ದಾವಣಗೆರೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಂಗಳವಾರ ದಾವಣಗೆರೆಯ ನಾಲ್ಕು ಭಾಗದಿಂದ ಏಕ ಕಾಲಕ್ಕೆ ವಾಕ್‌ಥಾನ್ ಮೂಲಕ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಲಾಯಿತು. ಗಿಡ ನೆಡಿ ಇಂದೇ… ಸುಖ ಪಡಿ ಮುಂದೆ…., ಪರಿಸರ ನಾಶ…., ಮನುಕುಲದ ವಿನಾಶ…., ಡಬಡಬ ಶಬ್ದ ಹೃದಯ ಸ್ತಬ್ಧ…, ಮನೆಗೊಂದು ಮರ….ಊರಿಗೊಂದು ವನ… ಘೋಷಣಾ ಭಿತ್ತಿಪತ್ರಗಳೊಂದಿಗೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿ ಸಮೂಹ, ಪರಿಸರ ಪ್ರೇಮಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು, ನಾಗರೀಕರು ಸಮಾಜ ಪರಿಸರ ಸಂರಕ್ಷಣೆಗೆ ಹೇಗೆ ಗಮನ ಕೊಡುವ ಬಗ್ಗೆ ವಾಕ್‌ಥಾನ್ ಜಾಗೃತಿ ಮೂಡಿಸಿತು. ನಾಲ್ಕು ದಿಕ್ಕುಗಳಿಂದ ಆಗಮಿಸಿದ ತಂಡಗಳು ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಸಮಾರೋಪಗೊಂಡವು.
ಬಿ.ಎಸ್.ಎನ್.ಎಲ್ ಕಚೇರಿ ಬಳಿ ವಾಕ್‌ಥಾನ್ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಪರಿಸರ ಮಾಲಿನ್ಯದಿಂದ ಇಂದು ಈಗಾಗಲೇ ಅನುಭವಿಸುತ್ತಿರುವ ಸಂಕಟ, ಪ್ಲಾಸ್ಟಿಕ್ ಬಳಕೆಯಿಂದಾಗುತ್ತಿರುವ ಅನಾಹುತಗಳನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟರು, ಪರಿಸರವನ್ನು ಮುಂದಿನ ದಿನಗಳಲ್ಲಿ ಹೇಗೆ ಕಾಪಾಡಿಕೊಳ್ಳಬೇಕೆಂಬ ಬಗ್ಗೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 7 ದಿನಗಳ ಕಾಲ ನಡೆಯುವ ಪರಿಸರ ಜಾಗೃತಿ ಸಪ್ತಾಹದ ರೂಪುರೇಷೆ ತಿಳಿಸಿದರು.
ಸುತ್ತಲಿನ ಪರಿಸರ, ನಗರ, ಕಚೇರಿಗಳ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಯಾವುದೇ ಒಂದು ಜೀವಿ ಬದುಕಲು ಉತ್ತಮ ಗಾಳಿ ಬೇಕು. ಅಂತಹ ಉತ್ತಮ ಗಾಳಿಯ ಉತ್ಪತ್ತಿಗೆ ಹೆಚ್ಚೆಚ್ಚು ಮರಗಳು ಬೇಕು. ಇಂದಿನಿಂದಲೇ ಸಸಿ ನೆಟ್ಟು ಬೆಳೆಸುವುದರ ಮೂಲಕ ಉತ್ತಮ ಪರಿಸರಕ್ಕೆ ನಾಂದಿ ಹಾಡೋಣ ಎಂದು ಮನವಿ ಮಾಡಿದರು.
ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಜಿ.ಎಸ್. ಷಡಕ್ಷರಪ್ಪ , ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ. ಕೋದಂಡರಾಮ ಒಳಗೊಂಡಂತೆ ಸರ್ಕಾರೇತರ ಸಂಘಟನೆ ಪದಾಧಿಕಾರಿಗಳು, ಯೋಗಪಟುಗಳು, ರೋಟರಿ, ಲಯನ್ಸ್, ಮಹಿಳಾ ಸಮಾಜದ ಪ್ರತಿನಿಧಿಗಳು ಹಲವು ಶಾಲೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.