ಕಳೆದ ಭಾನುವಾರ ವಿಶ್ವ ಕ್ಷಯರೋಗ ದಿನವಿತ್ತು. 2025ರ ವೇಳೆಗೆ ಕ್ಷಯರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂಬ ಗುರಿಯನ್ನು ಭಾರತ ಹಾಕಿಕೊಂಡಿದೆ. ಆ ನಿಟ್ಟಿನಲ್ಲಿ ಪ್ರಯತ್ನಗಳನ್ನೂ ನಡೆಸಿದೆಯಾದರೂ, ಸದ್ಯದ ವೇಗ ಮತ್ತು ಪ್ರಗತಿಯನ್ನು ನೋಡಿದರೆ, ಅಂದುಕೊಂಡ ಸಮಯದಲ್ಲಿ ರೋಗ ನಿರ್ಮೂಲನೆ ಸಾಧ್ಯವಿಲ್ಲವೆನಿಸುತ್ತದೆ ಎನ್ನುತ್ತಿದೆ ಅಧ್ಯಯನ ಸಂಸ್ಥೆ “ದಿ ಲ್ಯಾನ್ಸೆಟ್’ನ ವರದಿ.
ಸ್ವಾತಂತ್ರಾನಂತರದ ಏಳು ದಶಕಗಳ ನಂತರವೂ ಕ್ಷಯ ಅಥವಾ ಟಿಬಿ ರೋಗ ದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ ಎನ್ನುವುದು ನಿಜಕ್ಕೂ ಗಂಭೀರ ವಿಷಯವೇ ಸರಿ. ಪ್ರತಿ ವರ್ಷ ಸಾವಿರಾರು, ಕೆಲವೊಮ್ಮೆ ಲಕ್ಷಾಂತರ ಜನರು ಈ ರೋಗದಿಂದ ಮೃತಪಟ್ಟರೆ, ಅದಕ್ಕಿಂತಲೂ ಹೆಚ್ಚು ಜನರು ಕ್ಷಯದ ಕಪಿಮುಷ್ಟಿಗೆ ಸಿಲುಕುತ್ತಿದ್ದಾರೆ. ದುರಂತವೆಂದರೆ, ಕ್ಷಯರೋಗದಿಂದ ಆಸ್ಪತ್ರೆಗೆ ಸೇರುವವರಿಗಿಂತಲೂ, ಆಸ್ಪತ್ರೆಗೆ ಕಾಲಿಡದ ರೋಗಿಗಳ ಸಂಖ್ಯೆ ಅಧಿಕವಿರುವುದು. ಈ ಕಾರಣಕ್ಕಾಗಿಯೇ ಈಗ ಹಲವು ಪ್ರಶ್ನೆಗಳು ಏಳಲಾರಂಭಿಸಿವೆ. ಅದೇಕೆ ಭಾರತಕ್ಕೆ ಕ್ಷಯದಿಂದ ಮುಕ್ತಿ ಪಡೆಯಲು ಸಾಧ್ಯವಾಗುತ್ತಿಲ್ಲ ಎನ್ನುವುದು ಪ್ರಮುಖ ಪ್ರಶ್ನೆ. ಕ್ಷಯದಂಥ ರೋಗ ಸ್ವತ್ಛತೆ ಮತ್ತು ಸ್ವಾಸ್ಥ್ಯದೊಂದಿಗೆ ನೇರ ಸಂಬಂಧ ಹೊಂದಿದೆ. ದುಃಖದ ವಿಷಯವೇನೆಂದರೆ ಈ ಎರಡೂ ಸಂಗತಿಗಳಲ್ಲೂ ಈಗಲೂ ಭಾರತದ ಸ್ಥಿತಿ ದಯನೀಯವೇ ಆಗಿದೆ. ಕಳೆದ ವರ್ಷ ವಿಶ್ವ ಕ್ಷಯರೋಗ ದಿನದಂದು ಭಾರತ 2025ರೊಳಗೆ ಭಾರತವನ್ನು ಕ್ಷಯಮುಕ್ತಗೊಳಿಸುವ ಸಂಕಲ್ಪ ಮಾಡಿತಾದರೂ, ವಸ್ತುಸ್ಥಿತಿ ಭಿನ್ನವಾಗಿಯೇ ಇದೆ. ಮೊದಲನೆಯದಾಗಿ, ಈ ಬೃಹತ್ ಕಾರ್ಯಕ್ಕೆ ಸಮಯ ಚಿಕ್ಕದಿದೆ. ಇದಕ್ಕಾಗಿ ವಿಶಾಲ ಕಾರ್ಯಪಡೆ ಮತ್ತು ಭಾರೀ ಆರ್ಥಿಕ ಸಹಾಯದ ಅಗತ್ಯವಿರುತ್ತದೆ. ಇವುಗಳ ಅಭಾವವಿದ್ದಾಗ ಉಳಿದೆಲ್ಲ ಪ್ರಯತ್ನಗಳೂ ನಿರರ್ಥಕವೆಂದೆನಿಸುತ್ತವೆ.
ಪ್ರಪಂಚದ 27 ಪ್ರತಿಶತ ಟಿಬಿ ರೋಗಿಗಳು ಭಾರತದಲ್ಲೇ ಇದ್ದಾರೆ ಎನ್ನುತ್ತವೆ ಅಂಕಿಅಂಶಗಳು. ದುರಂತವೆಂದರೆ, ಬಹುದೊಡ್ಡ ಸಮಸ್ಯೆ ಇರುವುದೇ ಟಿಬಿಯ ಡಯಾಗ್ನೊಸಿಸ್‌ನಲ್ಲಿ. ಬಹುತೇಕ ಪ್ರಕರಣಗಳಲ್ಲಿ ರೋಗ ಒಳಗೆ ಹರಡುತ್ತಿದ್ದರೂ ರೋಗಿಗಳೂ ಅದನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಅಥವಾ ಪರೀಕ್ಷೆಗೆ ಒಳಪಡಬೇಕು ಎನ್ನುವಷ್ಟು ರೋಗ ಲಕ್ಷಣಗಳು ತೀವ್ರವಾಗಿ ಇರುವುದಿಲ್ಲ. ಬಹುತೇಕ ಬಾರಿ ರೋಗ ಉಲ್ಬಣಗೊಂಡಾಗಲೇ ಜನರು ವೈದ್ಯರೆಡೆಗೆ ತೆರಳುತ್ತಾರೆ. ಹೀಗೆ, ಪರಿಸ್ಥಿತಿ ಕೈಮೀರಿದ ಮೇಲೆಯೇ ದವಾಖಾನೆಗಳತ್ತ ದೌಡಾಯಿಸುವವರ ಸಂಖ್ಯೆ ಸುಮಾರು 40 ಪ್ರತಿತದಷ್ಟಿದೆ ಎನ್ನುವ ಅಂದಾಜಿದೆ. ಹತ್ತು ಪ್ರತಿಶತ ಜನರಿಗೆ ಅನೇಕ ದಿನಗಳ ನಂತರ ರೋಗ ಪತ್ತೆ ಸಾಧ್ಯವಾಗುತ್ತದೆ. ಅಲ್ಲಿಯವರೆಗೂ ಅವರು ತಾತ್ಕಾಲಿಕ ಔಷಧೋಪಾಯಗಳನ್ನೇ ಅವಲಂಬಿಸಿರುತ್ತಾರೆ.
ಸಮಸ್ಯೆಯ ಮೂಲವಿರುವುದೇ ಇಲ್ಲಿ, ಜನರಲ್ಲಿ ಟಿಬಿ ರೋಗದ ಬಗ್ಗೆ ಜಾಗೃತಿ ಮೂಡಿಲ್ಲ. ನಗರ ಪ್ರದೇಶಗಳಲ್ಲಂತೂ ಜನರು ಆಸ್ಪತ್ರೆಗಳಿಗೆ ಹೋಗಿಬಿಡುತ್ತಾರೆ. ಆದರೆ ಗ್ರಾಮೀಣ ಭಾಗಗಳಲ್ಲಿ ರೋಗ ತೀವ್ರವಾಗುವವರೆಗೂ ಆಸ್ಪತ್ರೆಯ ಕಡೆ ಸುಳಿಯುವುದಿಲ್ಲ. ಅಥವಾ ತಮಗೆ ತಿಳಿದ ಮದ್ದಿಗೆ ಮೊರೆ ಹೋಗಿಬಿಡುತ್ತಾರೆ. ಇಂಥ ಸಮಯದಲ್ಲೇ ಕ್ಷಯ ಇನ್ನೊಬ್ಬರಿಗೆ ಅಪಾಯ ಒಡ್ಡುವಷ್ಟು ಪ್ರಬಲವಾಗಿಬಿಡುತ್ತದೆ.
ಹಾಗೆಂದು ಕ್ಷಯವೇನೂ ಗುಣಪಡಿಸಲಾಗದಂಥ ಮಹಾಮಾರಿಯೇನೂ ಅಲ್ಲ. ಪೊಲಿಯೋ, ಸಿಡುಬಿನಂಥ ರೋಗಗಳನ್ನೂ ನಾವು ಹೊಡೆದೋಡಿಸಿದ್ದೇವೆ. ಹಾಗಾಗಿ, ರೋಗಕ್ಕಿಂತಲೂ, ರೋಗ ಪತ್ತೆಯ ವಿಷಯದಲ್ಲಿ ಆಗುತ್ತಿರುವ ವಿಳಂಬ, ಜನರಲ್ಲಿನ ಜಾಗೃತಿಯ ಕೊರತೆ, ಆಸ್ಪತ್ರೆಗಳ ಮೇಲೆ ಅವರಿಗಿರುವ ಅಪನಂಬಿಕೆ, ಪ್ರದೂಷಣೆ ಇವೆಲ್ಲವೂ ಕಾರಣಗಳಾಗಿವೆ. ಇಲ್ಲಿ ಪ್ರಮುಖವಾಗಿ ಸರ್ಕಾರಿ ಯಂತ್ರದ ಪಾತ್ರ ಮುಖ್ಯವಾಗುತ್ತದೆ. ದೇಶದ ಗ್ರಾಮೀಣ, ಆದಿವಾಸಿ ಪ್ರದೇಶಗಳಲ್ಲಿ, ಮಾಲಿನ್ಯ ಅಧಿಕವಿರುವ ಜಾಗಗಳಲ್ಲಿನ ಹೆಚ್ಚಿನ ಜಾಗೃತಿ ಉಂಟುಮಾಡಬೇಕಾದ ಅಗತ್ಯವಿದೆ. ಟಿ.ಬಿ.ಯನ್ನು ನಿರ್ದಿಷ್ಟ ಅವಧಿಯೊಳಗೆ ನಿರ್ಮೂಲನೆ ಮಾಡುವ ಕನಸು ನನಸಾಗಬೇಕೆಂದರೆ, ಪೊಲಿಯೋ ವಿಷಯದಲ್ಲಿ ನಡೆದ ಮನೆ-ಮನೆಗೆ ಸುತ್ತುವಂಥ ಅಭಿಯಾನವು ಇಲ್ಲೂ ಆಗಬೇಕಿದೆ.