Advertisement

ಹಕ್ಕು, ಆಕ್ಷೇಪಣೆ ಸಲ್ಲಿಕೆಗೆ ಜಾಗೃತಿ ಮೂಡಿಸಿ

09:55 PM Dec 29, 2019 | Lakshmi GovindaRaj |

ಚಾಮರಾಜನಗರ: ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಹಕ್ಕು, ಆಕ್ಷೇಪಣೆಗಳನ್ನು ಸಲ್ಲಿಸಲು ಜ. 15ರ ವರೆಗೂ ಕಾಲಾವಕಾಶ ನೀಡಲಾಗಿದೆ. ಈ ಬಗ್ಗೆ ವ್ಯಾಪಕವಾಗಿ ಜಾಗೃತಿ ಮೂಡಿಸಲು ರಾಜಕೀಯ ಪಕ್ಷಗಳು ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿ ಪ್ರಚುರಪಡಿಸಿರುವ ಸಂಬಂಧ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಪಟ್ಟಿಯ ವಿಶೇಷ ಪರಿಷ್ಕರಣೆ: ಜಿಲ್ಲೆಯಲ್ಲಿ ಭಾವಚಿತ್ರವಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಡಿ.16ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಹಕ್ಕು, ಆಕ್ಷೇಪಣೆಗಳನ್ನು ಆಯಾ ತಾಲೂಕಿನ ಮತಗಟ್ಟೆಗಳಲ್ಲಿ ಬಿ.ಎಲ್‌.ಒ ಮೂಲಕ ಹಾಗೂ ಆಯಾ ತಾಲೂಕು ಕಚೇರಿಯಲ್ಲಿ ಜ.15ರ ವರೆಗೂ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ರಾಜಕೀಯ ಪಕ್ಷಗಳು ಜಿಲ್ಲೆಯಲ್ಲಿ ವ್ಯಾಪಕವಾಗಿ ಪ್ರಚಾರಪಡಿಸಿ ಮತದಾರರಲ್ಲಿ ಜಾಗೃತಿ ಮೂಡಿಸಲು ಸಹಕರಿಸಬೇಕು ಎಂದರು.

ಬದಲಾವಣೆಗೆ ಅವಕಾಶ: ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಹಾಗೂ ಹೆಸರು ಸರಿ ಇರುವ ಬಗ್ಗೆ ಖಾತರಿ ಪಡಿಸಿಕೊಳ್ಳಬಹುದಾಗಿದೆ. ಮತದಾರರ ಪಟ್ಟಿಯಲ್ಲಿ ಮನೆ ನಂಬರ್‌ ಸರಿ ಇಲ್ಲದಿದ್ದಲ್ಲಿ, ಮತದಾರರ ಹೆಸರು ತಪ್ಪಿದ್ದಲ್ಲಿ, ಭಾವಚಿತ್ರ ಅದಲು- ಬದಲು ಆಗಿದ್ದಲ್ಲಿ, ಫೋಟೋ ಇದ್ದು ಎಪಿಕ್‌ ನಂಬರ್‌ ಇಲ್ಲದಿದ್ದಲ್ಲಿ, ಸಂಬಂಧಿಯ ಹೆಸರು ತಪ್ಪಾಗಿದ್ದಲ್ಲಿ, ಸರಿಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ರಾಜಕೀಯ ಪಕ್ಷಗಳು ಅರಿವು ಮೂಡಿಸಿ: ಜಿಲ್ಲೆಯಲ್ಲಿ 18ರಿಂದ 19ರ ವಯೋಮಾನದ ಯುವ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಸಹ ರಾಜಕೀಯ ಪಕ್ಷಗಳು ಅರಿವು ಮೂಡಿಸಬೇಕಿದೆ. ಹಕ್ಕು, ಆಕ್ಷೇಪಣೆಯಡಿಯಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ಜನವರಿ 27ರೊಳಗೆ ಇತ್ಯರ್ಥಪಡಿಸಲಾಗುವುದು. ಬಳಿಕ ಫೆಬ್ರವರಿ 4ರೊಳಗೆ ಮತದಾರರ ಪಟ್ಟಿಗೆ ಹೆಸರು, ಫೋಟೋ ಸೇರ್ಪಡಿಸಿ ಪೂರಕ ಪಟ್ಟಿಯನ್ನು ಸಿದ್ಧಪಡಿಸಿ, ಅಂತಿಮ ಮತದಾರರ ಪಟ್ಟಿಯನ್ನು ಫೆಬ್ರವರಿ 7ರಂದು ಪ್ರಕಟಿಸಲಾಗುವುದು. ಹೀಗಾಗಿ ಮತದಾರರು ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಯಾಗಿರುವ ಬಗ್ಗೆ ಹಾಗೂ ಎಲ್ಲಾ ಮಾಹಿತಿಗಳು ನಿಖರವಾಗಿರುವ ಬಗ್ಗೆ ತ್ವರಿತವಾಗಿ ಪರಿಶೀಲಿಸಿಕೊಳ್ಳಬೇಕು ಎಂದು ಹೇಳಿದರು.

ನ್ಯೂನತೆಗಳನ್ನು ಸರಿಪಡಿಸಿ: ಮಹಿಳಾ ಮತದಾರರ ವಯಸ್ಸು 30 ವರ್ಷಕ್ಕಿಂತ ಹೆಚ್ಚಿದ್ದು, ಪಟ್ಟಿಯಲ್ಲಿ ಸಂಬಂಧ ತಂದೆ ಎಂದು ಇರುವುದನ್ನು ಪರಿಶೀಲಿಸುವುದು, ಮಹಿಳಾ ಮತದಾರರು ಹೆಚ್ಚಿರುವ ಭಾಗಗಳನ್ನು ಪರಿಶೀಲನೆ ನಡೆಸಿ, ನ್ಯೂನತೆಗಳನ್ನು ಸರಿಪಡಿಸುವುದು, ಎರಡು ಕಡೆ ಹೆಸರುಗಳು ಪುನರಾವರ್ತಿತವಾಗಿರುವ ಹಾಗೂ ಮೃತರ ಹೆಸರನ್ನು ಕೈಬಿಡುವ ವಿಷಯದಲ್ಲಿ ಕ್ರಮ ವಹಿಸಬೇಕು. ಅಲ್ಲದೇ ಪಟ್ಟಿಯಲ್ಲಿ ಸೇರ್ಪಡೆಯಾಗದೇ ಉಳಿದಿರುವ ತೃತೀಯ ಲಿಂಗಿಗಳು ಹಾಗೂ ವಿಕಲಚೇತನರ ಹೆಸರನ್ನು ಸೇರಿಸಲು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಸಹಕಾರ ನೀಡಬೇಕು ಎಂದು ತಿಳಿಸಿದರು.

Advertisement

ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸಿ: 18-19ರ ವಯೋಮಿತಿಯ ಯುವ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸಲು ಜನವರಿ 6, 7, 8ರಂದು ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ಮಿಂಚಿನ ನೋಂದಣಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಈ ಬಗ್ಗೆ ಯುವಜನತೆಯಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಜತೆಗೆ ರಾಜಕೀಯ ಪಕ್ಷಗಳು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತಗಟ್ಟೆ ಮಟ್ಟದ ಏಜೆಂಟ್‌(ಬಿ.ಎಲ್‌.ಎ)ಗಳನ್ನು ನೇಮಕ ಮಾಡಿ, ಮತಗಟ್ಟೆ ಮಟ್ಟದ ಅಧಿಕಾರಿ(ಬಿ.ಎಲ್‌.ಓ)ಗಳ ಜತೆ ನೇರ ಸಂಪರ್ಕದಲ್ಲಿದ್ದು, ದೋಷರಹಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಸಹಕರಿಸಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇದೇ ವೇಳೆ ಜಿಲ್ಲಾಧಿಕಾರಿ ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಕರಡು ಮತದಾರರ ಪಟ್ಟಿಯ ಪ್ರತಿಯನ್ನು ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎ. ರಮೇಶ್‌, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಪರಶಿವಮೂರ್ತಿ, ಗುರುಸ್ವಾಮಿ, ಸಿ.ಎಂ.ಕೃಷ್ಣಮೂರ್ತಿ, ಬ್ಯಾಡಮೂಡ್ಲು ಬಸವಣ್ಣ, ರವಿ ಮೌರ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next