Advertisement

“ಗ್ರಂಥಾಲಯ ಸಪ್ತಾಹದಿಂದ ಸಾರ್ವಜನಿಕರಲ್ಲಿ ಜಾಗೃತಿ’

10:47 PM Nov 16, 2019 | Sriram |

ಉಡುಪಿ: ಭಾರತದ ಗ್ರಂಥಾಲಯ ಪರಂಪರೆಯಲ್ಲಿ ಋಷಿ -ಮುನಿಗಳ ಪಾತ್ರ ಮುನಿಗಳ ಪಾತ್ರ ಬಹಳ ಮಹತ್ವದಾಗಿದ್ದುದರಿಂದ ಇದು ಜ್ಞಾನ ಸಂಪನ್ನವಾದ ದೇಶವಾಗಿದೆ. ಜಿಲ್ಲೆಯಲ್ಲಿ ಡಿಜಿಟಲ್‌ ಗ್ರಂಥಾಲಯಗಳ ಬಗ್ಗೆ ಮಾಹಿತಿ ನೀಡುವ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಿಂದ ಸಾರ್ವಜನಿಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಲಿದೆ ಎಂದು ಜಿ.ಪಂ. ಅಧ್ಯಕ್ಷ ದಿನಕರ್‌ ಬಾಬು ಹೇಳಿದರು.

Advertisement

ಸಾರ್ವಜನಿಕ ಗ್ರಂಥಾಲಯ ಇಲಾಖೆ, ಉಡುಪಿ ಜಿಲ್ಲಾ ಕೇಂದ್ರ ಗ್ರಂಥಾಲಯ ವತಿಯಿಂದ ಬ್ರಹ್ಮಗಿರಿಯ ಲಯನ್ಸ್‌ ಭವನದಲ್ಲಿ ಶನಿವಾರ ಜರಗಿದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಡಿಜಿಟಲ್‌ ಗ್ರಂಥಾಲಯಗಳ ಮಹತ್ವ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಂಥಾಲಯ ಪಿತಾಮಹ ಎಸ್‌.ಆರ್‌.ರಂಗನಾಥನ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಶಾಸಕ ರಘುಪತಿ ಭಟ್‌, ಗ್ರಂಥಾಲಯಗಳು ನಿರ್ಲಕ್ಷ್ಯ ಮಾಡಲ್ಪಟ್ಟಂತಹ ವಿಭಾಗಗಳಾಗಿವೆ. ವಾಸ್ತವವಾಗಿ ಗ್ರಂಥಾಲಯಗಳಿಗೆ ಪ್ರಥಮ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ ಗ್ರಂಥಾಲಯಗಳ ಡಿಜಿಟಲೀಕರಣ, ಹೊಸ ಗ್ರಂಥಾಲಯ ಕಟ್ಟಡ ನಿರ್ಮಾಣದಂತಹ ಕೆಲಸಗಳು ನಡೆಯುತ್ತಿರುವುದು ಸಂತೋಷದ ವಿಚಾರ. ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಒಳ್ಳೆಯ ಕಥೆ-ಕಾದಂಬರಿಗಳನ್ನು ಓದುವ ಪ್ರವೃತ್ತಿಯನ್ನು ಮನೆಯ ಹಿರಿಯರು ಬೆಳೆಸಬೇಕು ಎಂದು ಹೇಳಿದರು.

ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್‌ ಪೂಜಾರಿ, ಉಡುಪಿ ಜಿಲ್ಲಾ ಘಟಕದ ಕ.ಸಾ.ಪ. ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ಉಪಸ್ಥಿತರಿದ್ದರು.

ಎಂ.ಜಿ.ಎಂ. ಕಾಲೇಜಿನ ಪ್ರಾಧ್ಯಾಪಕ ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಡಿಜಿಟಲ್‌ ಗ್ರಂಥಾಲಯಗಳ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.

Advertisement

ಗ್ರಂಥಾಲಯ ಇಲಾಖೆಯ ನಿವೃತ್ತ ಸಿಬಂದಿ ಮಹಾಬಲ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

ಪೂರ್ಣಪ್ರಜ್ಞ ಕಾಲೇಜಿನ ಪ್ರಾಧ್ಯಾಪಕಿ ಸೌಜನ್ಯಾ ನಿರೂಪಿಸಿದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ. ಸ್ವಾಗತಿಸಿದರು. ಶಕುಂತಳಾ ಕುಂದರ್‌ ವಂದಿಸಿದರು.

ಗ್ರಂಥಾಲಯದಲ್ಲಿ ಸಮಯ ಹೂಡಿಕೆ ಮಾಡಿ
ಜಿಲ್ಲಾಧಿಕಾರಿ ಜಿ.ಜಗದೀಶ್‌ ಮಾತನಾಡಿ, ಹೆಚ್ಚಿನ ಪ್ರಮಾಣದ ಓದುಗರಿಲ್ಲದೆ ಗ್ರಂಥಾಲಯಗಳು ಇಂದು ಸ್ಮಾರಕಗಳಾಗುತ್ತಿವೆ. ಗ್ರಂಥಾಲಯಗಳು ಸ್ಮಾರಕಗಳ ಪಟ್ಟಿಗೆ ಸೇರಿದರೆ ಸಮಾಜದ ನೈತಿಕ ಅಧಃಪತನವಾಗುವುದು ಖಂಡಿತ. ವಿದ್ಯಾರ್ಥಿಗಳು ದಿನಪತ್ರಿಕೆ, ಮ್ಯಾಗಜೀನ್‌ ಮತ್ತು ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಯುವ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಸಮಯವನ್ನು ವ್ಯರ್ಥ ಮಾಡುವ ಬದಲು ಗ್ರಂಥಾಲಯಗಳಿಗೆ ತೆರಳಿ ಹೆಚ್ಚು ಸಮಯವನ್ನು ಹೂಡಿಕೆ ಮಾಡಿದಲ್ಲಿ ಜೀವನದಲ್ಲಿ ಸಾಧನೆ ಮಾಡಿ ಯಶಸ್ಸು ಕಂಡುಕೊಳ್ಳಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next