ಬೀದರ: ಜಿಲ್ಲಾಡಳಿತ, ರೋಟರಿ ಕ್ಲಬ್ ಆಫ್ ಬೀದರ ನ್ಯೂ ಸಂಚ್ಯೂರಿ ಮತ್ತು ಗ್ಲೋಬಲ್ ಸೈನಿಕ ಅಕಾಡೆಮಿ ಆಶ್ರಯದಲ್ಲಿ ಡಿ.5ರಂದು ನಗರದ ರಂಗ ಮಂದಿರದಲ್ಲಿ ವಿನೂತನ “ಸಶಸ್ತ್ರ ಪಡೆಗಳ ಸೇರಲು ಅರಿವು ಕಾರ್ಯಕ್ರಮ’ ಆಯೋಜಿಸಲಾಗಿದೆ ಎಂದು ಡಿಸಿ ರಾಮಚಂದ್ರನ್ ಆರ್. ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ನಾಗರಿಕ ಸೇವೆಗಳ ಪರೀಕ್ಷೆಗಳ ಕುರಿತಾಗಿ ಬೀದರ ಜಿಲ್ಲೆಯ ವಿದ್ಯಾರ್ಥಿಗಳಲ್ಲಿಅರಿವು ಮೂಡಿಸಲು ಈ ಹಿಂದೆ ಜಿಲ್ಲಾಡಳಿತ ನಡೆಸಿದ ಕಾರ್ಯಕ್ರಮ ಯಶಸ್ವಿಯಾಗಿದ್ದು, ಅದೇ ಮಾದರಿಯಲ್ಲಿ ಈ ಕಾರ್ಯಕ್ರಮವನ್ನೂ ನಡೆಸಬೇಕೆನ್ನುವ ಸಲಹೆ ಮೇರೆಗೆ ಕಾರ್ಯಕ್ರಮ ರೂಪಿಸಲಾಗಿದ್ದು, ಬೆಳಗ್ಗೆ 9.30ಕ್ಕೆಈ ಕಾರ್ಯಕ್ರಮ ಜರುಗಲಿದೆ ಎಂದರು.
ಬೀದರನಲ್ಲಿ ಹೆಮ್ಮೆಯ ವಾಯು ನೆಲೆಯಿದೆ. ಇಂತಹ ವಾಯುನೆಲೆಯಲ್ಲಿ ಬೀದರನವರು ಇರಬೇಕು. ಸೈನಿಕರಾಗಿ ಸೇರಬಯಸುವ ಬೀದರನಯುವಕರು ಅಲ್ಲಿನ ದೊಡ್ಡ ದೊಡ್ಡ ಹುದ್ದೆಗಳಿಗೆ ಸೇರಲು ನೋಂದಣಿ ಆಗಬೇಕು. ಅಲ್ಲಿ ಉತ್ತೀರ್ಣರಾಗಿ ತರಬೇತಪಡೆಯಬೇಕು ಎಂಬುದು ನಮ್ಮ ಆಶಯ. ಆರ್ಮಿ, ನೇವಿ ಇಂತಹ ಕೋರ್ಸ್‌ಗಳಲ್ಲಿ ಬೀದರ ವಿದ್ಯಾರ್ಥಿಗಳು ಸೇರ್ಪಡೆಯಾಗಬೇಕೆನ್ನುವ ಆಲೋಚನೆ ಮಾಡಿ ನಾವುಗಳು ಈ ಅರಿವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದರು.
ಆರ್ಮಿ, ನೇವಿಯಂತಲ್ಲಿ ಹೇಗೆ ಸೇರಬೇಕು. ಅಲ್ಲಿ ಯಾವ ಯಾವ ರೀತಿಯ ಪರೀಕ್ಷೆಗಳು ಇರುತ್ತವೆ. ಈಪರೀಕ್ಷೆಗೆ ಸಿದ್ಧರಾಗಲು ವಿದ್ಯಾರ್ಥಿಗಳು ಹೇಗೆ ವ್ಯಕ್ತಿತ್ವರೂಪಿಸಿಕೊಳ್ಳಬೇಕು. ಹೇಗೆ ಸಿದ್ಧರಾಗಬೇಕು ಎನ್ನುವ ಬಗ್ಗೆ ಈ ಭಾಗದ ಬಹುತೇಕ ವಿದ್ಯಾರ್ಥಿಗಳಲ್ಲಿ ಮಾಹಿತಿ ಕೊರತೆ ಇದೆ. ಹೀಗಾಗಿ ಇಂತಹ ಮಾಹಿತಿ ಎಲ್ಲರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ಯೋಚಿಸಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಈ ಅರಿವು ಕಾರ್ಯಕ್ರಮದಿಂದಾಗಿ ವಿದ್ಯಾರ್ಥಿಗಳು ಮಾಹಿತಿ ಪಡೆದು ಇಂತಹ ಪರೀಕ್ಷೆಗಳಿಗೆ ಹೆಸರು ನೋಂದಾಯಿಸಿಕೊಂಡು, ಪರೀಕ್ಷೆ ಪಾಸಾಗಿ ದೇಶಸೇವೆಯಲ್ಲಿ ಸೇರಬೇಕೆಂಬುದು ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರು.
ಲೆಫ್ಟಿನಂಟ್ ಜನರಲ್ ರಮೇಶ ಹಲ್ಗಲಿ ಕಾರ್ಯಕ್ರಮ ಉದ್ಘಾಟಿಸುವರು. ಏರ್ ಕಮಾಂಡರ್ ಜಿ.ಎಲ್. ಹಿರೇಮಠ, ಕಮಾಂಡರ್ ನವೀತ್ ಬಾಳಿ, ಕೊಲೊನೆಲ್ ರೋಹಿತ್ ದೇವ್., ಕ್ಯಾ. ನವೀನ್ ನಾಗಪ್ಪ, ಕ್ಯಾ. ಮಾರ್ಟಿನ್ ಜಾರ್ಜ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುವರು ಎಂದು ಜಿಲ್ಲಾಧಿ ಕಾರಿಗಳು ಮಾಹಿತಿ ನೀಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ರೂಪಿಸಲಾಗುತ್ತಿದೆ. ಅಂತರ್ಜಾಲದ ಮೂಲಕ ಬಹಳಷ್ಟು ವಿದ್ಯಾರ್ಥಿಗಳಿಗೆ, ಯುವಜನರಿಗೆಕಾರ್ಯಕ್ರಮದ ಮಾಹಿತಿ ಪ್ರಸಾರವಾಗಲು ವ್ಯವಸ್ಥೆ ಮಾಡಲಾಗುತ್ತಿದೆ. ಆನ್‌ಲೈನ್‌ದಲ್ಲಿ 300 ಸೀಟುಗಳಿಗೆನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇತರರು ಅಂತರ್ಜಾಲ ಮೂಲಕ ನೇರ ವೀಕ್ಷಣೆಗೆ ಅವಕಾಶವಿದೆ ಎಂದು ತಿಳಿಸಿದರು.
ಪೋಸ್ಟರ್ ಬಿಡುಗಡೆ: ಸಶಸ್ತ್ರ ಪಡೆಗಳ ಸೇರಲು ಅರಿವು ಕಾರ್ಯಕ್ರಮ ಕುರಿತು ಮುದ್ರಿಸಿದ ಪೋಸ್ಟರ್‌ಗಳನ್ನು ಇದೆ ವೇಳೆಯಲ್ಲಿ ಬಿಡುಗಡೆ ಮಾಡಲಾಯಿತು. ಈ ವೇಳೆ ಎಸ್‌ಪಿ ನಾಗೇಶ ಡಿ.ಎಲ್., ಅಪರ ಡಿಸಿ ರುದ್ರೇಶ ಗಾಳಿ, ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಭುವನೇಶ ಪಾಟೀಲ, ರೋಟರಿ ಕ್ಲಬ್ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ, ಕಾರ್ಯದರ್ಶಿ ಡಾ| ಕಪೀಲ್ ಪಾಟೀಲ, ಅಕಾಡೆಮಿ ಸ್ಕೂಲ್‌ನ ಕರ್ಣಲ್ ಶರಣಪ್ಪ ಚಿಕೇನಪುರ ಇತರರಿದ್ದರು.