ದೇವನಹಳ್ಳಿ: ಜಿಲ್ಲೆಯಲ್ಲಿ ಬಾಲ್ಯ ವಿವಾಹದ ವಿರುದ್ಧ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ದಿಟ್ಟಹೆಜ್ಜೆ ಇಟ್ಟಿದೆ. ಜಿಲ್ಲೆಯಾದ್ಯಂತ ಬಾಲ್ಯ ವಿವಾಹದ ಅರಿವು ಮೂಡಿಸುವ ಕಾರ್ಯಗಳು ನಡೆಯುತ್ತಿವೆ.
ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಲು ಶಾಲಾ ಕಾಲೇಜು ಹಂತಗಳಲ್ಲಿ ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಮೂಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಗಟ್ಟಲು ಸಾಕಷ್ಟು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಅಧಿಕಾರಿಗಳ ಕಣ್ಣುತಪ್ಪಿಸಿ, ಬಾಲ್ಯ ವಿವಾಹಕ್ಕೆ ಮುಂದಾಗಿರುವ ಪ್ರಕರಣಗಳಿಗೆ ಚುರುಕು ಮುಟ್ಟಿಸುವ ಮೂಲಕ ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳ ಸಂಪೂರ್ಣ ನಿಯಂತ್ರಣಕ್ಕೆ ಪಣತೊಟ್ಟಿದ್ದಾರೆ.
ಮಕ್ಕಳಿಗೆ ಅಗತ್ಯ ವ್ಯವಸ್ಥೆ: ಜಿಲ್ಲೆಯ 4 ತಾಲೂಕಿನಲ್ಲೂ ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ 52 ಪ್ರಕರಣಗಳು ವರದಿಯಾಗಿದೆ. ಇದರಲ್ಲಿ 8 ಎಫ್ಐಆರ್ ಆಗಿದ್ದು, 45 ಎಫ್ಐಆರ್ ಆಗಿಲ್ಲ. 2021-22ರಲ್ಲಿ 50 ಪ್ರಕರಣ ವರದಿಯಾಗಿದೆ. ಇದರಲ್ಲಿ 16 ಪ್ರಕರಣಗಳು ಎಫ್ ಐಆರ್ ಆಗಿದೆ. 36ರಲ್ಲಿ ಆಗಿಲ್ಲ. 2022-23ರಲ್ಲಿ 18 ಪ್ರಕರಣಗಳ ವರದಿಯಾಗಿರುವ ಪೈಕಿ 2 ಎಫ್ ಐಆರ್ ಆಗಿದ್ದು, 16 ಪ್ರಕರಣಗಳಿಗೆ ಆಗಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆಯುವ ಬಾಲ್ಯ ವಿವಾಹ ತಡೆದು ಅಲ್ಲಿ ರಕ್ಷಿಸಲ್ಪಟ್ಟ ಹೆಣ್ಣು ಮಕ್ಕಳಿಗೆ ತಾಲೂಕುಗಳಲ್ಲಿರುವ ತೆರೆದ ತಂಗುದಾಣದಲ್ಲಿ ರಕ್ಷಣೆ ನೀಡಲಾಗುತ್ತದೆ. ಇಲ್ಲಿ ಈ ಮಕ್ಕಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಆ ಮಕ್ಕಳ ಶಿಕ್ಷಣ, ಅಗತ್ಯ ತರಬೇತಿ, ರಕ್ಷಣೆ, ಆಪ್ತ ಸಮಾಲೋಚನೆ ಸೇರಿದಂತೆ ಅನೇಕ ನೆರವು ನೀಡಲಾಗುತ್ತದೆ.
ಮಕ್ಕಳಿಗೆ ನಿಯಮಗಳ ಅರಿವು: ಜಿಲ್ಲೆಯಲ್ಲಿ ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ. ಇದಕ್ಕಾಗಿ ವಾರಕ್ಕೊಮ್ಮೆ ಕಾನೂನು ಅರಿವು ಎನ್ನುವ ಕಾರ್ಯಕ್ರಮ ಕೈಗೊಂಡಿದ್ದಾರೆ. ಈ ಮೂಲಕ ಜಿಲ್ಲೆಯ ಶಾಲಾ, ಕಾಲೇಜು, ಹಾಸ್ಟೆಲ್‌ಗಳ ಮಕ್ಕಳಿಗೆ ನೇರವಾಗಿ ಹಾಗೂ ಸ್ಮಾರ್ಟ್ ಕ್ಲಾಸ್ ಬಳಸಿಕೊಂಡು ತಲುಪಲು ಸಿದ್ಧತೆ ಆರಂಭಿಸಿದೆ. ಮಕ್ಕಳಿಗೆ ಬಾಲ್ಯ ವಿವಾಹಕ್ಕೆ ಕಾನೂನಿನ ನಿಯಮಗಳ ಬಗ್ಗೆ ತಿಳಿಸಲಾಗುತ್ತದೆ.
ಸುಳ್ಳು ಜನನ ದಿನಾಂಕ: ಬಾಲ್ಯ ವಿವಾಹಕ್ಕೆ ಒಳಗಾಗುವ ಹೆಣ್ಣು ಮಕ್ಕಳ ಸ್ನೇಹಿತರು, ಕೆಲವೊಮ್ಮೆ ಆ ಹೆಣ್ಣು ಮಕ್ಕಳೇ ಮಕ್ಕಳ ಸಹಾಯವಾಣಿಗೆ ಕರೆ ಮಾಡುತ್ತಾರೆ. ಇಷ್ಟರ ಮಟ್ಟಿಗೆ ಜಾಗೃತಿ ಮೂಡಿದೆ. ಆದರೆ, ಹಲವು ಪ್ರಕರಣಗಳು ಬೆಳಕಿಗೆ ಬದಿಲ್ಲ. ಇದರ ಜತೆಗೆ ಕೆಲ ಮದುವೆ ಸ್ಥಳಕ್ಕೆ ಹೋಗಿ ದಾಖಲೆ ಕೇಳಿದರೆ, ಬಾಲಕಿಯ ಆಧಾರ್ ಕಾರ್ಡ್ ಅಥವಾ ಅದರ ಜೆರಾಕ್ಸ್ ಪ್ರತಿಯಲ್ಲಿ ತಿದ್ದಿ ನೀಡುತ್ತಾರೆ. ಸುಳ್ಳು ಜನನ ದಿನಾಂಕವನ್ನು ನಮೂದಿಸಿದ ಜೆರಾಕ್ಸ್ ಮಾಡಿರುತ್ತಾರೆ. ಇದರಿಂದ ನಿಜವಾದ ವಯಸ್ಸು ತಿಳಿಯಲು ಜನನ ಪ್ರಮಾಣ ಪತ್ರ ಅಥವಾ ಟಿಸಿ, ಎಸ್ಸೆಸ್ಸೆಲ್ಸಿ ಅಂಕಪಟ್ಟಿಯನ್ನು ಪರೀಕ್ಷಿಸಲಾಗುತ್ತಿದೆ.
ಬಾಲ್ಯ ವಿವಾಹ ಅಪರಾಧಕ್ಕೆ 2 ವರ್ಷ ಜೈಲು ಹಾಗೂ ಒಂದು ಲಕ್ಷ ರೂ.ವರೆಗೂ ದಂಡ ವಿಸಬಹುದು. 2022-23ರಲ್ಲಿ ದೊಡ್ಡಬಳ್ಳಾಪುರದಲ್ಲಿ ಹೆಚ್ಚಿನ ಬಾಲ್ಯವಾಹ ಪ್ರಕರಣ ವರದಿಯಾಗಿದೆ. ಸಾರ್ವಜನಿಕರ ಸಹಕಾರದಿಂದ ಬಾಲ್ಯ ವಿವಾಹ ತಡೆಯಲು ಸಾಧ್ಯವಾಗಿದೆ.
ಬಾಲ್ಯ ವಿವಾಹಗಳಿಗೆ ಕಡಿವಾಣ ಬೀಳಲಿದೆ. ಇದರ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ. ಇನ್ನು ಮುಂದೆ ಪಿಡಿಒಗಳನ್ನು ವಿವಾಹ ನೋಂದಣಾಧಿಕಾರಿಗಳಾಗಿ ನೇಮಕವಾಗಿದೆ. ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಕಾರ್ಯನಿರ್ವಸಲಾಗುತ್ತಿದೆ.
– ಎಸ್.ನಟರಾಜ್, ಉಪನಿರ್ದೇಶಕ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಪ್ರತಿಯೊಬ್ಬರಿಗೂ ಜಾಗೃತಿಯನ್ನು ಮೂಡಿಸಬೇಕು. ಬಾಲ್ಯ ವಿವಾಹದ ಮಾಹಿತಿ ಕಂಡುಬಂದರೆ ಮಕ್ಕಳ ಸಹಾಯವಾಣಿಗೆ 1098ಗೆ ಕರೆ ಮಾಡಬಹುದಾಗಿದೆ. ಬಾಲ್ಯ ವಿವಾಹ ಮಾಡುವುದು ಒಂದು ಶಿಕ್ಷಾರ್ಹ ಅಪರಾಧ. ಈ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು ಸಮಾಜದ ಪ್ರತಿಯೊಬ್ಬರೂ ಸಹಕಾರ ನೀಡಬೇಕು.
– ಎನ್.ಎಂ.ಜಗದೀಶ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ
-ಎಸ್.ಮಹೇಶ್