ಗದಗ: ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಆಧ್ಯಾತ್ಮದ ಅರಿವು ಮತ್ತು ಸಂಸ್ಕಾರ ಬೇಕು. ಮನುಷ್ಯ ಜೀವನದ ಶ್ರೇಯಸ್ಸಿಗೆ ಆಧ್ಯಾತ್ಮದ ಅನುಸಂಧಾನ ಅಡಿಪಾಯವಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು
ನಗರದ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಜರುಗಿದ ಅಮೃತ ವಾಹಿನಿ ಶತಸಂಭ್ರಮ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮನುಷ್ಯ ಜೀವನದಲ್ಲಿ ಚತುರ್ವಿಧಿ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸದೇ ಇದ್ದರೆ ಜೀವನ ವ್ಯರ್ಥ. ಭೌತಿಕ ಬದುಕು ಸದೃಢಗೊಳ್ಳಲು ಆಧ್ಯಾತ್ಮದ ಕೀಲು ಬೇಕೇ ಬೇಕು. ನಾಗರಿಕತೆಯ ನಾಗಾಲೋಟದಲ್ಲಿ ಮನುಷ್ಯ ಹಿಂದಿನವರಿಗಿಂತ ಹೆಚ್ಚು ಬೆಳೆದಿರುವುದು ಸತ್ಯ. ಆದರೆ, ಬುದ್ಧಿ ವಿಕಾಸಗೊಂಡಷ್ಟು ಭಾವನೆ ಬೆಳೆಯದಿರುವುದೇ ಇಂದಿನ ಆತಂಕಗಳಿಗೆ ಕಾರಣವೆಂದರೆ ತಪ್ಪಾಗದು. ಹುಟ್ಟು ಎಷ್ಟು ಸಹಜವೋ ಸಾವು ಅಷ್ಟೇ ನಿಶ್ಚಿತ. ಹುಟ್ಟು-ಸಾವುಗಳ ಮಧ್ಯೆಯಿರುವ ಬದುಕು ಶ್ರೀಮಂತಗೊಳ್ಳಬೇಕಾಗಿದೆ ಎಂದರು.
ಜ| ರೇಣುಕಾಚಾರ್ಯರು ಭಾವ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ ಮುಖ್ಯವೆಂದು ಬೋಧಿಸಿದ್ದಾರೆ. ಮನಸ್ಸಿದ್ದರೆ ಮಾರ್ಗ ಇದ್ದೇ ಇದೆ ಎಂಬ ಗಾದೆ ಮಾತಿನಂತೆ ಮಾನವೀಯ ಸಂಬಂಧಗಳನ್ನು ಬೆಸೆಯುವ ಕೆಲಸ ಮಾಡಬೇಕಾಗಿದೆ. ಯಾವ ಸಂಪತ್ತಿಗಾಗಿ ಜೀವ ಜಗತ್ತು ಬದುಕುತ್ತಿದೆಯೋ ಆ ಸಂಪತ್ತು ಪ್ರಾಪ್ತಿಗಾಗಿ ಶ್ರಮಿಸಬೇಕಿದೆ. ಅಮೃತ ವಾಹಿನಿ ಧರ್ಮ ಸಮಾರಂಭ ಇಂದು ಶತಸಂಭ್ರಮ ಸಮಾರಂಭ ಹಮ್ಮಿಕೊಂಡಿರುವುದು ಟ್ರಸ್ಟಿನ ಕ್ರಿಯಾಶೀಲ ಬದುಕಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಸೂಡಿ ಜುಕ್ತಿ ಹಿರೇಮಠದ ಡಾ| ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಯೋಗ್ಯ ಗುರಿ ಮತ್ತು ಗುರಿ ಸಾಧನೆಗೆ ಗುರುವಿನ ಕಾರುಣ್ಯ ಇದ್ದರೆ ಏನೆಲ್ಲವನ್ನು ಸಾಧಿಸಲು ಸಾಧ್ಯ. ಅಮೃತ ವಾಹಿನಿ ಸಮಾರಂಭದ ಮೂಲಕ ಜನ ಸಮುದಾಯದಲ್ಲಿ ಧಾರ್ಮಿಕ ಪ್ರಜ್ಞೆ-ಧರ್ಮದ ಆದರ್ಶ ಚಿಂತನೆಗಳನ್ನು ಬೆಳೆಸುತ್ತಿರುವುದು ಎಲ್ಲರ ಮೆಚ್ಚುಗೆ ಗಳಿಸಿಕೊಂಡಿದೆ ಎಂದರು.
ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು, ನರೇಗಲ್ ಮಲ್ಲಿಕಾರ್ಜುನ ಶಿವಾಚಾರ್ಯರು, ಬನ್ನಿಕೊಪ್ಪದ ಡಾ| ಸುಜ್ಞಾನದೇವ ಶಿವಾಚಾರ್ಯರು, ಮಳಲಿ ಡಾ| ನಾಗಭೂಷಣ ಶಿವಾಚಾರ್ಯರು, ಕಳಸಾಪುರ ಫಕ್ಕೀರೇಶ್ವರ ಶಿವಾಚಾರ್ಯರು, ಅಟ್ನೂರಿನ ಅಭಿನವ ಪಂಚಾಕ್ಷರ ಶಿವಾಚಾರ್ಯರು, ರೇಣುಕ ಮಂದಿರದ ಚಂದ್ರಶೇಖರ ದೇವರು ಇದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದ ಪಾಟೀಲ “ಅಮೃತ ವಾಹಿನಿ ಜ್ಞಾನ ಸಂಪದ’ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು. ಚಂದ್ರು ಬಾಳಿಹಳ್ಳಿಮಠ ಮಾತನಾಡಿದರು. ಮಂಜುನಾಥ ಅಬ್ಬಿಗೇರಿ ಸಮಾರಂಭ ಉದ್ಘಾಟಿಸಿದರು.
ಅಬ್ದುಲ್ ಖಾದರ ನಡುಕಟ್ಟಿನ, ಸುನಂದಾ ಬಾಕಳೆ, ರಾಜಗುರು ಗುರುಸ್ವಾಮಿ ಕಲಕೇರಿ, ಮಂಜುನಾಥ ಬೇಲೇರಿ, ಸೋಮಣ್ಣ ಮಲ್ಲಾಡದ ಭಾಗವಹಿಸಿದ್ದರು. ಗಾನಭೂಷಣ ವೀರೇಶ ಕಿತ್ತೂರ ಅವರಿಂದ ಭಕ್ತಿಗೀತೆ ಜರುಗಿತು. ಟ್ರಸ್ಟಿನ ಅಧ್ಯಕ್ಷ ಮಲ್ಲಿಕಾರ್ಜುನ ಶಿಗ್ಲಿ ಸ್ವಾಗತಿಸಿದರು. ಸವಣೂರಿನ ಡಾ| ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಕಾರ್ಯದರ್ಶಿ ಶಿವಾನಂದ ಹಿರೇಮಠ ವಂದಿಸಿದರು.