Advertisement

ಸಂಚಾರಿ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ

10:06 AM Jul 18, 2019 | Naveen |

ಕಲಬುರಗಿ: ರಸ್ತೆ ಅಪಘಾತದಲ್ಲಿ ಸಾವು-ನೋವು ತಪ್ಪಿಸಲು ಸಾರ್ವಜನಿಕರು ಸಂಚಾರಿ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಾಹನ ಚಾಲನೆಗೆ ಅವಕಾಶ ಕೊಟ್ಟರೆ ಪೋಷಕರಿಗೆ ದಂಡ ಹಾಕಲಾಗುತ್ತದೆ ಎಂದು ಎಡಿಜಿಪಿ ಮತ್ತು ಸಂಚಾರ, ಸುರಕ್ಷತೆ ವಿಭಾಗದ ಆಯುಕ್ತ ಪಿ.ಎಸ್‌. ಸಂಧು ಎಚ್ಚರಿಸಿದರು.

Advertisement

ನಗರದ ಪಿಡಿಎ ಕಾಲೇಜಿನ ಅಡಿಟೋರಿಯಂನಲ್ಲಿ ಬುಧವಾರ ಪೊಲೀಸ್‌ ಇಲಾಖೆಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮುಖಸ್ಥರಿಗಾಗಿ ಆಯೋಜಿಸಲಾಗಿದ್ದ ರಸ್ತೆ ಸುರಕ್ಷತೆ ನಿಯಮಗಳ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

18 ವರ್ಷದ ತುಂಬಿದ ಮಕ್ಕಳು ವಾಹನ ಚಾಲನೆ ಲೈಸೆನ್ಸ್‌ ಹೊಂದಿರುವುದು ಕಡ್ಡಾಯವಾಗಿದೆ. ಕಾನೂನು ಮೀರಿ ಮಕ್ಕಳಿಗೆ ವಾಹನ ಚಾಲನೆಗೆ ಅವಕಾಶ ಕೊಡಬಾರದು. ಲೈಸೆನ್ಸ್‌ ರಹಿತ ಚಾಲನೆಗೆ ಅನುಮತಿ ಕೊಟ್ಟಲ್ಲಿ ಪೋಷಕರಿಗೆ ದಂಡ ವಿಧಿಸಲಾಗುವುದು. ಅಲ್ಲದೇ, ಪೋಷಕರು ಮೇಲೆ ಮೊಕದ್ದಮೆ ಹೂಡಲು, ಬಂಧಿಸಲು ಕಾನೂನಿನಲ್ಲಿ ಅವಕಾಶ ಇದೆ. ಇದು ಅಪಘಾತ ರಹಿತ ಸಂಚಾರ ಉದ್ದೇಶವೇ ಹೊರತು ಯಾರಿಗೂ ತೊಂದರೆ ಕೊಡುವುದಕ್ಕಲ್ಲ ಎಂದರು.

ಆಟೋದಲ್ಲಿ ಆರು ಮಕ್ಕಳ ಮಾತ್ರ: ಆಟೋಗಳಲ್ಲಿ ಮಕ್ಕಳನ್ನು ಶಾಲೆಗಳಿಗೆ ಬೇಕಾಬಿಟ್ಟಿ ತುಂಬಿಕೊಂಡು ಹೋಗುವಂತಿಲ್ಲ. ಒಂದು ಆಟೋದಲ್ಲಿ ಆರು ಜನ ಮಕ್ಕಳನ್ನು ಮಾತ್ರವೇ ಸಾಗಿಸಬೇಕೆಂದು ಹೇಳಿದರು.

ಆರಕ್ಕಿಂತ ಒಂದು ಮಗುವನ್ನು ಹೆಚ್ಚಿಗೆ ಸಾಗಿಸಿದರೆ ಪೋಷಕರು, ಶಾಲೆಯವರು ಪೊಲೀಸರ ಗಮನಕ್ಕೆ ತರಬೇಕು. ಶಾಲೆಗಳಲ್ಲಿ ಮಕ್ಕಳು ಆಟೋ ಇಳಿಯುವ ಸ್ಥಳ ಮತ್ತು ಆಟೋ ಹತ್ತುವ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಬೇಕು. ಆಟೋ ಚಾಲಕನ ಲೈಸೆನ್ಸ್‌, ವಾಹನದ ದಾಖಲೆಗಳ ಮಾಹಿತಿಯನ್ನು ಪೋಷಕರು ಬರೆದಿಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು.

Advertisement

ಸರಕು ಸಾಗಣೆ ವಾಹನಗಳಲ್ಲಿ ಕೂಲಿ-ಕಾರ್ಮಿಕರು, ಸಾರ್ವಜನಿಕರನ್ನು ಸಾಗಿಸುವುದು ಕಾನೂನು ಬಾಹಿರವಾಗಿದೆ. ಎಲ್ಲಿಯಾದರೂ ಸರಕು-ಸಾಗಣೆ ವಾಹನದಲ್ಲಿ ಸಾರ್ವಜನಿಕರು ಕಂಡುಬಂದಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಹೆಲ್ಮೆಟ್, ಬೆಲ್r ಧರಿಸಿ: ಬೈಕ್‌ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದ್ದು, ಬೈಕ್‌ ಮುಂಬದಿ ಹಾಗೂ ಹಿಂಬದಿ ಇಬ್ಬರೂ ಸವಾರರು ಹೆಲ್ಮೆಟ್ ಹಾಕಿಕೊಳ್ಳಬೇಕು. ಹೆಲ್ಮೆಟ್ ನಿಯಮ ಪಾಲನೆ ಗಂಭೀರವಾಗಿ ಪರಿಗಣಿಸಲಾಗಿದೆ. ಹೆಲ್ಮೆಟ್ ರಹಿತ ಪ್ರಯಾಣ ದಂಡದ ಪ್ರಮಾಣವನ್ನು ನೂರರಿಂದ ಎರಡು ಸಾವಿರ ರೂ.ಗಳಿಗೆ ಏರಿಕೆ ಮಾಡಲಾಗಿದೆ. ದಂಡ ಕಟ್ಟುವ ಈ ಹಣದಲ್ಲಿ ಹೆಲ್ಮೆಟ್ ಧರಿಸಿ ಪ್ರಯಾಣಿಸಿ ಎಂದು ಎಡಿಜಿಪಿ ಮನವಿ ಮಾಡಿದರು.

ಕಾರುಗಳಲ್ಲಿ ಪ್ರಯಾಣಿಸುವವರು ಸೀಟ್ ಬೆಲ್r ಕಡ್ಡಾಯವಾಗಿ ಧರಿಸಬೇಕು. ಸುರಕ್ಷತೆ ದೃಷ್ಟಿಯಿಂದ ಕಾರಿನ ಹಿಂಬದಿ ಸೀಟ್‌ನಲ್ಲಿ ಕುಳಿತವರು ಬೆಲ್r ಧರಿಸಬೇಕು. ಹೆಲ್ಮೆಟ್ ಹಾಗೂ ಬೆಲ್r ಇಲ್ಲದೇ ಇದ್ದರೆ ದಂಡ ಹಾಕುವುದು ಮಾತ್ರವಲ್ಲ, ವಾಹನ ಪರವಾನಗಿ (ಆರ್‌ಸಿ), ಚಾಲನೆ ಪರವಾನಗಿ (ಡಿಎಲ್) ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಾರಿಗೆ ಇಲಾಖೆ ಜಂಟಿ ನಿರ್ದೇಶಕಿ ಎಂ.ಪಿ. ಓಂಕಾರೇಶ್ವರಿ ಮಾತನಾಡಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ರಸ್ತೆ ಸುರಕ್ಷತಾ ಸಪ್ತಾಹ ನಡೆಸಲಾಗುತ್ತದೆ. ರಸ್ತೆ ನಿಯಮ ಜನರಿಗೆ ಮುಟ್ಟಿಸಲು ಪೊಲೀಸ್‌, ಸಾರಿಗೆ ಇಲಾಖೆಯೊಂದಿಗೆ ಆರೋಗ್ಯ, ಶಿಕ್ಷಣ, ಕಾರ್ಮಿಕ, ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ತಂಡವಾಗಿ ಕಾರ್ಯನಿರ್ವಹಿಸಬೇಕು. ಇದುವರೆಗೆ ಸಂಚಾರಿ ನಿಯಮಗಳ ಉಲ್ಲಂಘನೆ ಸಂಬಂಧಿಸಿ 865 ಆರ್‌ಸಿ ಹಾಗೂ 180 ಡಿಎಲ್ಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.

ಈಶಾನ್ಯ ವಲಯ ಐಜಿಪಿ ಮನೀಷ್‌ ಖರ್ಬೇಕರ್‌, ಕಲಬುರಗಿ ಎಸ್‌ಪಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಯಾದಗಿರಿ ಎಸ್‌ಪಿ ಋಷಿಕೇಶ ಭಗವಾನ ಸೋನೆವಾನೆ, ಕಲಬುರಗಿ ಉಪ ಆಯುಕ್ತ ಡಿ. ಕಿಶೋರ ಬಾಬು, ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ, ಡಿಡಿಪಿಐ ಶಾಂತಗೌಡ, ಖಾಸಗಿ ಶಾಲೆಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ರಾಜ್ಯದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳಿಂದ ಸುಮಾರು 11 ಸಾವಿರ ಜನರು ಮೃತಪಡುತ್ತಾರೆ. ನಿತ್ಯವೂ ರಸ್ತೆ ಅವಘಡಗಳಲ್ಲಿ 11ರಿಂದ 18 ಜನ ಮೃತ ಪಡುತ್ತಿದ್ದಾರೆ. ಇದಕ್ಕೆ ಕಾರಣ ರಸ್ತೆ ಸುರಕ್ಷತಾ ನಿಯಮಗಳನ್ನು ಸರಿಯಾಗಿ ಪಾಲಿಸದೆ ಇರುವುದೇ ಆಗಿದೆ. ಇಂತಹ ಸಾವುಗಳಿಂದ ದೇಶದ ಮಾನವ ಸಂಪನ್ಮೂಲ ಮತ್ತು ಜಿಡಿಪಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ವಾಹನ ಸವಾರರು ನಿಯಮಗಳನ್ನು ಪಾಲಿಸಿ, ಹೆಲ್ಮೆಟ್, ಸೀಟ್ ಬೆಲ್r ಧರಿಸಿ ಸಂಚರಿಸಿ. ನಿಮ್ಮ ಮಕ್ಕಳು, ಪತ್ನಿ, ಪೋಷಕರ ಬಗ್ಗೆಯೂ ಯೋಚಿಸಿ.
ಪಿ.ಎಸ್‌. ಸಂಧು,
ಆಯುಕ್ತರು, ಸಂಚಾರ ಹಾಗೂ ಸುರಕ್ಷತೆ ವಿಭಾಗ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next