಾರ್ಟ್‌ಮೆಂಟ್‌ನ ಫ್ಲಾಟ್‌ವೊಂದರಲ್ಲಿ ನೂತನ ಕಚೇರಿ ತೆರೆದಿದ್ದರು.
ವರ್ಷಕ್ಕೊಂದು ಕಚೇರಿ, ಹತ್ತಾರು ಸಿಮ್ ಮೆಡಿಕಲ್ ಪಿಜಿ ಸೀಟು ಆಕಾಂಕ್ಷಿಗಳಿಗೆ ಸೀಟು ಕೊಡಿಸುವ ದಂಧೆ ನಡೆಸಲು ಆರೋಪಿಗಳು ಪ್ರತಿ ವರ್ಷ ನಗರದ ವಿವಿಧ ಸ್ಥಳಗಳಲ್ಲಿ ಕಟ್ಟಡ ಬಾಡಿಗೆಗೆ ಪಡೆದು ಕಚೇರಿ ತೆರೆಯುತ್ತಿದ್ದರು. ಕಚೇರಿಗಳ ಒಳಾಂಗಣ ವಿನ್ಯಾಸಕ್ಕೇ ಸುಮಾರು 50 ಲಕ್ಷ ರೂ. ವ್ಯಯಿಸಿ, ಆಕಾಂಕ್ಷಿಗಳು ಕಚೇರಿಯೊಳಗೆ ಬರುತ್ತಿದ್ದಂತೆ ಗಣ್ಯರ ಆತಿಥ್ಯ ನೀಡುತ್ತಿದ್ದರು. ಹಾಗೇ ಸಂಪರ್ಕಿಸಲು ಹತ್ತಾರು ಸಿಮ್‌ಕಾರ್ಡ್‌ಗಳನ್ನು ಖರೀದಿಸುತ್ತಿದ್ದರು.
ಅಭ್ಯರ್ಥಿಗಳು ಕಚೇರಿಗೆ ಬಂದಾಗ ಅಸಲಿ ಹೆಸರು ಮರೆಮಾಚಿ ಸುದರ್ಶನ್, ಸಂದೀಪ್, ರಾಹುಲ್ ಹೀಗೆ ಹತ್ತಾರು ನಕಲಿ ಹೆಸರುಗಳಲ್ಲಿ ಪರಿಚಯಿಸಿಕೊಳ್ಳುತ್ತಿದ್ದರು. ಕಚೇರಿ ವಿನ್ಯಾಸ ಹಾಗೂ ಗಣ್ಯರ ಆತಿಥ್ಯ ನೋಡಿಯೇ ಎಷ್ಟೋ ಮಂದಿ ಸ್ಥಳದಲ್ಲೇ ಲಕ್ಷಾಂತರ ರೂ. ಮುಂಗಡ ಹಣ ಕೊಟ್ಟು ಹೋಗುತ್ತಿದ್ದರು. ಬೆಂಗಳೂರು, ಉಡುಪಿ, ಮಂಗಳೂರು ಹಾಗೂ ಇತರೆಡೆ ಇರುವ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶಾತಿ ಮುಗಿಯುವ ವರೆಗೂ ಕಚೇರಿ ತೆರೆಯುತ್ತಿದ್ದರು. ಹೆಚ್ಚು ಹಣ ನೀಡಿದ ಆಕಾಂಕ್ಷಿಗಳಿಗೆ ಕಾಲೇಜು ಆಡಳಿತ ಮಂಡಳಿ ಜತೆ ಒಪ್ಪಂದ ಮಾಡಿಕೊಂಡು ಸೀಟು ಕೊಡಿಸುತ್ತಿದ್ದರು. ಉಳಿದ ಆಕಾಂಕ್ಷಿಗಳಿಗೆ ಸೀಟು ಕೊಡಿಸದೆ, ಹಣವನ್ನು ಹಿಂದಿರುಗಿಸದೇ ವಂಚಿಸುತ್ತಿದ್ದರು.
ವಂಚಿಸಿದ ಹಣದಲ್ಲೇ ಫ್ಯಾಮಿಲಿ ಟ್ರಿಪ್ ಹುಟ್ಟು ಶ್ರೀಮಂತರಾಗಿರುವ ಆರೋಪಿಗಳು ತಾವು ಅಕ್ರಮವಾಗಿ ಸಂಪಾದಿಸಿದ ಕೋಟ್ಯಂತರ ರೂ. ಹಣದಲ್ಲಿ ಕುಟುಂಬದೊಂದಿಗೆ ಥೈಲ್ಯಾಂಡ್, ಸಿಂಗಾಪುರ, ಮಲೇಷ್ಯಾ ಪ್ರವಾಸ ಹೋಗುತ್ತಿದ್ದರು. ಬೆಂಗಳೂರಿನ ವಿವಿಧೆಡೆ ಜೆಪಿ ಕನ್ಸಲ್‌ಟೆನ್ಸಿ, ಎಜೆಎ ಇನ್ಪ್ರಸ್ಟ್ರಚರ್, ಫೊಟೈನರ್, ನಾರಾಯಣ ಕನ್ಸಲ್ ಟೆನ್ಸಿ ಹಾಗೂ ಐಆರ್‌ಎಸ್ ಕನ್ಸಲ್‌ಟೆನ್ಸಿ ಎಂಬ ಹೆಸರಿನಲ್ಲಿ ಕಚೇರಿ ತೆರೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದ್ದು, ತನಿಖೆ ಮುಂದುವರಿದೆ.