Advertisement

ಮತದಾನ ಪ್ರಮಾಣ ಹೆಚ್ಚಳಕ್ಕೆ ಜಾಗೃತಿ

05:28 PM Feb 10, 2018 | Team Udayavani |

ಯಾದಗಿರಿ: ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವ ಸಲುವಾಗಿ ವ್ಯಾಪಕ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ| ಅವಿನಾಶ ಮೆನನ್‌ ರಾಜೇಂದ್ರನ್‌ ಸೂಚಿಸಿದರು. ನಗರದ ಜಿಪಂ ಸಭಾಂಗಣದಲ್ಲಿ ನಡೆದ ಕ್ರಮಬದ್ಧ ಮತದಾರರ ಶಿಕ್ಷಣ ಮತ್ತು ಪಾಲ್ಗೊಳ್ಳುವಿಕೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಮತದಾನ ಪ್ರಮಾಣ ಹೆಚ್ಚಿಸಲು ಶಾಲಾ-ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ, ರಸ ಪ್ರಶ್ನೆ, ಭಾಷಣ ಸ್ಪರ್ಧೆ ಮುಂತಾದವುಗಳನ್ನು ಏರ್ಪಡಿಸುವುದರ ಮೂಲಕ ಜಾಗೃತಿ ಮೂಡಿಸಬೇಕು. ಶಾಲಾ ಮಕ್ಕಳಿಂದ ಅಣಕು ಮತದಾನದ ಮಾಡಿಸುವ ಮೂಲಕ ಪೋಷಕರಲ್ಲೂ ಅರಿವು ಮೂಡಿಸಬೇಕು ಎಂದು ಅವರು ಕರೆ ನೀಡಿದರು.

ಮತದಾನ ನಡೆಯುವಂತಹ ಶಾಲಾ-ಕಾಲೇಜುಗಳಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು. ಯಾವ ಯಾವ ಶಾಲೆಗಳಲ್ಲಿ
ಕುಡಿಯುವ ನೀರು ಶೌಚಾಲಯ, ರ್‍ಯಾಂಪ್‌, ವಿದ್ಯುತ್‌, ನೆರಳು, ಪಿಠೊಪಕರಣಗಳು ಕಲ್ಪಿಸಬೇಕಿದೆ ಹಾಗೂ ಕಟ್ಟಡಗಳ ದುರಸ್ತಿ ಆಗಬೇಕಿದೆ ಎಂಬ ಬಗ್ಗೆ ಶಿಕ್ಷಕರಿಂದ ಮಾಹಿತಿ ಪಡೆದರು. ಪ್ರಮುಖವಾಗಿ ಹೆಚ್ಚು ಮೆಟ್ಟಿಲು ಇರುವ ಶಾಲೆಗಳಲ್ಲಿ ಹಿರಿಯ ಮತದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 3 ಅಡಿ ಅಗಲದ ರ್‍ಯಾಂಪ್‌ನ್ನು ನಿರ್ಮಿಸಬೇಕು. ಸಿಮೆಂಟ್‌ನಿಂದ ನಿರ್ಮಿಸಿ, ಎರಡೂ ಬದಿಗೆ ಕಬ್ಬಿಣದ ಗ್ರಿಲ್‌ ಹಾಕಿಸಬೇಕು ಎಂದು ಕ್ರಮಬದ್ಧ ಮತದಾರರ ಶಿಕ್ಷಣ ಮತ್ತು ಪಾಲ್ಗೊಳ್ಳುವಿಕೆ ಸಮಿತಿ ಅಧ್ಯಕ್ಷರೂ ಆದ ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಮಷೂರ, ಕಕ್ಕೇರಾ, ಕೊಂಕಲ್‌ ಹಾಗೂ ಸುರಪುರ ಮತ ಕ್ಷೇತ್ರದ ವಿವಿಧ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದಿರುವ ಬಗ್ಗೆ ಶಿಕ್ಷಕರು, ಸಮಿತಿಯ ಅಧ್ಯಕ್ಷರ ಗಮನಕ್ಕೆ ತಂದರು. ಇವುಗಳೆಲ್ಲ ಸಮಸ್ಯೆಗಳನ್ನು ಫೆಬ್ರುವರಿ 20ರೊಳಗೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕೆಂದು ಅವರು ಸೂಚಿಸಿದರು.

ಸಭೆಯಲ್ಲಿ ಶಿಕ್ಷಣ ಇಲಾಖೆ ಜಿಲ್ಲಾ ಸಹಾಯಕ ಸಮನ್ವಯಾಧಿಕಾರಿ ಮಾರುತಿ ಹುಜರತಿ ಸ್ವಾಗತಿಸಿದರು. ಸ್ವೀಪ್‌ ಸಮಿತಿಯ ಸದಸ್ಯರು, ಶಿಕ್ಷಣ ಇಲಾಖೆ ಅಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳು, ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿಗಳು ಮುಂತಾದವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next