Advertisement

ನವನಗರದ ಬೀದಿಗಳಲ್ಲಿ ಜಾಗೃತಿ ಚಿತ್ತಾರ

05:46 PM Dec 28, 2021 | Team Udayavani |

ಹುಬ್ಬಳ್ಳಿ: ಹತ್ತು ಹಲವು ಕಾರಣಗಳಿಂದ ಹು-ಧಾ ಎಂದರೆ ಅವ್ಯವಸ್ಥೆಯ ಆಗರ ಎನ್ನುವ ಮನಸ್ಥಿತಿ ಜನರಲ್ಲಿ ಮೂಡುತ್ತಿದೆ. ಇದಕ್ಕೆ ಅಪವಾದ ಎಂಬಂತೆ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಸದ್ದಿಲ್ಲದೆ ತಮ್ಮದೇ ಖರ್ಚಿನಲ್ಲಿ ತಮ್ಮ ವಲಯದ ಪ್ರಮುಖ ಪ್ರದೇಶಗಳ ಸೌಂದಯೀìಕರಣಕ್ಕೆ ಮುಂದಾಗಿದ್ದಾರೆ. ರಸ್ತೆ ಅಕ್ಕಪಕ್ಕದ ಗೋಡೆಗಳು ವಿವಿಧ ಜಾಗೃತಿ ಸಂದೇಶ ಸಾರುವ ಚಿತ್ತಾರಗಳಿಂದ ಕಂಗೊಳಿಸುತ್ತಿವೆ.

Advertisement

ಅರ್ಧಕ್ಕೆ ನಿಂತಿರುವ ಯೋಜನೆಗಳು, ಕಾಮಗಾರಿ ಪೂರ್ಣಗೊಂಡರೂ ಎಲ್ಲೆಂದರಲ್ಲಿ ನಿರ್ಮಾಣ ತ್ಯಾಜ್ಯ, ಮಹಾನಗರದ ಸೌಂದರ್ಯದ ವಿಚಾರದಲ್ಲಿ ನಿರ್ಲಕ್ಷ್ಯದಿಂದಾಗಿ ಹು-ಧಾ ಇತರೆ ನಗರಕ್ಕೆ ಹೋಲಿಕೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಇಲ್ಲಿನ ನವನಗರದಲ್ಲಿರುವ 4ನೇ ವಲಯ ಸಹಾಯಕ ಆಯುಕ್ತ ರಮೇಶ ನೂಲ್ವಿ, ಅಧಿಕಾರಿಗಳು, ಸಿಬ್ಬಂದಿ ತಮ್ಮ ವಲಯ ವ್ಯಾಪ್ತಿಯ ಸೌಂದರ್ಯಿಕರಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.

ಸ್ವಂತ ಖರ್ಚಿನಲ್ಲಿ ಹಾಗೂ ಒಂದಿಷ್ಟು ದಾನಿಗಳಿಂದ ನೆರವು ಪಡೆದು ಪ್ರಮುಖ ರಸ್ತೆಯ ಸರಕಾರಿ ಕಚೇರಿಗಳ ಕಾಂಪೌಂಡ್‌ ಮೇಲೆ ಚಿತ್ತಾರಗಳನ್ನು ಮೂಡಿಸುವ ಪ್ರಯತ್ನ ನಡೆಸಿದ್ದಾರೆ. ವಲಯ ವ್ಯಾಪ್ತಿಯ ನಾಲ್ಕು ವಾರ್ಡ್‌ಗಳಲ್ಲಿ ಬರುವ ಸರಕಾರಿ ಕಚೇರಿಗಳ ಕಾಂಪೌಂಡ್‌ ಗೋಡೆಗಳ ಸೌಂದರ್ಯಿಕರಣ ಹಾಗೂ ತಮ್ಮ ವಲಯ ವ್ಯಾಪ್ತಿಯಲ್ಲಿರುವ ಕಸ ಹಾಕುವ ಜಾಗಗಳ ನಿರ್ಮೂಲನೆಗೆ ಪಣತೊಟ್ಟಿದ್ದಾರೆ..

ಬ್ಲಾಕ್‌ಸ್ಪಾಟ್‌ಗಳ ನಿರ್ಮೂಲನೆ
ಸೌಂದರ್ಯಿಕರಣದ ಜೊತೆಗೆ ಸ್ವತ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ವಲಯ ವ್ಯಾಪ್ತಿಯಲ್ಲಿರುವ ಕಸ ಚೆಲ್ಲುವ ಸ್ಥಳಗಳನ್ನು (ಬ್ಲಾ ಕ್‌ಸ್ಪಾಟ್‌) ಗುರುತಿಸಿದ್ದಾರೆ. ಈಗಾಗಲೇ ಮೂರು ಸ್ಥಳಗಳ ಪೈಕಿ ಎರಡನ್ನು ಕಸ ಮುಕ್ತ ಸ್ಥಳವನ್ನಾಗಿ ಮಾಡಿ ಆ ಸ್ಥಳದಲ್ಲಿ ರಂಗೋಲಿ ಬಿಡಿಸಿ ಜಾಗೃತಿ ಮೂಡಿಸುವ ಕೆಲಸ ನಡೆದಿದೆ. ಇದಕ್ಕಾಗಿ ಓರ್ವ ಸಿಬ್ಬಂದಿ ನಿಯೋಜಿಸಿ ಕಸ ಹಾಕದಂತೆ ಎಚ್ಚರಿಕೆ ನೀಡುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಕಸ ಹಾಕುವವರನ್ನು ಹಿಡಿದು 200 ರೂ. ದಂಡ ವಸೂಲಿ ಮಾಡಿ ಅವರಿಂದಲೇ ಕಸ ತೆಗೆಯುವ ಕೆಲಸ ಶುರುವಾಗಿದೆ. ವಲಯ ವ್ಯಾಪ್ತಿಯ ಇತರೆಡೆ ಇರುವ ಬ್ಲಾ ಕ್‌ಸ್ಪಾಟ್‌ ನಿರ್ಮೂಲನೆಗೆ ತಂಡ ಕಸರತ್ತು ನಡೆಸಿದೆ.

ಮೊದಲ ಹಂತ
ಪಾಲಿಕೆ ಅಧಿಕಾರಿಗಳ ಕಾರ್ಯಕ್ಕೆ ಹಿರಿಯ ಕಲಾವಿದ ಶಿವಲಿಂಗಪ್ಪ ಬಡಿಗೇರ ಹಾಗೂ ಅವರ ತಂಡ ಕೈ ಜೋಡಿಸಿದೆ. ಮೂರ್‍ನಾಲ್ಕು ದಿನಗಳಲ್ಲಿ ಈ ಮಾರ್ಗದ ಚಿತ್ರಣ ಬದಲಾಗಿದ್ದು, ಜನರ ಆಕರ್ಷಣೆಗೆ ಕಾರಣವಾಗಿದೆ. ಮೊದಲ ಹಂತದಲ್ಲಿ ವಲಯ ವ್ಯಾಪ್ತಿಯ ನವನಗರದಿಂದ ಗಾಮನಗಟ್ಟಿ ರಸ್ತೆಯ ಕ್ಯಾನ್ಸರ್‌ ಆಸ್ಪತ್ರೆಯ ಸುಮಾರು 500 ಮೀಟರ್‌ ಉದ್ದದ ಕಾಂಪೌಂಡ್‌ ಗೋಡೆಗೆ ಚಿತ್ರಗಳನ್ನು ಬಿಡಿಸಲಾಗಿದೆ. ಮುಂದಿನ ಹಂತದಲ್ಲಿ ವಲಯ ಕಚೇರಿ ಕಾಂಪೌಂಡ್‌, ರೋಟರಿ ಶಾಲೆ, ಕ್ಯಾನ್ಸರ್‌ ಆಸ್ಪತ್ರೆ ಮುಂಭಾಗ ಸೇರಿದಂತೆ ಸರಕಾರಿ ಕಚೇರಿಗಳ ಕಾಂಪೌಂಡ್‌ ಸುಂದರಗೊಳಿಸುವ ಉದ್ದೇಶ ಹೊಂದಿದ್ದಾರೆ.

Advertisement

ಜಾಗೃತಿ ಸಂದೇಶಗಳು
ಕಲಾಕೃತಿಗಳ ಮೂಲಕ ಜಾಗೃತಿ, ಸಂದೇಶ, ಮಾಹಿತಿ ನೀಡುವ ಕೆಲಸಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಸ್ವಚ್ಛ ಸರ್ವೇಕ್ಷಣವನ್ನು ಗುರಿಯಾಗಿಸಿಕೊಂಡು ಕಾರ್ಯಕ್ಕೆ ಮುಂದಾಗಿದ್ದಾರೆ. ಮಹಾಮಾರಿ ಕೋವಿಡ್‌, ಸ್ವಚ್ಛತೆ, ಪರಿಸರ ಜಾಗೃತಿ, ಎಲ್ಲೆಂದರಲ್ಲಿ ಕಸ ಬಿಸಾಡದಂತೆ ತಿಳಿ ಹೇಳುವ, ಹಸಿ ಹಾಗೂ ಒಣ ಕಸ, ಆಟೋ ಟಿಪ್ಪರ್‌, ಪ್ರಾಣಿ-ಪಕ್ಷಿ ರಕ್ಷಣೆ ಹೀಗೆ ಹಲವು ವಿಷಯಗಳ ಚಿತ್ರಗಳು ರಾರಾಜಿಸುತ್ತಿವೆ.

ಮಾದರಿ ಕಾರ್ಯ
ಸೌಂದರ್ಯಿಕರಣ, ಗೋಡೆ ಬಣ್ಣಕ್ಕೆ ಒಂದಿಷ್ಟು ಅನುದಾನವಿದ್ದರೂ ಇದರ ಬಳಕೆಗೆ ಮುಂದಾಗಿಲ್ಲ. ಬಣ್ಣ, ಒಂದಿಷ್ಟು ವಸ್ತುಗಳ ಖರೀದಿಗೆ ತಗಲುವ ವೆಚ್ಚವನ್ನು ಅಧಿಕಾರಿ-ಸಿಬ್ಬಂದಿಯೇ ಭರಿಸಿದ್ದಾರೆ. ಇನ್ನೂ ಒಂದಿಷ್ಟು ದಾನಿಗಳ ನೆರವು ಪಡೆದಿದ್ದು, ಮುಂದಿನ ಹಂತದಲ್ಲಿ ಇನ್ನಷ್ಟು ಕಾರ್ಯಗಳನ್ನು ದಾನಿಗಳ ಮೂಲಕ ಕೈಗೊಳ್ಳಲು ನಿರ್ಧರಿಸಿದ್ದಾರೆ. ಇವರ ಕಾರ್ಯಕ್ಕೆ ಪಾಲಿಕೆ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇತರೆ ವಲಯ ವ್ಯಾಪ್ತಿಗಳಲ್ಲಿ ಕೈಗೊಳ್ಳಲು ಸಲಹೆ ನೀಡಿದ್ದಾರೆ.

ನಗರ ಸೌಂದರ್ಯಿಕರಣಕ್ಕೆ
ಪಾಲಿಕೆಯಲ್ಲಿ 10 ಲಕ್ಷ ರೂ. ತೆಗೆದಿಟ್ಟಿದ್ದೇವೆ. ಆದರೆ ವಲಯ 4ರಲ್ಲಿ ಅಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿಯ ಸ್ವಯಂಪ್ರೇರಣೆಯಿಂದ ಕಾರ್ಯಚಟುವಟಿಕೆ ನಡೆಯುತ್ತಿದೆ. ಸ್ವಂತ ಹಾಗೂ ಕೆಲ ದಾನಿಗಳ ನೆರವು ಪಡೆದು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅಗತ್ಯಬಿದ್ದರೆ ಪಾಲಿಕೆ ಅನುದಾನದಲ್ಲಿ ನೆರವು ನೀಡಲಾಗುವುದು.
ಡಾ| ಸುರೇಶ ಇಟ್ನಾಳ,
ಆಯುಕ್ತ, ಮನಪಾ

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next