Advertisement
ವೈದ್ಯಕೀಯ ಅಧ್ಯಯನಕ್ಕೆ ಶವಗಳ ತೀವ್ರ ಅಭಾವದ ಹಿನ್ನೆಲೆಯಲ್ಲಿ ಮೃತ ವ್ಯಕ್ತಿಗಳ ದೇಹದಾನ ಕೈಗೊಳ್ಳುವಂತೆ ಜನತೆಯಲ್ಲಿ ಅರಿವು ಮೂಡಿಸಲಿಕ್ಕಾಗಿ ಜನಜಾಗೃತಿ ಅಭಿಯಾನ ಕೈಗೊಳ್ಳಲು ಖಾಸಗಿ ವೈದ್ಯಕೀಯ ಕಾಲೇಜುಗಳ ವೈದ್ಯ ಸಮೂಹ ಮುಂದಾಗಿದೆ.
ಮತ್ತಷ್ಟು ಚರ್ಚೆ ಅಗತ್ಯತೆ ಇರುವುದರಿಂದ ಖಾಸಗಿ ವೈದ್ಯಕೀಯ ಕಾಲೇಜುಗಳು ಜಾಗೃತಿ ಅಭಿಯಾನದ ವಿಧಿವಿಧಾನಗಳು ಸಂಘ ಸಂಸ್ಥೆಗಳ ಪಾಲ್ಗೊಳ್ಳುವಿಕೆ, ಸರ್ಕಾರದ ಅಭಯ ಹಸ್ತ ಮುಂತಾದವುಗಳ ಬಗ್ಗೆ ಪೂರ್ವಭಾವಿ ಸಿದ್ಧತೆ ನಡೆಯುತ್ತಿದೆ. ಶವಗಳ ತೀವ್ರ ಕೊರತೆ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಎದುರಾಗಿದೆ. ಒಂದು ವರ್ಷದಲ್ಲಿ 10 ವಿದ್ಯಾರ್ಥಿಗಳ ಅಧ್ಯಯನಕ್ಕೆ ಒಂದು ಶವದ ಅವಶ್ಯಕತೆಯಿದೆ. ಅಭಾವದಿಂದಾಗಿ 25ರಿಂದ 30 ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಒಂದು ಶವ ಒದಗಿಸುವುದು ಸಹ ಪ್ರಯಾಸಕರವಾಗಿದೆ. ಹೀಗಾಗಿ ದೇಹ ದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಸಪ್ತಗಿರಿ ವೈದ್ಯಕೀಯ ಕಾಲೇಜಿನ ಡೀನ್ ಡಾ.ಜಯಂತಿ ಉದಯವಾಣಿಗೆ ತಿಳಿಸಿದ್ದಾರೆ.
Related Articles
ಕಾಲೇಜುಗಳಿಗೆ ಶವಗಳನ್ನು ಒದಗಿಸಬೇಕೆಂದು ನಿಯಮಾವಳಿ ಇರುವುದರಿಂದ ಹಾಗೂ ಅನಾಥ ಶವಗಳ ಲಭ್ಯತೆಯಲ್ಲಿ ಕೊರತೆ ಉಂಟಾಗಿರುವುದರಿಂದ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಅಧ್ಯಯನಕ್ಕೆ ಶವಗಳು ದೊರೆಯದೆ ಪರಿತಪಿಸುವಂತಾಗಿದೆ.
Advertisement
ಅಧ್ಯಯನಕ್ಕೆ ಪರದಾಟ: ರಾಜ್ಯದಲ್ಲಿ ಸುಮಾರು 56ಕ್ಕೂ ವೈದ್ಯಕೀಯ ಕಾಲೇಜುಗಳಿದ್ದು, ಅವುಗಳಲ್ಲಿ 18 ಸರ್ಕಾರಿ ಮತ್ತು 38 ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. ಇವುಗಳಲ್ಲಿ ವರ್ಷಕ್ಕೆ ಸುಮಾರು 80, 124ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಪಡೆಯುತ್ತಿದ್ದಾರೆ. ಅಂದಾಜಿನ ಪ್ರಕಾರ ಈವಿದ್ಯಾರ್ಥಿಗಳಿಗೆ ವರ್ಷಕ್ಕೆ ಕನಿಷ್ಠ 700ರಿಂದ 800 ಶವಗಳ ಅವಶ್ಯಕತೆ ಇದೆ. ವಿಪರ್ಯಾಸವೆಂದರೆ ಅದರಲ್ಲಿ ಶೇ.30ರಷ್ಟು ಶವಗಳು ಕೂಡ ವೈದ್ಯಕೀಯ ಕಾಲೇಜುಗಳಿಗೆ ಸಿಗುತ್ತಿಲ್ಲ. ಇದರಿಂದ ವೈದ್ಯ ಶಿಕ್ಷಣದಲ್ಲಿ ಅತ್ಯಗತ್ಯವಾಗಿ ಕಲಿಯಲೇಬೇಕಾದ ಅಂಗ ರಚನಾಶಾಸ್ತ್ರದ ಅಧ್ಯಯನ ನಿರೀಕ್ಷಿತ ಮಟ್ಟದಲ್ಲಿ ನಡೆಯದೆ ವಿದ್ಯಾರ್ಥಿಗಳು ಪರದಾಡುವಂಥ ಸ್ಥಿತಿಯಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಈ ವರ್ಷ, ಮುಂದಿನ ವರ್ಷಕ್ಕೆ ಬೇಕಾದಷ್ಟು ಮೃತ ದೇಹಗಳನ್ನು ಶೇಖರಿಸಿಟ್ಟುಕೊಳ್ಳಲಾಗುತ್ತಿದೆ. ಇದರಿಂದ, ಖಾಸಗಿ ಕಾಲೇಜುಗಳಿಗೆ ಶವಗಳೇ ಸಿಗುತ್ತಿಲ್ಲವೆಂಬ ಆರೋಪವಿದೆ. ವರ್ಷಕ್ಕೆ 38 ಖಾಸಗಿ ಕಾಲೇಜುಗಳಿಗೆ ಕನಿಷ್ಠ 400-500 ಶವಗಳು ಬೇಕಾಗುತ್ತವೆ. ಆದರೆ, ದೇಹದಾನ, ಅನಾಥ ಶವ ಹೀಗೆ ಲಭ್ಯವಾಗುತ್ತಿರುವ ಶವಗಳ ಸಂಖ್ಯೆ ಶೇ.15ರಿಂದ 20ರಷ್ಟು ಮಾತ್ರ. ಅಂದರೆ ವರ್ಷಕ್ಕೆ 50ರಿಂದ 70 ಶವಗಳು ಮಾತ್ರ ಎಂಬುದು ಸಪ್ತಗಿರಿ ವೈದ್ಯಕೀಯ ಕಾಲೇಜಿನ ಡೀನ್ ಡಾ.ಜಯಂತಿ ಅವರ ಅಳಲು. ದೇಹ ದಾನಿಗಳೇ ಕಡಿಮೆ: ಕಳೆದ 15-20 ವರ್ಷಗಳ ಹಿಂದೆ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಕಡಿಮೆಯಿತ್ತು. ವೈದ್ಯಕೀಯ ಶಿಕ್ಷಣ ಪಡೆಯಲು ಬರುತ್ತಿದ್ದ ವಿದ್ಯಾರ್ಥಿಗಳೂ ಕಡಿಮೆ ಇದ್ದರು. ಮುಖ್ಯವಾಗಿ ಈಗಿರುವಷ್ಟು ಕಾನೂನು ಕಠಿಣವಾಗಿರಲಿಲ್ಲ. ಕೆಲವು ವರ್ಷಗಳ ಹಿಂದೆ ಅನಾಥ ಶವಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಾರಿ ಮಾಡಲಾಗಿರುವ ಕಾನೂನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ನುಂಗಲಾರದ ಬಿಸಿ ತುಪ್ಪದಂತಾಗಿದೆ. ಇಂದಿಗೂ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅಗತ್ಯವಾದಷ್ಟು ಶವಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗಿಲ್ಲ. ಅನಾಟಮಿ ಕಾಯ್ದೆಯಲ್ಲಿ ವೈದ್ಯಕೀಯ ಅಧ್ಯಯನಕ್ಕೆ ಮೃತ ದೇಹಗಳನ್ನು ಯಾರಾದರೂ ದಾನ ಮಾಡಬಹುದೆಂಬ ನಿಯಮವಿದೆ. ಆದರೆ, ಜಾಗೃತಿ ಕೊರತೆಯಿಂದ ದೇಹದಾನ ಮಾಡುವವರ ಪ್ರಮಾಣ ಬಹಳಷ್ಟು ಕಡಿಮೆ ಇದ್ದು, ನಾಲ್ಕೈದು ವರ್ಷಕ್ಕೆ ಒಂದು ಕಾಲೇಜಿಗೆ 3ರಿಂದ 5 ಮೃತ ದೇಹಗಳು ಸಿಗುವುದೇ ಕಷ್ಟವೆನ್ನುವಂತಾಗಿದೆ. ಇತರರಿಗೆ ಪ್ರೇರಣೆ..
ಖ್ಯಾತ ಚಲನಚಿತ್ರ ನಟ ಲೋಕೇಶ್, ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾ.ಡಿ.ಎಂ. ಚಂದ್ರಶೇಖರ್, ಹಿರಿಯ ಪತ್ರಕರ್ತ ಎಂ.ಬಿ.ಸಿಂಗ್, ಹಿರಿಯ ಸಾಹಿತಿ ಸಾ.ಶಿ.ಮರುಳಯ್ಯ ವೈದ್ಯಕೀಯ ಕಾಲೇಜುಗಳಿಗೆ ದೇಹದಾನ ಮಾಡಿದ್ದು, ಮೇಲ್ಪಂಕ್ತಿ ಹಾಕಿದ್ದಾರೆ. ರಾಜ್ಯ ಸರ್ಕಾರದ ಹಿರಿಯ ಐಎಎಸ್ ಅಧಿಕಾರಿಯಾಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಮಾ.18ರಂದು ನಿಧನರಾದ ತಮ್ಮ ತಂದೆಯ ಪಾರ್ಥಿವ ಶರೀರವನ್ನು ವೈದ್ಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೀಡಿದ್ದಾರೆ. ಚಲನಚಿತ್ರ ನಟ ಶಿವರಾಜ್‌ಕುಮಾರ್ ಕೂಡ ದೇಹದಾನ ಮಾಡುವ ವಾಗ್ಧಾನ ಮಾಡಿದ್ದು, ಇತರರಿಗೆ ಪ್ರೇರಣೆಯಾಗಿದ್ದಾರೆ. ಬೆಂಗಳೂರು ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಗೆ 2014ರಿಂದ 16ರ ಸಾಲಿನಲ್ಲಿ ದಾನಿಗಳ ದೇಹದಾನದಿಂದ ಒಟ್ಟು 45 ಶವಗಳು ಲಭ್ಯವಾಗಿವೆ. ಆಸ್ಪತ್ರೆಯಿಂದ ಸಿಕ್ಕಿರುವ ಶವಗಳು 15 ಮಾತ್ರ. ಉಳಿದಂತೆ ವರ್ಷವೊಂದಕ್ಕೆ 300ರಿಂದ 500 ಗುರುತು ಪತ್ತೆಯಾಗದ ಶವಗಳು ಬಂದಿವೆ. ಆದರೆ, ಅವುಗಳನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ, (ಸಂಸ್ಕಾರ ಮಾಡಲಾಗುತ್ತಿದೆ). ಇಂತಹ ಮೃತದೇಹಗಳನ್ನು ವೈದ್ಯಕೀಯ
ವಿದ್ಯಾರ್ಥಿಗಳ ಅಧ್ಯಯನಕ್ಕೆ ಒದಗಿಸಿದರೆ ಒಳ್ಳೆಯದಿತ್ತು. ವಿಪರ್ಯಾಸವೆಂದರೆ ಕಳೆದ ಮೂರು ವರ್ಷಗಳಿಂದ ಬೆಂಗಳೂರು ವೈದ್ಯಕೀಯ ಕಾಲೇಜಿಗೆ ಯಾವುದೇ ಅನಾಥ ಶವಗಳನ್ನು ನೀಡಲಾಗಿಲ್ಲ.
– ಡಾ.ಎಸ್.ಸಚ್ಚಿದಾನಂದ,
ನಿರ್ದೇಶಕರು, ಡೀನ್,
ಬೆಂಗಳೂರು ವೈದ್ಯಕೀಯ ಮತ್ತು
ಸಂಶೋಧನಾ ಸಂಸ್ಥೆ. – ಸಂಪತ್ ತರೀಕೆರೆ