ರಾಯಚೂರು: ಮಹಿಳೆಯರು ಹಾಗೂ ಮಕ್ಕಳ ಅನೈತಿಕ ಸಾಗಣೆ ಒಂದು ಸಾಮಾಜಿಕ ಪಿಡುಗು. ಈ ಅಕ್ರಮ ಜಾಲದ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಮಹಾಜನ ಆರ್.ಎ ತಿಳಿಸಿದರು.
ನಗರದ ಕೃಷಿ ವಿವಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಹಿಳೆಯರ ಮತ್ತು ಮಕ್ಕಳ ಸಾಗಣೆ ತಡೆಗಟ್ಟುವ ಬಗ್ಗೆ ಶುಕ್ರವಾರ ಹಮ್ಮಿಕೊಂಡಿದ್ದ ಕ್ಷೇತ್ರ ಮಟ್ಟದ ಭಾಗಿದಾರರಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು, ಮಕ್ಕಳ ಅನೈತಿಕ ಸಾಗಣೆಯನ್ನು ಅನೈತಿಕ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಇದರಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಬಡವರು, ಗ್ರಾಮೀಣ ಪ್ರದೇಶಗಳ ಮಕ್ಕಳು ಮತ್ತು ಮಹಿಳೆಯರು ಕಳ್ಳ ಸಾಗಣೆ ಜಾಲಕ್ಕೆ ಸಿಲುಕುತ್ತಿದ್ದಾರೆ. ಪರಿಚಯಿಸ್ಥರಿಂದಲೇ ಈ ಕೃತ್ಯ ನಡೆಯುತ್ತಿದ್ದು, ಪೋಷಕರ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಈ ಪಿಡುಗು ತಡೆಗಟ್ಟುವುದು ಸಮಾಜದ ಎಲ್ಲ ನಾಗರಿಕರ ಕರ್ತವ್ಯ. ಕಾನೂನಿನ ಸಮರ್ಪಕ ಜಾರಿಯಿಂದ ಈ ಪಿಡುಗು ನಿಯಂತ್ರಿಸಬಹುದು ಎಂದರು.
ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗೆ ಸರ್ಕಾರೇತರ ಸಂಘ-ಸಂಸ್ಥೆಗಳು ಕೈ ಜೋಡಿಸಬೇಕು. ಜಿಲ್ಲೆಯ 6 ತಾಲೂಕುಗಳಲ್ಲಿ ಬಡತನ ನಿರ್ಮೂಲನೆ ಸೇರಿದಂತೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. ಈ ಯೋಜನೆಗಳನ್ನು ಪ್ರತಿಯೊಬ್ಬ ನಿರ್ಗತಿಕ ಮಹಿಳೆಯರು ಸಾಂತ್ವನ ಕೇಂದ್ರಗಳು, ಸ್ವಾಧಾರಿತ ಕೇಂದ್ರಗಳು, ಸ್ತ್ರೀಶಕ್ತಿ ಸಂಘಗಳು, ಅಂಗನವಾಡಿ ಕೇಂದ್ರಗಳು ಹಾಗೂ ಸರ್ಕಾರೇತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ಕೇಂದ್ರಗಳಿಗೆ ಭೇಟಿ ನೀಡಿ ಸೌಲಭ್ಯ ಪಡೆಯಬೇಕು ಎಂದರು.
ಮಕ್ಕಳ ಹಿರಿಯ ಕಲ್ಯಾಣಾಧಿಕಾರಿ ವೆಂಕಟೇಶ, ಜಿಲ್ಲಾ ಮಕ್ಕಳ ಸಮಿತಿ ಸದಸ್ಯೆ ಮಂಗಳಾ ಹೊಣೆ, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಈರಮ್ಮ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮನ್ಸೂರ್ ಅಹ್ಮದ್, ಸಂಪನ್ಮೂಲ ವ್ಯಕ್ತಿ ಸುದರ್ಶನ, ಇಲಾಖೆಯ ಸಿಬ್ಬಂದಿ ಕ್ಷೀರಲಿಂಗಪ್ಪ, ಹನುಮೇಶ, ಶಿವರಾಜ, ಶ್ರೀದೇವಿ ಸೇರಿ ಇತರರಿದ್ದರು.