ಸಿರುಗುಪ್ಪ: ಇಂದು ಯಾವುದೇ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಪ್ರಶಸ್ತಿಗಳು ಬರುತ್ತಿಲ್ಲ. ಆದರೆ ಯಾವುದೇ ಸಾಧನೆ ಮಾಡದೆ ಇರುವವರಿಗೆ ಪ್ರಶಸ್ತಿಗಳು ಬರುತ್ತಿರುವುದು ಪ್ರಶಸ್ತಿಗಳ ಮೌಲ್ಯ ಕಡಿಮೆಯಾಗುತ್ತಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಕಾರಂತ ರಂಗಲೋಕ ಕಲಾತ್ಮಕ ಮನಸ್ಸುಗಳ ತಾಣ ಬೈರಗಾಮದಿನ್ನೆ ಸಂಸ್ಥೆಯು ಹಮ್ಮಿಕೊಂಡಿದ್ದ “ಕಾರಂತ ಸಾಹಿತ್ಯ ರತ್ನ -2022′ ರಾಜ್ಯಮಟ್ಟದ ಪುಸ್ತಕ ಪ್ರಶಸ್ತಿ ಹಾಗೂ ಆರ್.ಪಿ. ಮಂಜುನಾಥ್ ರಚಿಸಿದ “ಪ್ರೀತಿ ಜೋಳಿಗೆ ಫಕೀರ’ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅರ್ಹರಿಗೆ ಪ್ರಶಸ್ತಿಗಳನ್ನು ಕೊಟ್ಟರೆ ಪ್ರಶಸ್ತಿ ಗೌರವ ಕೂಡ ಹೆಚ್ಚಾಗುತ್ತದೆ. ಇಂದು ಶಿಫಾರಸ್ಸುಗಳ ಮೇಲೆ ಅರ್ಹರಲ್ಲದವರಿಗೆ ಪ್ರಶಸ್ತಿಯನ್ನು ನೀಡುತ್ತಿರುವುದು ಪ್ರಶಸ್ತಿ ಮೌಲ್ಯವೇ ಕಡಿಮೆಯಾಗಿದ್ದು, ಪ್ರಶಸ್ತಿಗೆ ಅರ್ಹರಾದವರು ತಮಗೆ ಪ್ರಶಸ್ತಿ ಬೇಡ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತವೇ ಸರಿ.
ತಾಲೂಕಿನ ಬೈರಗಾಮದಿನ್ನೆ ಗ್ರಾಮದ ಕಾರಂತ ರಂಗಲೋಕ ಕಲಾತ್ಮಕ ಮನಸ್ಸುಗಳ ತಾಣ ಸಂಸ್ಥೆಯು ತುಂಬಾ ಪಾರದರ್ಶಕ ಮತ್ತು ಉತ್ಕೃಷ್ಟ ಗುಣಮಟ್ಟದ ಅರ್ಹರನ್ನು ಗುರುತಿಸಿ “ಕಾರಂತ ಸಾಹಿತ್ಯ ರತ್ನ’ ರಾಜ್ಯಮಟ್ಟದ ಪುಸ್ತಕ ಪ್ರಶಸ್ತಿ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ನಾಡೋಜ ಬೆಳಗಲ್ಲು ವೀರಣ್ಣ ಮಾತನಾಡಿ, ಕಲೆ ಮತ್ತು ಜ್ಞಾನ ಯಾರಪ್ಪನ್ನ ಸ್ವತ್ತಲ್ಲ. ಅದು ಶ್ರಮಜೀವಿಗಳ ಸಂಪತ್ತು. ಹಾಗಾಗಿ ತಾಳ್ಮೆ ಮತ್ತು ಶ್ರಮವಹಿಸಿ ತಮ್ಮ ಕ್ಷೇತ್ರದಲ್ಲಿ ದುಡಿದವರಿಗೆ ಇಂದಲ್ಲ ನಾಳೆ ಪ್ರತಿಫಲ ದೊರೆಯುತ್ತದೆ. ಕೇವಲ ಪ್ರಶಸ್ತಿ, ಸನ್ಮಾನಕ್ಕಾಗಿ ಯಾರು ಕೆಲಸ ಮಾಡಬಾರದು. ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಪ್ರಶಸ್ತಿ ತಾನಾಗಿಯೇ ಒಲಿದು ಬರುತ್ತದೆ ಎಂದು ಹೇಳಿದರು.
ಸಂಸ್ಥೆ ಕಾರ್ಯದರ್ಶಿ ಆರ್.ಪಿ.ಮಂಜುನಾಥ್ ಮಾತನಾಡಿದರು. ಕಾರಂತ ರತ್ನ ರಾಜ್ಯಮಟ್ಟದ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾದ ಲೇಖಕರಾದ ಡಾ| ಶೋಭಾ ನಾಯಕ್, ಅಕರ್ ಸಿ ಕಾಲಿಮಿರ್ಚಿ, ಪ್ರೊ| ಎಚ್.ಟಿ. ಪೋತೆ, ಧಿಧೀರೇಂದ್ರ ನಾಗರಹಳ್ಳಿ, ರಾಮಣ್ಣ ತಟ್ಟಿ, ವಿದ್ಯಾರೆಡ್ಡಿ, ಕೆ.ಪಿ. ಮಂಜುನಾಥ ರೆಡ್ಡಿ, ಡಾ| ಕೆ. ಶ್ರೀಪತಿ ಹಳಗುಂದ, ಡಾ| ಎಂ. ಚಂದ್ರಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.
ಕಲಾವಿದೆ ಉಷಾರಾಣಿ ರಂಗ ಗೀತೆ ಗಾಯನ ನಡೆಸಿಕೊಟ್ಟರು. ಪುಸ್ತಕ ಪ್ರಶಸ್ತಿ ಆಯ್ಕೆ ಸಮಿತಿ ತೀರ್ಪುಗಾರರಾದ ಡಾ| ಕೆ. ಶಿವಲಿಂಗಪ್ಪ ಹಂದಿಹಾಳು, ನಾಡೋಜ ಬೆಳಗಲ್ಲು ವೀರಣ್ಣ, ಡಾ| ಶಿವಕುಮಾರ ತಾತಾ, ಕಸಾಪ ಜಿಲ್ಲಾಧ್ಯಕ್ಷ ಡಾ| ನಿಷ್ಠಿ ರುದ್ರಪ್ಪ ಮತ್ತು ಸಾರ್ವಜನಿಕರು ಇದ್ದರು.