Advertisement

ದೇವದಾಸಿ ಪದ್ಧತಿ ನಿರ್ಮೂಲನೆಗೆ ಜಾಗೃತಿ

11:12 AM Jan 10, 2019 | |

ಧಾರವಾಡ: ದೇವದಾಸಿ ಪದ್ಧತಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸರಕಾರಿ ಸೌಲಭ್ಯ ಕುರಿತು ನ್ಯಾಯಾಂಗ ಇಲಾಖೆ ಹಾಗೂ ಜಿಲ್ಲಾಡಳಿತ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷರು, ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿ ಎಲ್‌.ನಾರಾಯಣಸ್ವಾಮಿ ಹೇಳಿದರು.

Advertisement

ನಗರದಲ್ಲಿ ಬುಧವಾರ ಸಂಜೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ದೇವದಾಸಿಯರ ರಕ್ಷಣೆ ಹಾಗೂ ಪುನರ್ವಸತಿ ಕುರಿತು ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು. ರಾಜ್ಯ ಹಾಗೂ ಕೇಂದ್ರ ಸರಕಾರಗಳು ದೇವದಾಸಿಯರ ರಕ್ಷಣೆ ಹಾಗೂ ಪುನರ್ವಸತಿಗಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿವೆ. ಇವು ಸಕಾಲಕ್ಕೆ ದೇವದಾಸಿಯರಿಗೆ ಮತ್ತು ಅವರ ಮಕ್ಕಳಿಗೆ ಸಿಗುವಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದರು.

ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಈಶಪ್ಪ ಭೂತೆ ಮಾತನಾಡಿ, 1993-94 ಹಾಗೂ 2007-08ರಲ್ಲಿ ಜಿಲ್ಲೆಯಲ್ಲಿ ದೇವದಾಸಿಯರ ಕುರಿತು ಸಮೀಕ್ಷೆ ಕೈಗೊಂಡಿದ್ದು, 1993-94ರಲ್ಲಿ 481, ಹಾಗೂ 2007-08ರಲ್ಲಿ 282 ಮಾಜಿ ದೇವದಾಸಿಯರನ್ನು ಗುರುತಿಸಲಾಗಿದೆ. ಹೀಗೆ ಒಟ್ಟು ಧಾರವಾಡ ಜಿಲ್ಲೆಯಲ್ಲಿ 763 ಮಾಜಿ ದೇವದಾಸಿಯರನ್ನು ಗುರುತಿಸಲಾಗಿದೆ ಎಂದರು.

ಈ ಪೈಕಿ ಇದರಲ್ಲಿ 218 ಜನ ಮರಣ ಹೊಂದಿದ್ದಾರೆ. ಸುಮಾರು 72 ಜನ ವಲಸೆ ಹೊಗಿದ್ದಾರೆ. ಈಗ ಜಿಲ್ಲೆಯಲ್ಲಿ 473 ಮಾಜಿ ದೇವದಾಸಿಯರಿದ್ದಾರೆ. ಇದರಲ್ಲಿ 466 ಜನರಿಗೆ ಸರಕಾರದ ವಿವಿಧ ಇಲಾಖೆಗಳಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಸಹಾಯ, ಕೌಶಲ ತರಬೇತಿ ನೀಡಲಾಗಿದೆ ಮತ್ತು ಮಾಜಿ ದೇವದಾಸಿಯರಿಗೆ ಹಾಗೂ ಅವಲಂಬಿತ ಕುಟುಂಬ ಸದಸ್ಯರಿಗೆ ಅಗತ್ಯವಿರುವ ಕಾನೂನು ಸಲಹೆ, ನೆರವುಗಳನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ದೀಪಾ ಚೋಳನ ಮಾತನಾಡಿ, ಮಾಜಿ ದೇವದಾಸಿಯರ ರಕ್ಷಣೆ ಹಾಗೂ ಪುನರ್ವಸತಿಗಾಗಿ ಕಂದಾಯ ಇಲಾಖೆ ಸೇರಿದಂತೆ ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಪೊಲೀಸ್‌ ಇಲಾಖೆಯಿಂದ ಎಲ್ಲ ನೆರವು, ಸಹಾಯ ಮತ್ತು ರಕ್ಷಣೆ ದೊರೆಯುವಂತೆ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಕಾಲಕಾಲಕ್ಕೆ ಪರಿಶೀಲಿಸಿ, ಸೂಕ್ತ ನಿರ್ದೇಶನ ನೀಡಲಾಗಿದೆ ಎಂದರು.

Advertisement

ಜಿಲ್ಲೆಯಲ್ಲಿರುವ 473 ಮಾಜಿ ದೇವದಾಸಿಯರಿಗೆ ಉತ್ಪನ್ನಕರ ಚಟುವಟಿಕೆ ಮಾಡಲು ಸ್ವ ಉದ್ಯೋಗಕ್ಕೆ ಧನಸಹಾಯ ನೀಡಲಾಗಿದೆ. 473 ಮಾಜಿ ದೇವದಾಸಿಯರಿಗೆ ಮಾಸಿಕ ಪಿಂಚಣಿ ನೀಡಲಾಗುತ್ತಿದೆ. 310 ಮಾಜಿ ದೇವದಾಸಿಯರಿಗೆ ವಸತಿ ಸೌಲಭ್ಯ ಈಗಾಗಲೇ ಕಲ್ಪಿಸಲಾಗಿದೆ. ಉಳಿದ 163 ಜನರು ಬಹುತೇಕ ನಗರ ವಾಸಿಗಳಿದ್ದು ಅವರಿಗೆ ಜಿ ಪ್ಲಸ್‌ ಓನ್‌ ಮಾದರಿಯ ವಸತಿ ಸಮುಚ್ಚಯದಲ್ಲಿ ನಿರ್ಮಿಸಲಾಗುತ್ತಿರುವ ಮನೆಗಳನ್ನು ನೀಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ರಾಜ್ಯ ಉಚ್ಚನ್ಯಾಯಾಲಯದ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾಯಮೂರ್ತಿ ಅರವಿಂದಕುಮಾರ ಸಂವಾದಲ್ಲಿ ಮಾತನಾಡಿದರು. ಜಿಪಂ ಸಿಇಒ ಡಾ| ಬಿ.ಸಿಸತೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್‌.ಎಸ್‌. ಚಿಣ್ಣನ್ನವರ, ಉಪವಿಭಾಗಾಧಿಕಾರಿ ಮಹ್ಮದ ಜುಬೇರ, ಗ್ರಾಮೀಣ ಉಪ ಪೊಲೀಸ್‌ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಉಪ ಪೊಲೀಸ್‌ಆಯುಕ್ತರಾದ ಬಿ.ಎಸ್‌. ನೆಮಗೌಡ, ರವೀಂದ್ರ ಗಡಾದ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಮುನಿರಾಜು, ಉಪನಗರ ಠಾಣೆ ಇನ್‌ಸ್ಪೆಕ್ಟರ್‌ ಮಹಾಂತೇಶ ಬಸಾಪುರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್‌.ಯು. ಬೆಳಕ್ಕಿ, ದೇವದಾಸಿ ಪುನರ್ವಸತಿ ಯೋಜನೆಯ ಬೆಳಗಾವಿ ವಿಭಾಗದ ನೋಡಲ್‌ ಅಧಿಕಾರಿ ಮಧುಸೂಧನ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next