ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಆರೋಗ್ಯ ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ ಗರ್ಭಿಣಿಯರಿಗೆ ಹೆಚ್ ಐವಿ ಏಡ್ಸ್ ಬಗ್ಗೆ ಅರಿವು ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ತಾಲ್ಲೂಕು ಸಾರ್ವಜನಿಕ ಆರೋಗ್ಯ ಇಲಾಖೆಯಿಂದ ಏರ್ಪಡಿಸಲಾಗಿತ್ತು.
ಹೊಳವನಹಳ್ಳಿ ಹೋಬಳಿಯ ಆರೋಗ್ಯ ಇಲಾಖೆ ವತಿಯಿಂದ ಸುತ್ತಮುತ್ತಲ ಗ್ರಾಮದ ಐವತ್ತಕ್ಕೂ ಹೆಚ್ಚು ಗರ್ಭಿಣಿ ಮಹಿಳೆಯರಿಗೆ ಬಳೆ, ರವಿಕೆ, ಹಣ್ಣು, ಹೂವು ಉಡಿತುಂಬಿ ಹಾರೈಸಿದರು.
ವೈದ್ಯರಾದ ಡಾ ಗಣೇಶ್ ಮಾತನಾಡಿ, ಗರ್ಭಿಣಿ ಮಹಿಳೆಯರು ತರಕಾರಿ, ಹಣ್ಣು ,ಪೌಷ್ಟಿಕ ಆಹಾರ ಸೇವಿಸಬೇಕು.ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸದೆ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಉತ್ತಮ ಆರೋಗ್ಯ ಹೊಂದಲು ಪೌಷ್ಟಿಕಾಂಶದ ಆಹಾರವನ್ನು ಮನೆಯಲ್ಲಿಯೇ ತಯಾರಿಸಿ ಸೇವಿಸಬೇಕು. ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ವಿಜಯ್ ಕುಮಾರ್ ಮಾತನಾಡಿ, ಮಹಿಳೆಯರು ಮತ್ತು ಗರ್ಭಿಣಿಯರ ಅನುಕೂಲಕ್ಕಾಗಿ ಸರಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ರಾಷ್ಟ್ರೀಯ ಪೋಷಣಾ ಮಾಸಾಚರಣೆ ಹಮ್ಮಿಕೊಂಡಿದೆ. ಆರೋಗ್ಯ ಸಮಸ್ಯೆಯಿಂದ ಯಾವುದೆ ಗರ್ಭಿಣಿ, ತಾಯಂದಿರು ಮತ್ತು ಶಿಶು ಮರಣ ಆಗದಂತೆ ವಿಶೇಷ ಕಾರ್ಯಕ್ರಮ ಹಾಕಿಕೊಂಡಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಿನಿ.ಎನ್ ಮಾತನಾಡಿ, ಮಾತೃಪೂರ್ಣ ಯೋಜನೆಯಲ್ಲಿ ಗರ್ಭಿಣಿಯರಿಗೆ ಪ್ರತಿ ದಿನ ಅಂಗನವಾಡಿ ಕೇಂದ್ರದಲ್ಲಿ ಮಧ್ಯಾಹ್ನ ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಎಂದರು.
ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.