ಎಚ್.ಡಿ.ಕೋಟೆ: ಆರೋಗ್ಯ ಮತ್ತು ಕ್ಷೇಮ ಕೇಂದ್ರದಿಂದ ತಾಲೂಕಿನ ಸ್ವಸಹಾಯ ಸಂಘಗಳ ಸದಸ್ಯರಿಗೆ ಆರೋಗ್ಯ, ನೈರ್ಮಲ್ಯ ಕುರಿತು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತಾಲೂಕಿನ ಭೀಮನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಪ್ರಾಥಮಿಕ ಸುರಕ್ಷಣಾಧಿಕಾರಿ ಕೆ.ಎಸ್.ಸರಸ್ವತಿ ಮಾತನಾಡಿ, ಆರೋಗ್ಯ ಕ್ಷೀಣಿಸಿದಾಗ ಕಡೆಗಣಿಸದೇ ಸಕಾಲದಲ್ಲಿ ಸ್ಥಳೀಯ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಹೆರಿಗೆಗೆ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸದೇ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಮತ್ತು ಸುರಕ್ಷಿತ ಹೆರಿಗೆ ಮಾಡುವುದನ್ನು ಸಮುದಾಯ ಮನಗಂಡು ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳಿ. ಮನೆಯ ಹೆರಿಗೆ ಸುರಕ್ಷಿತವಲ್ಲ ಹೆರಿಗೆ ಸಂದರ್ಭದಲ್ಲಿ ಮೂಢನಂಬಿಕೆಗಳಿಗೆ ಮಾರುಹೋಗದೇ ಸುಲಲಿತ ಸುರಕ್ಷಿತ ಹೆರಿಗೆಗೆ ಆಸ್ಪತ್ರೆಗಳನ್ನೇ ಅವಲಂಬಿಸುವಂತೆ ಕಿವಿ ಮಾತು ಹೇಳಿದರು.
ಹಿರಿಯ ಆರೋಗ್ಯ ನಿರಿಕ್ಷಣಾಧಿಕಾರಿ ಚಂದ್ರು ಮಾತನಾಡಿ, ಬಾಲ್ಯವಿವಾಹ ಕಾನೂನು ಬದ್ಧ ಅಪರಾಧ. ಬಾಲ್ಯವಿವಾಹದಿಂದ ತಾಯಿ ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದೇ ಅಲ್ಲದೆ ತಾಯಿ ಮಗುವಿನ ಜೀವಕ್ಕೆ ಹಾನಿಯಾಗುವ ಸಂಭವ ಇರುತ್ತದೆ. ಆರೋಗ್ಯವಂತ ಸಮುದಾಯ ದಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ಆರೋಗ್ಯದ ದೃಷ್ಟಿಯಿಂದ ಸಮುದಾಯ ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಎಚ್‌ಒ ನಂದಿನಿ, ಕಿರಿಯ ಆರೋಗ್ಯ ಮಹಿಳಾ ಸಹಾಯಕಿ ದಿವ್ಯಾ ಇತರರು ಇದ್ದರು.