ಜೇವರ್ಗಿ: ತಾಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ವಿನಯಕುಮಾರ ಪಾಟೀಲ ಅಧ್ಯಕ್ಷತೆಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಬುಧವಾರ ಪೂರ್ವಭಾವಿ ಸಭೆ ನಡೆಸಲಾಯಿತು.
ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದ ತಹಶೀಲ್ದಾರ್ ಪಾಟೀಲ, ತಾಲೂಕಿನಾದ್ಯಂತ ಕೊರೊನಾ ನಿಯಂತ್ರಣದಲ್ಲಿದ್ದರೂ, ಮೂರನೇ ಅಲೆ ಆತಂಕ ಇರುವ ಕಾರಣ ಸರ್ಕಾರದ ಮಾರ್ಗಸೂಚಿಯಂತೆ ಪ್ರಸಕ್ತ ವರ್ಷ ರಾಜ್ಯೋತ್ಸವ ಸರಳ ರೀತಿಯಲ್ಲಿ ಆಚರಣೆ ಮಾಡುವಂತೆ ಸೂಚಿಸಿದರು.
ಮೆರವಣಿಗೆ ನಡೆಸದೇ ಸರಳವಾಗಿ ಕಾರ್ಯಕ್ರಮ ಆಯೋಜಿಸಿ ಕನ್ನಡ ನಾಡು, ನುಡಿ, ಭಾಷೆ, ನೆಲದ ಬಗ್ಗೆ ಜಾಗೃತಿ ಮೂಡಿಸುವಂತ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.
ಕನ್ನಡಪರ ಹೋರಾಟಗಾರ ಸುಧೀಂದ್ರ ಇಜೇರಿ ಮಾತನಾಡಿ, ಕನ್ನಡ ಭಾಷೆಗೆ ಒತ್ತು ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಪಟ್ಟಣದಲ್ಲಿರುವ ಎಲ್ಲ ಅಂಗಡಿ-ಮುಗ್ಗಟ್ಟುಗಳ ಹೆಸರಿನ ನಾಮಫಲಕವನ್ನು ಕಡ್ಡಾಯವಾಗಿ ಕನ್ನಡದಲ್ಲಿ ಅಳವಡಿಸಬೇಕು. ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು, ಸಿಬ್ಬಂದಿ, ಚುನಾಯಿತ ಜನಪ್ರತಿನಿಧಿಗಳು, ಕನ್ನಡಪರ ಸಂಘಟನೆಗಳ ಎಲ್ಲ ಪದಾಧಿಕಾರಿಗಳು ರಾಜ್ಯೋತ್ಸವ ಕಾರ್ಯಕ್ರಮಕ್ಕೆ ತಪ್ಪದೇ ಆಗಮಿಸಬೇಕು. ದ್ವಿತೀಯ ಪಿಯು ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ಭಾಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಬೇಕು. ಅಲ್ಲದೇ ಅಂದು ಸಸಿ ನೆಡುವ ಕಾರ್ಯಕ್ರಮ ಆಯೋಜಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಕನ್ನಡ ಬೆಳವಣಿಗೆ ಮಾಧ್ಯಮದಲ್ಲಿ ಅಡಕ
ಸಿಡಿಪಿಒ ಸಂಗನಗೌಡ ಪಾಟೀಲ ಗುಂದಗಿ, ಆರೋಗ್ಯಾಧಿಕಾರಿ ಡಾ| ಸಿದ್ಧು ಪಾಟೀಲ, ಬಿಇಒ ವೆಂಕಯ್ಯ ಇನಾಂದಾರ, ಸಮಾಜ ಕಲ್ಯಾಣಾಧಿಕಾರಿ ಅಶೋಕ ನಾಯಕ, ಅಬಕಾರಿ ಇನ್ಸ್ ಪೆಕ್ಟರ್ ವನೀತಾ ಸೀತಾಳೆ, ಪಶು ವೈದ್ಯ ರಾಜು ದೇಶಮುಖ, ಅಲ್ಪಸಂಖ್ಯಾತ ಇಲಾಖೆಯ ಶಕುಂತಲಾ, ಪಿಎಸ್‌ಐ ಸಂಗಮೇಶ ಅಂಗಡಿ, ಕನ್ನಡಪರ ಹೋರಾಟಗಾರರಾದ ಶಂಕರಗೌಡ ಹಾಲಗಡ್ಲಾ, ಶಿವಲಿಂಗ ಹಳ್ಳಿ, ರಾಜಶೇಖರ ಬಂಟನೂರ, ಸಂಗಮೇಶ ಭೋರಟ್ಟಿ, ಸತೀಶ ಜಹಾಗೀರದಾರ, ಭೀಮಾಶಂಕರ ಬಿಲ್ಲಾಡ, ಯಲ್ಲಪ್ಪ ದೊರೆ, ವಿಕ್ರಮ ಬೇಲೂರ, ಲಕ್ಷ್ಮಣ ಪರೀಟ್ ಹಂಚಿನಾಳ ಮತ್ತಿತರರು ಇದ್ದರು.