ಬಳ್ಳಾರಿ: ಕನ್ನಡ ಪರ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಕೇವಲ ಮಹಾನಗರ ಮತ್ತು ನಗರ ಪ್ರದೇಶಗಳಲ್ಲಿ ಮಾತ್ರ ಹಮ್ಮಿಕೊಳ್ಳದೆ ಗ್ರಾಮೀಣ ಪ್ರದೇಶದಲ್ಲೂ ಹಮ್ಮಿಕೊಂಡು ಕನ್ನಡದ ಜಾಗೃತಿ ಮೂಡಿಸಬೇಕಾಗಿದೆ. ಕನ್ನಡ ಭಾಷೆ ಹಳ್ಳಿಗಳಲ್ಲಿ ಮಾತ್ರ ಉಳಿದು ಬೆಳೆಯುತ್ತಿದ್ದು ಇಂಗ್ಲಿಷ್ ವ್ಯಾಮೋಹ ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂದು ಎಂ.ಪಿ.ಪ್ರಕಾಶ್ ಸಮಾಜಮುಖೀ ಟ್ರಸ್ಟ್ ಅಧ್ಯಕ್ಷೆ ಎಂ.ಪಿ ವೀಣಾ ಮಹಾಂತೇಶ್ ಹೇಳಿದರು.
ತಾಲೂಕಿನ ಗೌರಿಹಳ್ಳಿ ಗ್ರಾಮದಲ್ಲಿಸಿರಿಗೇರಿ ಅನ್ನಪೂರ್ಣ ಪ್ರಕಾಶನ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದವಿಚಾರಗೋಷ್ಠಿ-ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡದ ಮೊದಲ ಗದ್ಯಕೃತಿ ವಡ್ಡಾರಾಧನೆ ಬರೆದ ಶಿವಕೋಟ್ಯಾಚಾರ್ಯರು ಬಳ್ಳಾರಿ ಜಿಲ್ಲೆಯ ಕೋಗಳಿಯವರು. ಅಷ್ಟೇಅಲ್ಲದೆ, ಕನ್ನಡ ಹೋರಾಟಗಾರರು ಮತ್ತುಗೊಕಾಕ್ ಚಳುವಳಿಯಲ್ಲಿ ಭಾಗವಹಿಸಿದ್ದಮಹನೀಯರು ಬಳ್ಳಾರಿಯಲ್ಲಿ ಜನಿಸಿದ್ದಾರೆ. ಇಂಥ ಜಿಲ್ಲೆಯಲ್ಲಿ ಜನಿಸಿದ ನಾವೇ ಧನ್ಯರು ಎಂದರು.
ಮುಖ್ಯ ಅತಿಥಿಗಳಾಗಿ ಪಲ್ಲವ ಪ್ರಕಾಶನ ಚನ್ನಪಟ್ಟಣದ ಡಾ| ಕೆ. ವೆಂಕಟೇಶ್ ಮಾತನಾಡಿ, ಕನ್ನಡ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಒಂದು ಕೌಟುಂಬಿಕಕಾರ್ಯಕ್ರಮದ ಜೊತೆ ಜೊತೆಗೆ ಹಮ್ಮಿಕೊಂಡು ಸಾರ್ವತ್ರಿಕಗೊಳಿಸಿರುವುದು ಸಂತೋಷದ ವಿಷಯ. ಹೀಗೆ ಎಲ್ಲ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಇಂಥ ಕನ್ನಡ ಪರವಾದ ಕಾರ್ಯಕ್ರಮಗಳನ್ನು ಆಯೋಜಿಸುವುದರಮೂಲಕ ಕನ್ನಡಕ್ಕೆ ಪ್ರತಿಯೊಬ್ಬರು ತಮ್ಮ ಕೊಡುಗೆಯನ್ನು ನೀಡಬಹುದು ಎಂದರು.
ಅನ್ನಪೂರ್ಣ ಪ್ರಕಾಶನದ ಸಿರಿಗೇರಿಯ ಎರ್ರಿಸ್ವಾಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ರಾಮನಮಲಿ, ಲೇಖಕ ಮೇಟಿ ಕೊಟ್ರಪ್ಪಭಾಗವಹಿಸಿದ್ದರು. ಬಳಿಕ ನಡೆದ ಗೋಷ್ಠಿಯಲ್ಲಿ ಮರಿಯಮ್ಮನಹಳ್ಳಿ ಉಪನ್ಯಾಸಕ ಸೋಮೇಶ್ ಉಪ್ಪಾರ್ ಅವರು, ಡಾ| ಡಿ. ದೇವರಾಜ ಅರಸ್ ಮತ್ತು ಭೂ ಸುಧಾರಣೆ ಕಾಯ್ದೆ ವಿಷಯ ಕುರಿತು ಉಪನ್ಯಾಸ ನೀಡಿದರು. ಕಳಕಪ್ಪಗೌಡ, ಸುಭದ್ರಮ್ಮ ಮಾಡ್ಲಿಗೇರಿ, ಗೀತಾ ಕಬ್ಬಳ್ಳಿ, ಮುಮ್ತಾಜ್ ಬೇಗಮ್,ಮಂಜು ಮಾಡ್ಲಗೇರಿ ಹಲವರು ಕಾವ್ಯ ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಹುಲಿಕಟ್ಟೆ ಚನ್ನಬಸಪ್ಪ, ಕೆಂಚಪ್ಪ, ಹನುಮಂತಪ್ಪ, ವಿ.ಬಿ.ಮಲ್ಲಯ್ಯ, ಎಂ.ಪಿ.ಎಂ.ಮಂಜುನಾಥ, ಕೊಟ್ರಸ್ವಾಮಿ, ವಿಜಯಕುಮಾರ್ ಗೌಡ, ಎಂ. ಗೋಪಾಲಕೃಷ್ಣ, ಈಶ್ವರ್, ಸುರೇಶ್, ರಮೇಶ್, ಅಂಜಿನಪ್ಪ ಮಾಡ್ಲಗೇರಿ, ಎಂ.ರಫಿ ಸೇರಿದಂತೆ ಗೌರಿಹಳ್ಳಿ ಗ್ರಾಮಸ್ಥರು ಇದ್ದರು. ಎಂ.ಪಂಪಾಪತಿ ನಿರೂಪಿಸಿದರು. ಬಿ.ಎಚ್. ಎಂ.ವಿರೂಪಾಕ್ಷಯ್ಯ ಸ್ವಾಗತಿಸಿದರು. ಗೋವರ್ಧನ್‌ರೆಡ್ಡಿ ವಂದಿಸಿದರು.