ಮಕ್ಕಳ ಅಪೌಷ್ಟಿಕತೆ ಪ್ರಮಾಣ ನೋಡಿದಾಗ ಕಲ್ಯಾಣ ಕರ್ನಾಟಕದ ಜಿಲ್ಲೆಗಳೇ ಹೆಚ್ಚು ಪಾಲು ಹೊಂದಿರುವುದು ಸ್ಪಷ್ಟವಾಗುತ್ತದೆ. ಮಕ್ಕಳಲ್ಲಿನ ಅಪೌಷ್ಟಿಕತೆಗೆ ಪರಿಹಾರ ರೂಪಿಸುವುದರ ಜತೆಗೆ ಅಪೌಷ್ಟಿಕತೆಗೆ ಮೂಲ ಕಾರಣದ ಬಗ್ಗೆಯೂ ಗಂಭೀರವಾಗಿ ಚಿಂತಿಸಬೇಕಾಗಿದೆ. ವೈದ್ಯ ಮೂಲಗಳ ಪ್ರಕಾರ ಉತ್ತರ ಕರ್ನಾಟಕದ ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರಲ್ಲಿ ರಕ್ತಹೀನತೆ ಹೆಚ್ಚಿದೆ. ಇಂತಹ ಮಹಿಳೆಯರಿಂದ ಜನಿಸುವ ಮಕ್ಕಳಲ್ಲಿ ಅಪೌಷ್ಟಿಕತೆ ಪ್ರಮಾಣ ಹೆಚ್ಚಿರುವ ಸಾಧ್ಯತೆ ಇದೆ.
ಭವಿಷ್ಯದ ಸದೃಢ, ಬಲಾಡ್ಯ ಸಮಾಜ ನಿರ್ಮಾಣಕ್ಕೆ ಅಪೌಷ್ಟಿಕತೆ ಬಹುದೊಡ್ಡ ಸವಾಲು-ಸಮಸ್ಯೆಯಾಗಿ ಕಾಡುತ್ತಿದೆ. ಅಪೌಷ್ಟಿಕತೆ ನಿವಾರಣೆ ನಿಟ್ಟಿನಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು, ಹಲವು ಸ್ವಯಂ ಸೇವಾ ಸಂಸ್ಥೆಗಳು ಪರಿಹಾರಕ್ಕೆ ಮುಂದಾಗಿದ್ದರೂ, ಅಪೌಷ್ಟಿಕತೆ ಮಹಾಮಾರಿ ಮಾತ್ರ ಇನ್ನೂ ತನ್ನ ಪ್ರಾಬಲ್ಯ ತೋರುತ್ತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಅಪೌಷ್ಟಿಕತೆ ನಿವಾರಣೆಗೆ ಸಮರ್ಪಕ ಹಾಗೂ ವಾಸ್ತವಿಕ ನೆಲೆಗಟ್ಟಿನ ಪರಿಹಾರ ಕ್ರಮಗಳ ಇಚ್ಛಾಶಕ್ತಿ ತೋರಬೇಕಿದೆ.
ಅಪೌಷ್ಟಿಕತೆ ಭವಿಷ್ಯದ ಜನಾಂಗದ ಮೇಲೆ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿಯೇ ಅಪೌಷ್ಟಿಕತೆ ತಾಂಡವಾಡುತ್ತಿದೆ. ಅಪೌಷ್ಟಿಕತೆ ನಿವಾರಣೆಗೆ ರಾಜ್ಯ ಸರ್ಕಾರ ನ್ಯಾಯಮೂರ್ತಿ ಎನ್.ಕೆ.ಪಾಟೀಲ ಅವರ ನೇತೃತ್ವದಲ್ಲಿ ಕಮಿಟಿ ರಚಿಸಿತ್ತು. 2012ರಲ್ಲಿ ಕಮಿಟಿ ವರದಿಯನ್ನು ನೀಡುವ ಮೂಲಕ ಹಲವು ಶಿಫಾರಸುಗಳನ್ನು ಮಾಡಿತ್ತು. ಅಪೌಷ್ಟಿಕತೆ ನಿವಾರಣೆಗೆ ಸಮರ್ಪಕ ಪರಿಹಾರ ಕ್ರಮಗಳು ಜಾರಿಯಾಗಿವೆಯೇ ಎಂಬುದು ಪ್ರಶ್ನಾರ್ಥಕವಾಗಿಯೇ ಉಳಿದಿದೆ. ವಾಸ್ತವದ ಸ್ಥಿತಿ ಇದಕ್ಕೆ ಪುಷ್ಟಿ ನೀಡುವಂತಿದೆ.
ವಯೋಮಿತಿಗೆ ತಕ್ಕಂತೆ ತೂಕ ಹೊಂದಿಲ್ಲದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿರುವ ಪಟ್ಟಿಯಲ್ಲಿ ಕಲಬುರಗಿ, ಕೊಪ್ಪಳ, ಯಾದಗಿರಿ, ಬಳ್ಳಾರಿ ಹಾಗೂ ಬಾಗಲಕೋಟೆ ಜಿಲ್ಲೆಗಳು ಗುರುತಿಸಿಕೊಂಡಿದ್ದರೆ, ಎತ್ತರಕ್ಕೆ ತಕ್ಕಂತೆ ತೂಕ ಹೊಂದಿಲ್ಲದ ಪಟ್ಟಿಯಲ್ಲಿ ರಾಯಚೂರು, ಬೀದರ, ಬೆಳಗಾವಿ, ವಿಜಯಪುರ, ಹಾಸನ ಜಿಲ್ಲೆಗಳು ಗೋಚರಿಸುತ್ತಿವೆ. ಮಕ್ಕಳ ಅಪೌಷ್ಟಿಕತೆ ಪ್ರಮಾಣ ನೋಡಿದಾಗ ಕಲ್ಯಾಣ ಕರ್ನಾಟಕದ ಜಿಲ್ಲೆಗಳೇ ಹೆಚ್ಚು ಪಾಲು ಹೊಂದಿರುವುದು ಸ್ಪಷ್ಟವಾಗುತ್ತದೆ.
ಮಕ್ಕಳಲ್ಲಿನ ಅಪೌಷ್ಟಿಕತೆಗೆ ಪರಿಹಾರ ರೂಪಿಸುವುದರ ಜತೆಗೆ ಅಪೌಷ್ಟಿಕತೆಗೆ ಮೂಲ ಕಾರಣದ ಬಗ್ಗೆಯೂ ಗಂಭೀರವಾಗಿ ಚಿಂತಿಸಬೇಕಾಗಿದೆ. ವೈದ್ಯ ಮೂಲಗಳ ಪ್ರಕಾರ ಉತ್ತರ ಕರ್ನಾಟಕದ ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರಲ್ಲಿ ರಕ್ತಹೀನತೆ ಹೆಚ್ಚಿದೆ. ಇಂತಹ ಮಹಿಳೆಯರಿಂದ ಜನಿಸುವ ಮಕ್ಕಳಲ್ಲಿ ಅಪೌಷ್ಟಿಕತೆ ಪ್ರಮಾಣ ಹೆಚ್ಚಿರುವ ಸಾಧ್ಯತೆ ಇದೆ. ಮಹಿಳೆಯರಲ್ಲಿನ ರಕ್ತಹೀನತೆ ನಿವಾರಣೆಗೆ ಹೆಚ್ಚಿನ ಕಾಳಜಿ ತೋರಬೇಕಾಗಿದೆ. ಭವಿಷ್ಯದಲ್ಲಿ ಸದೃಢ ಭಾರತ ನಿರ್ಮಾಣ ದೃಷ್ಟಿಯಿಂದ ಸರ್ಕಾರಗಳು ಅಪೌಷ್ಟಿಕತೆ ಮಹಾಮಾರಿ ವಿರುದ್ಧ ಸಮರ ಸಾರಬೇಕಿದೆ. ಅಪೌಷ್ಟಿಕತೆ ನಿವಾರಣೆ ಕೆಲಸ ಕೇವಲ ಸರ್ಕಾರಿ ಕಾರ್ಯಕ್ರಮವಾಗಿ ದಾಖಲೆಗಳಿಗೆ ಸೀಮಿತವಾಗದೆ, ಪೌಷ್ಟಿಕ ಹಾಗೂ ಪೂರಕ ಆಹಾರ, ಔಷಧೋಪಚಾರ ಅಪೌಷ್ಟಿಕ ಮಕ್ಕಳಿಗೆ ಸಕಾಲಕ್ಕೆ-ಸಮರ್ಪಕವಾಗಿ ತಲುಪಬೇಕಾಗಿದೆ. ಇದರ ಬಳಕೆ, ಜಾಗೃತಿ, ಕಾಳಜಿ ಹಾಗೂ ಶಿಸ್ತಿನ ಮೇಲುಸ್ತುವಾರಿ ಅಗತ್ಯವಾಗಿದೆ.