ಕೋಲಾರ: ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಮೇ.31 ರಂದು ಜಗತ್ತಿನಾದ್ಯಂತ ಆಚರಿಸಲಾಗುತ್ತಿದ್ದು, ಈ ಬಾರಿ ತಂಬಾಕು ಮತ್ತು ಶ್ವಾಸಕೋಶದ ಆರೋಗ್ಯ ಘೋಷಣೆಯಡಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಇದಲ್ಲದೆ ತಂಬಾಕು ಸೇವನೆಯಿಂದ ಪಾರ್ಶ್ವವಾಯು, ಹೃದಯಾಘಾತ, ಶ್ವಾಸಕೋಶದ ಕಾಯಿಲೆ, ಕುರುಡುತನ ಹಾಗೂ ಬೇರೆ ಕಾಯಿಲೆಗಳಿಗೂ ಹರಡುತ್ತಿದೆ. ಒಂದು ಅಂದಾಜಿನ ಪ್ರಕಾರ ತಂಬಾಕು ಸೇವನೆ ಮಾಡುವರು ಹತ್ತು ವರ್ಷ ವಯಸ್ಸಾದಂತೆ ಕಾಣಿಸುತ್ತಾರೆ, ಹತ್ತು ವರ್ಷ ಬೇಗನೆ ಸಾಯುತ್ತಾ ರೆಂದು ಹೇಳಲಾಗಿದೆ.
ತಂಬಾಕಿನಲ್ಲಿ ಏನಿದೆ: ಸಿಗರೇಟಿನಲ್ಲಿ 4 ಸಾವಿರಕ್ಕೂ ಅಧಿಕ ರಾಸಾಯನಿಕಗಳಿದ್ದು, ಈ ಪೈಕಿ 400 ರಷ್ಟು ವಿಷದ ವಸ್ತುಗಳಿವೆ. ಒಂದು ಪ್ಯಾಕೇಟ್ ಗುಟ್ಕಾ, ಕೈನಿಯಲ್ಲಿ 3 ಸಾವಿರದಷ್ಟು ರಾಸಾಯನಿಕಗಳಿದ್ದು, ಪ್ರತಿ ಸೇವನೆಯಿಂದ ಜೀವನದ 4 ನಿಮಿಷದ ಆಯಸ್ಸನ್ನು ಕಡಿಮೆ ಮಾಡುತ್ತದೆ. ನಿಕೋಟಿನ್ ಒಂದು ವ್ಯಸನವಾಗಿದ್ದು, ಇದು ವ್ಯಕ್ತಿಯನ್ನು ತಂಬಾಕಿನ ಗುಲಾಮನನ್ನಾಗಿ ಮಾಡುತ್ತದೆ.
ತಂಬಾಕು ಸೇವನೆ ದುರಭ್ಯಾಸದಿಂದ ಜನರ ಆರೋಗ್ಯ ಆತಂಕಕಾರಿಯಾಗಿದ್ದು, ಬಡವ, ಬಲ್ಲಿದ, ಹೆಣ್ಣುಗಂಡು ಬೇಧವಿಲ್ಲದೆ ಎಲ್ಲಾ ವರ್ಗದ ಜನರನ್ನು ಚಟದ ದಾಸರನ್ನಾಗಿ ಮಾಡಿಕೊಳ್ಳುತ್ತಿದೆ. ಈ ದುಷ್ಪರಿಣಾಮಗಳಿಂದ ಪಾರಾಗಲು ಚಟ ಹೊಂದಿರುವವರು ತಮ್ಮ ನಡವಳಿಕೆಗಳನ್ನು ಬದಲಾಯಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ.
Advertisement
10 ಲಕ್ಷ ಮಂದಿ ಸಾವು: ಪ್ರತಿ ನಿತ್ಯವೂತಂಬಾಕು ಸೇವನೆಯಿಂದ 2200 ಕ್ಕೂ ಹೆಚ್ಚು ಭಾರತೀಯರು ಸಾಯುತ್ತಿದ್ದು, ವರ್ಷವೊಂದರಲ್ಲಿ 10 ಲಕ್ಷಕ್ಕೂ ಅಧಿಕ ಭಾರತೀಯರು ತಂಬಾಕು ಸೇವನೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಜಗತ್ತಿನಲ್ಲಿ ಜನರ ಸಾವಿಗೆ ಅತಿದೊಡ್ಡ ಕಾರಣವಾಗಿರುವ ತಂಬಾಕು ಸೇವನೆಯಿಂದಾಗಿ ಶೇ.40 ರಷ್ಟು ಕ್ಯಾನ್ಸರ್, ಶೇ.90ರಷ್ಟು ಬಾಯಿ ಕ್ಯಾನ್ಸರ್ ಕಾರಣವಾಗುತ್ತಿದೆ.
Related Articles
Advertisement
ನಿಯಂತ್ರಣ: ಕೋಲಾರ ಜಿಲ್ಲೆಯಲ್ಲಿರುವ ತಂಬಾಕು ನಿಯಂತ್ರಣ ಘಟಕವು ತಂಬಾಕು ಸೇವನೆಯಿಂದ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಹದಿಹರೆಯದವರಲ್ಲಿ ಅರಿವು ಮೂಡಿಸಿ ವ್ಯಸನಕ್ಕೆ ಒಳಗಾಗದಂತೆ ಮಾಡುವ ಸಲುವಾಗಿ 120 ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
6220 ಪ್ರಕರಣ: ಜಿಲ್ಲೆಯಲ್ಲಿ 2018-19 ನೇ ಸಾಲಿನಲ್ಲಿ ಕೋಟ್ಪಾ ಕಾಯ್ದೆಯ ಉಲ್ಲಂಘನೆಗಳ ವಿರುದ್ಧ ಪೊಲೀಸ್ ಇಲಾಖೆ ಮತ್ತು ಆರೋಗ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಒಟ್ಟು 6220 ಪ್ರಕರಣಗಳನ್ನು ದಾಖಲಿಸಿ, 3,72,135ರೂ. ದಂಡ ವಸೂಲು ಮಾಡಲಾಗಿದೆ.
697 ವ್ಯಸನ ಮುಕ್ತ: ತಂಬಾಕು ಸೇವನೆ ವ್ಯಸನಕ್ಕೆ ಒಳಗಾಗಿರುವರಿಗೆ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯ ಕೊಠಡಿ ಸಂಖ್ಯೆ 53 ರಲ್ಲಿ ವ್ಯಸನ ಮುಕ್ತ ಕೇಂದ್ರವನ್ನು ಆರಂಭಿಸಲಾಗಿದೆ. ಉಚಿತವಾಗಿ ಆಪ್ತ ಸಮಾಲೋಚನೆ ಮತ್ತು ನಿಕೋಟಿನ್ ರೀಪ್ಲೇಸ್‌ಮೆಂಟ್ ಥೆರಫಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಈವರೆವಿಗೂ 3,698 ವ್ಯಸನಿಗಳಿಗೆ ಆಪ್ತ ಸಮಾಲೋಚನೆ ಮಾಡಿದ್ದು, ಇದರಲ್ಲಿ 697 ಮಂದಿ ವ್ಯಸನ ಬಿಟ್ಟಿದ್ದಾರೆ. ಜಿಲ್ಲೆಯಾದ್ಯಂತ 48 ಗುಂಪು ಚರ್ಚೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಜಾಹೀರಾತು ಫಲಕ ತೆರವು: ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಪರೋಕ್ಷವಾಗಿ ಜಾಹೀರಾತು ಮಾಡುತ್ತಿದ್ದ 300 ಕ್ಕಿಂತ ಹೆಚ್ಚು ಜಾಹೀರಾತು ಫಲಕಗಳನ್ನು ಅಂಗಡಿ ಮಾಲೀಕರಿಗೆ ಅರಿವು ಮೂಡಿಸಿ ಅವರಿಂದಲೇ ತೆಗೆಸಲಾಗಿದೆ.
ಪೊಲೀಸರಿಗೆ ತರಬೇತಿ: ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ, ಆರೋಗ್ಯ ಇಲಾಖೆಯ ವೈದ್ಯರಿಗೆ, ಆರೋಗ್ಯ ನಿರೀಕ್ಷಕರಿಗೆ ಹಾಗೂ ಶಿಕ್ಷಕರಿಗೆ ತಂಬಾಕು ಸೇವನೆ ದುಷ್ಪರಿಣಾಮಗಳ ಕುರಿತು ಹಾಗೂ ಪರಿಣಾಮಕಾರಿ ಕೋಟ್ಪಾ ಕಾಯ್ದೆ ಅನುಷ್ಠಾನದ ಕುರಿತು ಐದು ದಿನಗಳ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ತಂಬಾಕಿನ ಉತ್ಪನ್ನಗಳಾದ ಸಿಗರೇಟು, ಬೀಡಿ, ಜಗಿಯುವ ತಂಬಾಕು ಇವುಗಳಿಂದ ಸಂಪೂರ್ಣವಾಗಿ ದೂರ ಇದ್ದು, ದೇಶದ ಯುವ ಜನತೆಯನ್ನು ಆರೋಗ್ಯವಂತರನ್ನಾಗಿ ಮಾಡುವುದು ಎಲ್ಲರ ಹೊಣೆಯಾದಾಗ ಮಾತ್ರವೇ ತಂಬಾಕು ನಿಯಂತ್ರಣ ಸಾಧ್ಯವೆಂದು ತಂಬಾಕು ನಿಯಂತ್ರಣ ಘಟಕಾಧಿಕಾರಿ ಮಹಮದ್ ಅಭಿಪ್ರಾಯಪಡುತ್ತಾರೆ.
ಇಂದು ವಿಶ್ವ ತಂಬಾಕು ರಹಿತ ದಿನಾಚರಣೆ:
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಹಾಗೂ ವಕೀಲರ ಸಂಘ ಕೋಲಾರ ಇವರ ಸಂಯುಕ್ತಾಶ್ರ ಯದಲ್ಲಿ ಮೇ 31 ರಂದು ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ಬೆಳಗ್ಗೆ ಪ್ರವಾಸಿ ಮಂದಿರ ಮುಂಭಾಗದಿಂದ ಹಮ್ಮಿಕೊಳ್ಳಲಾಗಿದೆ. ಜಾಥಾ ಕಾರ್ಯಕ್ರ ಮದ ಉದ್ಘಾಟನೆಯನ್ನು 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ನೆರವೇರಿಸುವರು. ಜಿಲ್ಲಾಧಿಕಾರಿ ಜೆ. ಮಂಜುನಾಥ್ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ. ಜಗದೀಶ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ರೋಹಿಣಿ ಕಟೋಜ್ ಸಪೆಟ್, ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರದ ಹಿರಿಯ ಸಿವಿಲ್ ನ್ಯಾಯಾಧಿಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಗಂಗಾಧರ ಚನ್ನಬಸಪ್ಪ ಹಡಪದ, ಅಪರ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್.ಎನ್. ಡಾ.ವಿಜಯ್ ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಜಿ ನಾರಾಯಣಸ್ವಾಮಿ, ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ನೋಡಲ್ ಅಧಿಕಾರಿ ಡಾ.ಚಾರಿಣಿ ಹಾಗೂ ವಕೀಲರ ಸಂಘದ ಅಧ್ಯಕ್ಷ ಟಿ.ಆರ್ ಜಯರಾಮ್ ಭಾಗವಹಿಸುವರು.
● ಕೆ.ಎಸ್.ಗಣೇಶ್