ಅರಸೀಕೆರೆ: ಡೆಂಘೀ ತಡೆಗೆ ನಮ್ಮ ಮನೆಯ ಸುತ್ತಮುತ್ತಲ ಪ್ರದೇಶದ ಸ್ವಚ್ಛತೆಯೊಂದಿಗೆ ಸೊಳ್ಳೆಗಳ ನಿಯಂತ್ರಣದಿಂದ ಮಾತ್ರ ಸಾಧ್ಯ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.
ನಗರದ ಸರ್ಕಾರಿ ಜೆ.ಸಿ.ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಡೆಂಘೀ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಸರ ನೈರ್ಮಲ್ಯಕ್ಕೆ ಜನ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮನೆಗಳ ಸುತ್ತಮುತ್ತಲಿನಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿದಾಗ ಸೊಳ್ಳೆಗಳ ಉತ್ಪತ್ತಿ ಕಡಿಮೆಯಾಗಿ ಸಾಂಕ್ರಾಮಿಕ ರೋಗ ಡೆಂಘೀ ತಡೆಗೆ ಸಾಧ್ಯವಾಗಲಿದೆ. ಅಲ್ಲದೇ, ಡೆಂಘೀ ಜ್ವರದ ಲಕ್ಷಣ ಕಂಡು ಬಂದ ವ್ಯಕ್ತಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸಿದರೆ ಮತ್ತೂಬ್ಬರಿಗೆ ರೋಗ ಹರಡದಂತೆ ತಡೆಗಟ್ಟಲು ಸಾಧ್ಯವಿದ್ದು ಈ ಬಗ್ಗೆ ಅರಿವು ಅವಶ್ಯವೆಂದರು.
ಚಾವನ್ ಪಾಷಾ ವಿತರಣೆ: ಆಯುಷ್ಯ ಇಲಾಖೆ ವತಿಯಿಂದ ಕೊರೊನಾ ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ದೈಹಕ ಶಕ್ತಿ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಸಲು ಸಹಾಯಕವಾಗುವ ಚಾವನ್ ಪಾಷಾ ಲೇಹವನ್ನು ಶಾಸಕರು ವಿತರಣೆ ಮಾಡಿದರು, ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಪ್ಪ, ಡೆಂಘೀ ಕಾಯಿಲೆಗೆ ಕಾರಣವಾದ ಸೊಳ್ಳೆಗಳ ನಿಯಂತ್ರಣ ಕುರಿತು ಮಾಹಿತಿ ನೀಡಿದರು.
ಸರ್ಕಾರಿ ಜೆ.ಸಿ.ಆಸ್ಪತ್ರೆ ವೈದ್ಯಾಧಿಕಾರಿ ಡಾ.ಕರಿಯಪ್ಪ, ನಗರಸಭೆ ಪೌರಾಯುಕ್ತ ಕಾಂತರಾಜ್, ಆಯುಷ್ಯ ಇಲಾಖೆ ವೈದ್ಯರಾದ ಡಾ.ಶೈಲೇಂದ್ರ, ಡಾ.ಮಲ್ಲಿಕಾರ್ಜುನ್ ಕೊರದಾನ್, ಡಾ.ಕಿಶೋರ್ ಬಾಬು, ಡಾ.ಜ್ಞಾನೇಶ್ ನಾಯ್ಕ, ರಕ್ಷಾ ಸಮಿತಿ ಸದಸ್ಯ ಎಂ.ವೈ.ಖಾನ್, ಆರೋಗ್ಯ ಇಲಾಖೆ ಅಧಿಕಾರಿಗಳಾದ ಲಲಿತಮ್ಮ, ಮಾಲತಿ, ಜಬೀರ್ ಪಾಷಾ ಮತ್ತಿತರರಿದ್ದರು.