Advertisement

ನೀರಿನ ಸುಸ್ಥಿರ ನಿರ್ವಹಣೆಗೆ ಜಾಗೃತಿ ಅಗತ್ಯ

03:03 PM Apr 06, 2017 | Team Udayavani |

ಉಡುಪಿ: ಕರಾವಳಿ ಪ್ರದೇಶಗಳೆಂದರೆ ಸಮೃದ್ಧ ನಾಡೆಂದು ಜನಜನಿತವಾಗಿತ್ತು. ಆದರೆ ಈಗ ಉಡುಪಿ ಹಾಗೂ ದ. ಕ. ಜಿಲ್ಲೆಗಳಲ್ಲೂ ನೀರಿಗಾಗಿ ತತ್ವಾರ ಪಡುವ ಪರಿಸ್ಥಿತಿ ಉಂಟಾಗಿದೆ. ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದ್ದು, ಒಂದು ರೀತಿಯಲ್ಲಿ ನಾವು ಈಗ ಪಡುತ್ತಿರುವ ಬವಣೆಗೆ ನಾವೇ ಕಾರಣ ಎಂದರೂ ತಪ್ಪಲ್ಲ. ಇರುವ ಅಲ್ಪ ನೀರನ್ನು ಅನಗತ್ಯ ಪೋಲು ಮಾಡದೇ ಸಮರ್ಪಕವಾಗಿ ಬಳಸುವ ಜಾಗೃತಿ ನಮ್ಮೆಲ್ಲರಲ್ಲಿ ಮೂಡಬೇಕಿದೆ.

Advertisement

ಸಾವಿರವಾದರೂ ಅಚ್ಚರಿಯಿಲ್ಲ
5 ವರ್ಷಗಳ ಹಿಂದೆ ಬೋರ್‌ವೆಲ್‌ ಕೊರೆದಾಗ ಕೇವಲ 150ರಿಂದ 200 ಅಡಿ ಆಳದಲ್ಲಿ ನೀರು ಲಭ್ಯವಾಗುತ್ತಿದ್ದರೆ, ಈಗ 400 ಅಡಿಗಿಂತ ಹೆಚ್ಚು ಕೊರೆದರಷ್ಟೇ ನೀರಿನ ಸುಳಿವು ಸಿಗುತ್ತಿದೆ. ಕೆಲವು ಕಡೆಗಳಲ್ಲಿ 700 ಅಡಿ ಆಳದ ವರೆಗೂ ಕೊರೆಯಿಸಿದರೂ ನೀರು ಸಿಗದ ನಿದರ್ಶನ ಕೂಡ ಇದೆ. ಇನ್ನು ಒಂದೆರಡು ವರ್ಷಗಳಲ್ಲಿ ಇದು ಸಾವಿರಕ್ಕೆ ತಲುಪಿದರೂ ಅಚ್ಚರಿಯಿಲ್ಲ ಎನ್ನುತ್ತಾರೆ ಜಲತಜ್ಞರು. 

ಮತ್ತೆ ಮಳೆ ಕಡಿಮೆ
ಕಳೆದ  ವರ್ಷವೇ   ಕಡಿಮೆ ಪ್ರಮಾಣದಲ್ಲಿ ಮಳೆ ಯಾಗಿರುವುದರಿಂದ ರಾಜ್ಯ ಭೀಕರ ಬರಕ್ಕೆ ತುತ್ತಾಗಿದ್ದು, ಗಾಯದ ಮೇಲಿನ ಬರೆ ಎನ್ನುವಂತೆ ಈ ಸಲವೂ ವಾಡಿಕೆಗಿಂತ ಶೇ. 5 ರಷ್ಟು  ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿರುವುದು ಆತಂಕಕಾರಿ ಸಂಗತಿ. ಕಳೆದ ವರ್ಷ ಒಟ್ಟಾರೆ ಮುಂಗಾರಿನಲ್ಲಿ ಶೇ. 18 ಹಾಗೂ ಹಿಂಗಾರಿನಲ್ಲಿ ಶೇ. 68ರಷ್ಟು ಮಳೆ ಕೊರತೆ  ಆದರೆ ಜಿಲ್ಲೆಯಲ್ಲಿ ಮುಂಗಾರು ಹಾಗೂ ಹಿಂಗಾರಿನಲ್ಲಿ ಶೇ. 25.85ರಷ್ಟು ಮಳೆ ಕಡಿಮೆಯಾಗಿದೆ.

ಕಾರಣ ಏನು?
ಭೂಮಿಯ ಅಂತರ್‌ಜಲ ಮಟ್ಟ ದಿನೇ ದಿನೇ ಕುಸಿಯುತ್ತಿರುವುದಕ್ಕೆ ಜಲತಜ್ಞರು ಹಲವಾರು ಕಾರಣಗಳನ್ನು ಕೊಡುತ್ತಾರೆ. ಸಕಾಲಿಕವಾಗಿ ಮತ್ತು ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದು. ಭೂಮಿಗೆ ಬಿದ್ದ ಮಳೆ ನೀರು ಸಮರ್ಪಕವಾದ ಬಳಕೆ ಮಾಡದಿರುವುದು. ಕಡಿಮೆಯಾಗುತ್ತಿರುವ ಕೃಷಿ ಮೇಲಿನ ಆಸಕ್ತಿ. ಹೌದು ಇದು ಕೂಡ ಅಂತರ್‌ಜಲ ಮಟ್ಟ ಕುಸಿಯಲು ಪ್ರಮುಖ ಕಾರಣವಾಗಿದೆ. ಗದ್ದೆಗಳಲ್ಲಿ ಪ್ರತಿ ವರ್ಷ ಎರಡು ಕೊಯ್ಲುಗಳಲ್ಲಿ ಭತ್ತ ಅಥವಾ ಇನ್ನು ಏನೇ ಕೃಷಿ ಮಾಡಿದರೂ ಅಲ್ಲಿ ಭೂಮಿ ಹದವಾಗಿ ನೀರು ಭೂಮಿಗೆ ಸೇರುವ ಪ್ರಕ್ರಿಯೆ ನಡೆಯುತ್ತಿರುತ್ತದೆ. ಆದರೆ ಈಗ ಕೆಲವರು ಅಂತಹ ಗದ್ದೆಗಳನ್ನು ಹಡಿಲು ಬಿಟ್ಟು, ನೀರಿಂಗಿಸುವಂತಹ ಯಾವುದೇ ಕಾರ್ಯ ಆಗುತ್ತಿಲ್ಲ. 

ಹೇಗೆ ಭೂಮಿಗೆ…!
ಕೃಷಿ ಪ್ರದೇಶಗಳಲ್ಲಿ ಏನಿಲ್ಲವೆಂದರೂ ವರ್ಷದಲ್ಲಿ ಕನಿಷ್ಠ 3-4 ತಿಂಗಳು ನೀರು ನಿಲ್ಲುವ ವ್ಯವಸ್ಥೆಯನ್ನು ಕೃಷಿಕರು ಮಾಡುತ್ತಿದ್ದರು. ಅದರಿಂದ ಸಾಮಾನ್ಯವಾಗಿ ಭೂಮಿ ಯೊಳಗಿನ ನೀರಿನ ಮಟ್ಟವು ಏರಿಕೆಯಾಗುತ್ತದೆ. ಆದರೆ ಈಗ ಕೃಷಿ ಪ್ರದೇಶಗಳೇ ಕಡಿಮೆಯಾಗಿ ಅಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ತಲೆಯೆತ್ತಿ ನಿಂತಿವೆ. ಇಲ್ಲಿ ಎಷ್ಟೇ ಮಳೆ ಬಿದ್ದರೂ ಅದು ಹೇಗೆ ಭೂಮಿಗೆ ಸೇರುತ್ತದೆ ಹೇಳಿ. 

Advertisement

ಜಾಗೃತರಾಗದಿದ್ದರೆ ಬವಣೆ!
ನಾವು ಇಂದು ಬಳಸುವ ನೀರು ಅದು ಮುಂದಿನ ಪೀಳಿಗೆಯದು ಎಂದು ನಮಗೆ ಅರಿವಾಗುವುದು ಯಾವಾಗ? ಈಗಾಲಾದರೂ ಎಚ್ಚೆತ್ತುಕೊಂಡು, ಕೃಷಿ ಪ್ರದೇಶಗಳನ್ನು ಉಳಿಸುವ ಮೂಲಕ, ಮನೆಯ ಸುತ್ತಮುತ್ತ ನೀರಿಂಗಿಸುವ, ಮಳೆ ಕೊಯ್ಲಿನಂತಹ ಕಾರ್ಯ ಮಾಡುವುದರ ಜತೆಗೆ ಇರುವ ಅಲ್ಪ ನೀರನ್ನೇ ಸುಸ್ಥಿರವಾಗಿ ಬಳಸಲು ಕಲಿಯದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿನ ಪರಿಸ್ಥಿತಿಗಳನ್ನು ಎದುರಿಸಬೇಕಾಗಬಹುದು.

ಬಜೆ ಅಣೆಕಟ್ಟು ನೀರಿನ ಮಟ್ಟ  ಮತ್ತಷ್ಟು  ಕುಸಿತ
ಸ್ವರ್ಣ ನದಿಯ ಬಜೆ ಅಣೆಕಟ್ಟಿನಲ್ಲಿ  ನೀರಿನ ಮಟ್ಟ  ಮತ್ತೆ ಕುಸಿತ ಕಂಡಿದೆ. ಬುಧವಾರ ನೀರಿನ ಮಟ್ಟ 3.10 ಮೀ. ಇತ್ತು. ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 4.32 ಮೀ. ಇತ್ತು. ಅಂದರೆ 1. 22 ಮೀ. ಕಡಿಮೆ ಇದೆ. ಮಂಗಳವಾರ ನೀರಿನ ಮಟ್ಟ  3.12ಮೀ. ಇತ್ತು.  

ಜಿಲ್ಲೆಯ ಅಂತರ್ಜಲ ಮಟ್ಟ
ವರ್ಷ            ಪ್ರಮಾಣ
2012          6.38
2013          6.22
2014          6.30
2015          5.50
2016          5.74

ಪ್ರಶಾಂತ್‌ ಪಾದೆ
 

Advertisement

Udayavani is now on Telegram. Click here to join our channel and stay updated with the latest news.

Next