ಚಾಮರಾಜನಗರ: ಕುಷ್ಠರೋಗ ಅರಿವು ಆಂದೋಲನದಡಿ ಕುಷ್ಠರೋಗವನ್ನು ಶಾಶ್ವತವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಕುಷ್ಠರೋಗ ವಿರೋಧಿ ಪಾಕ್ಷಿಕ ದಿನಾಚರಣೆ ಕಾರ್ಯಕ್ರಮವನ್ನು ಜ.30ರಿಂದ ಫೆ.13ರವರೆಗೆ ಜಿಲ್ಲೆಯಲ್ಲಿ ನಡೆಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ ಕುರಿತ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಕುಷ್ಠರೋಗವು ಮಾರಕವಾಗಿ ಪರಿಣಮಿಸಿದ್ದು, ಅದು ಗುಣಪಡಿಸಲಾಗದ ಕಾಯಿಲೆಯೇನಲ್ಲ. ಕುಷ್ಠರೋಗವು ವ್ಯಕ್ತಿಯ ಚರ್ಮ ಮತ್ತು ನರಗಳಿಗೆ ಅತೀ ವೇಗವಾಗಿ ಹರಡಿ ದೇಹದ ಎಲ್ಲೆಡೆ ವ್ಯಾಪಿಸುತ್ತದೆ. ಪ್ರಾರಂಭದ ಹಂತದಲ್ಲಿಯೇ ಪತ್ತೆಯಾದರೆ, ಅದರ ನಿಯಂತ್ರಣಕ್ಕಾಗಿ ನಿಯಮಿತ, ಸೂಕ್ತ ಚಿಕಿತ್ಸೆ ನೀಡಿ ಹಂತಹಂತವಾಗಿ ಕುಷ್ಠರೋಗವನ್ನು ನಿರ್ಮೂಲನೆ ಮಾಡಬಹುದು. ಜನರಿಗೆ ಈ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು.
ಜಾಗೃತಿಗಾಗಿ ಕಾರ್ಯಕ್ರಮ ಆಯೋಜಿಸಿ: ನಾಗರಿಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಪ್ರತಿನಿಧಿಗಳಿಗೆ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಬೇಕು. ಗ್ರಾಮ ಪಂಚಾಯ್ತಿಗಳಲ್ಲಿ ಜಾಥಾ ಕಾರ್ಯಕ್ರಮ ಆಯೋಜನೆ ಮಾಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲು ಕಾರ್ಯೋನ್ಮುಖರಾಗಬೇಕು ಎಂದು ಸೂಚನೆ ನೀಡಿದರು.
83 ಮಂದಿ ರೋಗಿಗಳು ಪತ್ತೆ: ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ. ರಾಜು ಮಾತನಾಡಿ, 2019-20ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಈವರೆಗೆ 83 ಮಂದಿ ಹೊಸ ರೋಗಿಗಳು ಪತ್ತೆಯಾಗಿದ್ದಾರೆ. ಇವರಿಗೆ ಬಹು ಔಷಧಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಗುಣಮುಖ ಹೊಂದಿದ ರೋಗಿಗಳ ಸಂಖ್ಯೆ 81 ಇದ್ದು, ಜಿಲ್ಲೆಯಲ್ಲಿ ರೋಗದ ಸಾಂದ್ರತೆ ಶೇ.0.68ರಷ್ಟಿದೆ. 2019-20ನೇ ಸಾಲಿನಲ್ಲಿ ರೋಗಿಗಳಿಗೆ 139 ಎಂಸಿಆರ್ ಪಾದರಕ್ಷೆ ಹಾಗೂ 72 ಸೆಲ್ಪ್ ಕೇರ್ ಕಿಟ್ ಗಳನ್ನು ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ ಕುರಿತ ಪೋಸ್ಟರ್‌ಗಳನ್ನು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಬಿಡುಗಡೆ ಮಾಡಿದರು. ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸುವ ಉದ್ದೇಶ ಕುರಿತ ಪ್ರತಿಜ್ಞಾವಿಧಿಯನ್ನು ಜಿಲ್ಲಾಧಿಕಾರಿ ಅವರು ಬೋಧಿಸಿದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಸವರಾಜು ಹಾಜರಿದ್ದರು.