Advertisement

ಭ್ರಷ್ಟ ರಾಜಕೀಯ ವ್ಯವಸ್ಥೆ ಮುಕ್ತಿಗೆ ಜಾಗೃತಿ

02:45 PM May 01, 2022 | Team Udayavani |

ದಾವಣಗೆರೆ: ಐದು ವರ್ಷಗಳ ಕಾಲ ಏನೂ ಅಭಿವೃದ್ಧಿ ಮಾಡದೇ ಇದ್ದರೂ ಚುನಾವಣೆ ಮತ್ತು ಮತಪೆಟ್ಟಿಗೆಯನ್ನು ತಮ್ಮ ಕಡೆಗೆ ಮಾಡಿಕೊಳ್ಳುವ ಅದ್ಭುತ ತಂತ್ರಗಾರಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಕರಗತ ಮಾಡಿಕೊಂಡಿದ್ದಾರೆ ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ| ಪ್ರಕಾಶ್‌ ಕಮ್ಮರಡಿ ತಿಳಿಸಿದರು.

Advertisement

ಶನಿವಾರ ದಾವಣಗೆರೆ- ಹರಿಹರ ಅರ್ಬನ್‌ ಸಹಕಾರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಕರೆಪತ್ರ ಬಿಡುಗಡೆ ಮತ್ತು ಮುನ್ನಡೆಯತ್ತ ಚರ್ಚೆ.. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ನೇರವಾಗಿ ಚುನಾವಣೆ ಗೆಲ್ಲದ ಬಿಜೆಪಿ ಕರ್ನಾಟಕದಲ್ಲೂ ಅದೇ ತಂತ್ರಗಾರಿಕೆಯನ್ನು ಬಳಸುವ ಅಪಾಯ ಕಂಡು ಬರುತ್ತಿದೆ. ಹಾಗಾಗಿ ಪ್ರಗತಿಪರ ಚಿಂತಕರು ಸೇರಿಕೊಂಡು ಒಡೆದಾಳುವ ನೀತಿ ಮತ್ತು ಭ್ರಷ್ಟ ರಾಜಕೀಯ ಕೊನೆಗಾಣಿಸುವ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕರೆಪತ್ರ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಧರ್ಮದ ಹೆಸರಲ್ಲಿ ಮತ ಪಡೆಯುವ ಹುನ್ನಾರ ನಡೆಸಲಾಗುತ್ತಿದೆ. ಇದನ್ನೆಲ್ಲ ಗಮನಿಸಿದರೆ ಜನತಂತ್ರಕ್ಕೆ ಭವಿಷ್ಯವೇ ಇಲ್ಲ ಎಂಬ ಆತಂಕದ ವಾತಾವರಣ ಕಂಡು ಬರುತ್ತಿದೆ. ಕರ್ನಾಟಕದಲ್ಲಿ ಯಾವುದೇ ಸಂದರ್ಭ ದಲ್ಲಾದರೂ ವಿಧಾನಸಭಾ ಚುನಾವಣೆ ಬರಬಹುದು. ಬೆಲೆ ಏರಿಕೆ, ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರಕ್ಕೆ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ಇಲ್ಲ. ಹಾಗಾಗಿ ಹಿಜಾಬ್‌, ಮಾವು, ಕಲ್ಲಂಗಡಿ, ಹಲಾಲ್‌, ಜಟ್ಕಾ ಕಟ್‌ ಮುಂತಾದ ಒಡೆದಾಳುವ ನೀತಿ ಮೂಲಕ ಮತ್ತೆ ಅಧಿಕಾರಕ್ಕೆ ಬರುವ ಹುನ್ನಾರ ನಡೆಸುತ್ತಿದೆ. ಪ್ರಗತಿಪರ ರಾಜ್ಯವಾದ ಕರ್ನಾಟಕವನ್ನು ಒಡೆದಾಳುವ ನೀತಿ ಮತ್ತು ಭ್ರಷ್ಟಾಚಾರದಿಂದ ಹೊಸಶಕ್ತಿಯ ಮೂಲಕ ರಕ್ಷಿಸಬೇಕಾಗಿದೆ ಎಂದು ತಿಳಿಸಿದರು.

ಸಾಮಾಜಿಕ ಚಿಂತಕ ಶ್ರೀಪಾದಭಟ್‌ ಮಾತನಾಡಿ, ಬಿಜೆಪಿ ಕರ್ನಾಟಕವನ್ನು ಶಿಲಾಯುಗದತ್ತ ಕೊಂಡೊಯ್ಯುತ್ತಿದೆ. ಇಂತಹ ಬಿಜೆಪಿಯನ್ನು ಸೋಲಿಸಬೇಕಾಗಿದೆ. ಮತಗಳ ವಿಭಜನೆ ತಡೆಯುವ ಮೂಲಕ ಬಿಜೆಪಿಯನ್ನು ಸೋಲಿಸಬೇಕಾಗಿದೆ. ಅದಕ್ಕಾಗಿ ಹೊಸ, ಸೂಕ್ತ ತಂತ್ರಗಾರಿಕೆ ಬಳಸಬೇಕು ಎಂದು ತಿಳಿಸಿದರು.

ಮಾಜಿ ಸಚಿವೆ ಬಿ.ಟಿ. ಲಲಿತಾನಾಯ್ಕ ಮಾತನಾಡಿ, ರಾಜ್ಯ ಸರ್ಕಾರ ತನ್ನ ತಪ್ಪನ್ನು ಮುಚ್ಚಿ ಹಾಕಲು ಜನರಲ್ಲಿ ಭಯ ಹುಟ್ಟಿಸುವಂತಹ ಭಯೋತ್ಪಾದನೆ ಉಂಟು ಮಾಡುತ್ತಿದೆ. ಮತಪೆಟ್ಟಿಗೆಯಿಂದ ಪ್ರಜಾಪ್ರಭುತ್ವವನ್ನು ಹುಟ್ಟು ಹಾಕಬೇಕಾಗಿದೆ. ಬಿಜೆಪಿ ನಡೆಸುತ್ತಿರುವ ನೀತಿಗಳ ಪರಿಣಾಮ ಸಂವಿಧಾನ ನೂರಾರು ವರ್ಷಗಳ ಹಿಂದಕ್ಕೆ ಹೋಗುತ್ತಿದೆ. ಸಂವಿಧಾನ ಕೈ ಜಾರುತ್ತಿದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಂವಿಧಾನವನ್ನು ರಕ್ಷಿಸಬೇಕಾಗಿದೆ. ಪಾರದರ್ಶಕ, ಭ್ರಷ್ಟಾಚಾರ ರಹಿತರನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡೋಣ ಎಂದು ತಿಳಿಸಿದರು.

Advertisement

ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಸ್‌. ಆರ್‌. ಹಿರೇಮಠ ಮಾತನಾಡಿ, ದೇಶದಲ್ಲಿ ಧರ್ಮದ ಹೆಸರಲ್ಲಿ ಏನೇನೋ ನಡೆಸಲಾಗುತ್ತಿದೆ. ಯುವ ಸಮೂಹಕ್ಕೆ ಸಂವಿಧಾನದ ಬಗ್ಗೆ ಸಮಗ್ರವಾದ ಪರಿಕಲ್ಪನೆಯೇ ಇಲ್ಲ. ಹಾಗಾಗಿ ಸಂವಿಧಾನವನ್ನೇ ಉಳಿಸುವಂತಹ ಗಂಭೀರವಾದ ವಾತಾವರಣ ನಿರ್ಮಾಣವಾಗಿದೆ. ವ್ಯಕ್ತಿಗಿಂತಲೂ ಸಂವಿಧಾನ ಆಡಳಿತ ನಡೆಸಬೇಕಾಗಿದೆ ಎಂದು ತಿಳಿಸಿದರು.

ಆಪ್‌ ರಾಜ್ಯ ಅಧ್ಯಕ್ಷ ಪೃಥ್ವಿರೆಡ್ಡಿ ಮಾತನಾಡಿ, ಸಾಕಷ್ಟು ಸಮಸ್ಯೆಗಳಿವೆ ಎನ್ನುವುದು ನಿಜ. ಸಮಸ್ಯೆಗಳ ಬಗ್ಗೆಯೇ ಚರ್ಚೆ ಮಾಡದೆ ಮುಂದೆ ಏನು ಮಾಡಬೇಕು ಎಂಬುದರ ಚರ್ಚೆ ಹೆಚ್ಚು ನಡೆಯಬೇಕಿದೆ ಎಂದರು.

ನೆರಳು ಬೀಡಿ ಕಾರ್ಮಿಕರ ಅಸೋಸಿಯೇಷನ್‌ ಅಧ್ಯಕ್ಷೆ ಜಬೀನಾಖಾನಂ ಮಾತನಾಡಿ, ತಾಂಡವವಾಡುತ್ತಿರುವ ಸಮಸ್ಯೆಗಳ ಬದಲಿಗೆ ಹಿಜಾಬ್‌, ಹಲಾಲ್‌, ಜಟ್ಕಾ ಕಟ್‌ನಂತರ ಹೊಸ ಕುತಂತ್ರಗಳ ಮೂಲಕ ಸಮಾಜವನ್ನು ಒಡೆಯುವ, ಕೋಮು, ಜಾತಿ ಸಂಘರ್ಷದ ವಾತಾವರಣ ಕಂಡು ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ತೇಜಸ್ವಿ ಪಟೇಲ್‌ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲ ಪುರ ನಾಗೇಂದ್ರ, ರಾಜಕೀಯ ವಿಶ್ಲೇಷಕ ಎ. ನಾರಾಯಣ್‌, ಆವರಗೆರೆ ವಾಸು, ಬಲ್ಲೂರು ರವಿಕುಮಾರ್‌, ಅನೀಸ್‌ ಪಾಷ ಇತರರು ಇದ್ದರು. ಟಿ. ನುಲೇನೂರು ಶಂಕರಪ್ಪ ಸ್ವಾಗತಿಸಿದರು. ಈಚಲಘಟ್ಟ ಸಿದ್ದವೀರಪ್ಪ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next