Advertisement

ಡಿಜಿಟಲ್‌ ವ್ಯವಹಾರದಲ್ಲಿ ಜಾಗೃತಿ ಅಗತ್ಯ: ರಾಜೇಂದ್ರ

01:18 PM Mar 16, 2022 | Team Udayavani |

ಬಾಗಲಕೋಟೆ: ಇಂದಿನ ಆಧುನಿಕ ಯುಗದಲ್ಲಿ ಡಿಜಿಟಲ್‌ ವ್ಯವಹಾರ ಹೆಚ್ಚಾಗಿದ್ದು, ಗ್ರಾಹಕ ವ್ಯವಹರಿಸುವಾಗ ಜಾಗೃತಿ ವಹಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ಕೆ.ರಾಜೇಂದ್ರ ಹೇಳಿದರು.

Advertisement

ನವನಗರದ ಡಾ|ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ಆಯೋಗ, ಕಾನೂನು ಮಾಪನ ಶಾಸ್ತ್ರ, ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ವರ್ಷದ ನ್ಯಾಯೋಜಿತ ಡಿಜಿಟಲ್‌ ಹಣಕಾಸು ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದ್ದು, ಡಿಜಿಟಲ್‌ ವ್ಯವಹಾರದಲ್ಲಿ ಯಾವುದೇ ವಸ್ತು ಖರೀದಿಸುವಾಗ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಪಡೆಯುವಾಗ ಶೋಷಣೆ, ಅನ್ಯಾಯವಾದರೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಬಹುದಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ವಿಜಯಕುಮಾರ ಪಾವಲೆ ಮಾತನಾಡಿ, ಆನ್‌ಲೈನ್‌ ವ್ಯವಹಾರದಲ್ಲಿ ಅಶಿಕ್ಷಿತರ ಜತೆಗೆ ವಿದ್ಯಾವಂತರು ಸಹ ಮೋಸ ಹೋಗುತ್ತಿದ್ದಾರೆ. ಡಿಜಿಟಲ್‌ ವ್ಯವಹಾರದಲ್ಲಿ ಜಾಹೀರಾತು, ಅನಾಮಧೇಯ ಕರೆಗಳಿಗೆ ಕಿವಿಗೊಡಬಾರದು. ಗ್ರಾಹಕ ಮೋಸ ಹೋದಲ್ಲಿ ಪರಿಹಾರ ಕಂಡುಕೊಳ್ಳಲು ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಬಹುದಾಗಿದೆ ಎಂದರು.

ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿಗಳು ಹಾಗೂ ಬಿವಿವ ಸಂಘದ ಮುಖ್ಯ ಸಲಹೆಗಾರರಾದ ಡಾ|ಮೀನಾ ಚಂದಾವರಕರ್‌ ಮಾತನಾಡಿ, ಆರ್ಥಿಕ ವ್ಯವಸ್ಥೆಯ ಕೇಂದ್ರ ಬಿಂದು ಗ್ರಾಹಕರಾಗಿದ್ದಾರೆ. 2019ರಲ್ಲಿ ಗ್ರಾಹಕರ ರಕ್ಷಣೆ ಕಾಯ್ದೆಯಲ್ಲಿ ಕೆಲವೊಂದು ಬದಲಾವಣೆ ಸಹ ಮಾಡಲಾಗಿದೆ ಎಂದು ತಿಳಿಸಿದರು.

Advertisement

ವ್ಯಾಪಾರಸ್ಥ ಗ್ರಾಹಕರಿಗೆ ಮೋಸ ಮಾಡಿದಲ್ಲಿ ಅವರ ವಿರುದ್ದ ದೂರು ನೀಡಬಹುದಾಗಿದೆ. ವ್ಯಾಪಾರ ಮತ್ತು ಗ್ರಾಹಕರ ನಡುವಿನ ಮಧ್ಯಸ್ಥಗಾರಿಕೆಯಾಗಿ ಗ್ರಾಹಕರ ವೇದಿಕೆ ಕೆಲಸ ಮಾಡುತ್ತಿದೆ. ಗ್ರಾಹಕರು ಆಯೋಗದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ ಜಾಗೃತಿಯ ಕರಪತ್ರ ಬಿಡುಗಡೆ ಮಾಡಿದರು. ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಸ್ವಾಗತಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿಪಂ ಉಪ ಕಾರ್ಯದರ್ಶಿ ಸಿದ್ರಾಮೇಶ್ವರ ಉಕ್ಕಲಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಸಿ.ಎಚ್‌.ಸಮೀಉನ್ನಿಸಾ ಅಬ್ರಾರ್‌, ರಂಗನಗೌಡ ದಂಡನ್ನವರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಕೃಷ್ಣ ಎಂ. ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next