ಚಿಕ್ಕಬಳ್ಳಾಪುರ: ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ಪ್ರತಿಯೊಬ್ಬರೂ ತ್ಯಜಿಸಬೇಕು. ಆ ಮೂಲಕ ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು ತಿಳಿಸಿದರು.
ಚಿಕ್ಕಬಳ್ಳಾಪುರ ನಗರಸಭೆ ಕಾರ್ಯಾಲಯದಲ್ಲಿ ನಗರಸಭೆ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಗರ ವ್ಯಾಪ್ತಿಯ ಹೋಲ್ಸೆಶಲ್, ರಿಟೇಲ್ ಅಂಗಡಿ ಮಾಲೀಕರಿಗೆ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ನಿಷೇಧ ಕುರಿತು ಅರಿವು ಮೂಡಿಸುವ ಸಭೆಯಲ್ಲಿ ಮಾತನಾಡಿದರು.
ಮಾರಕ ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಬರೀ ಪರಿಸರಕ್ಕೆ ಹಾನಿಯಾಗುವುದಲ್ಲದೇ ಮಾನವನಿಗೆ ಕ್ಯಾನ್ಸರ್ ಸೇರಿದಂತೆ ಹಲವು ಮಾರಣಾಂತಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಸರ್ಕಾರ ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ನಿಷೇಧ ಹೇರಿದ್ದು, ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡದಂತೆ ನಗರಸಭೆಯಿಂದ ವರ್ತಕರು, ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ನಗರದ ಹೋಟೆಲ್, ಅಂಗಡಿ, ಬೇಕರಿ ಸೇರಿದಂತೆ ವಿವಿಧೆಡೆ ಕಾನೂನು ಬಾಹಿರವಾಗಿ ಪ್ಲಾಸ್ಟಿಕ್ ಚೀಲ, ಪ್ಲೇಟ್, ಲೋಟ, ತಟ್ಟೆಗಳನ್ನು ಬಳಸುತ್ತಿದ್ದು, ನಿಷೇಧಿಸದವರ ಮೇಲೆ ನಗರಸಭೆಯಿಂದ ದಂಡ ವಿಧಿಸಲಾಗುವುದು. ವರ್ತಕರು ಸಹಕರಿಸಿ ಮಾರಾಟ ಮಳಿಗೆ ಗಳಲ್ಲಿ ಪ್ಲಾಸ್ಟಿಕ್ ಕವರ್ ಬಳಸುವುದು, ದಾಸ್ತಾನು ನಿಷೇಧಿಸುವಂತೆ ಸೂಚಿಸಿದರು.
ಪರಿಸರದ ಸ್ವಚ್ಛತೆಗೆ ಸಾರ್ವಜನಿಕರು ಪರಿಸರ ಸ್ನೇಹಿ ಬ್ಯಾಗ್ ಬಳಸುವಂತೆ ತಿಳಿ ಹೇಳಿದರು.
ನಗರಸಭೆ ಪೌರಾಯುಕ್ತ ಡಾ.ಎನ್.ಮಹಾಂತೇಶ್, ವರ್ತಕರ ಸಂಘದ ಅಧ್ಯಕ್ಷರು, ವಿವಿಧ ಅಂಗಡಿ ಮಾಲೀಕರು ಹಾಜರಿದ್ದರು.