ಮುಂಬಯಿ: ರೀಡ್ ಎಗ್ಸಿಬಿಷನ್ ಮತ್ತು ಕಾರ್ಯುಗೇಟೆಡ್ ಇಂಡಸ್ಟ್ರಿಯಲ್ ಅಸೋಸಿಯೇಶನ್ ವತಿಯಿಂದ ನಡೆಸಲ್ಪಟ್ಟ ಅಂತಾ ರಾಷ್ಟ್ರೀಯ ಸಮಾವೇಶದಲ್ಲಿ ಕರ್ನಾಟಕ ರಾಜ್ಯದ ಉಡುಪಿ ಕಾರ್ಕಳ ಮೂಲದ ನಗರದ ವೆಲ್ವಿನ್ ಪೇಪರ್ ಪ್ರೊಡಕ್ಟ್ ಸಂಸ್ಥೆಯ ಕಾರ್ಯಾಧ್ಯಕ್ಷ, ಮೋಡೆಲ್ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕ ವಿನ್ಸೆಂಟ್ ಮಥಾಯಸ್ ಇವರಿಗೆ ಅಂತಾರಾಷ್ಟ್ರೀಯ “ವರ್ಲ್x ಕಾರ್ಯುಗೇಟೆಡ್ ಅವಾರ್ಡ್ 2019′ ಲಭಿಸಿದೆ.
ಎ. 7ರಂದು ಚೀನಾದ ಶಾಂಘೈನ ಹೊಟೇಲ್ ಸಭಾಗೃಹ ದಲ್ಲಿ ಆಯೋಜಿಸಲಾಗಿದ್ದ ಜಾಗತಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ಸಮಾರಂಭದಲ್ಲಿ ಆಧುನಿಕ ಮತ್ತು ಅತ್ಯುತ್ತಮ ಪರಿಶೋಧಕ ಕಲ್ಪನೆ, ಸಮಾಜದ ಜವಾಬ್ದಾರಿ ಇಟ್ಟುಕೊಂಡು ಮಾರುಕಟ್ಟೆ ಮತ್ತು ಕಾರ್ಯನಿರ್ವಹಣೆಯಲ್ಲಿ ಉತ್ತಮ ಸಾಧನೆ ಹಾಗೂ ಗ್ಲೋಬಲ್ ಕಾರ್ಯುಗೇಟೆಡ್ ಇಂಡಸ್ಟ್ರಿಯ ಅಭಿವೃದ್ಧಿ ಪಥವನ್ನು ಗುರುತಿಸಿಕೊಂಡಿರುವುದಕ್ಕೆ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು.
ಈ ಬಾರಿಯ 2019ರಲ್ಲಿ ವೆಲ್ವಿನ್ ಪೇಪರ್ ಪ್ರೊಡಕ್ಟ್ ಸಂಸ್ಥೆಯನ್ನು ದೇಶದಲ್ಲಿ ನ್ಯೂ ಫ್ಯಾಕ್ಟರಿ ಪ್ರೊಡಕ್ಟ್ ಪ್ರಶಸ್ತಿಗೆ ನೇಮಿಸಲಾಗಿದ್ದು, ಆನ್‌ಲೈನ್ ಚುನಾವಣೆ ಮೂಲಕ ಸುಮಾರು 14 ಇಂಡಸ್ಟ್ರಿಯಲ್ ಅಂತರಾಷ್ಟ್ರೀಯ ತೀರ್ಪುಗಾರರ ನೇಮಕಾತಿಯಲ್ಲಿ ಆಯ್ಕೆ ಪ್ರಕ್ರಿಯೆ ಚುನಾವಣೆಯಲ್ಲಿ ವೆಲ್ವಿನ್ ಸಂಸ್ಥೆಯು ಪ್ರಥಮ ಸ್ಥಾನ ಪಡೆದಿದೆ. ಚೀನಾ ಮತ್ತು ಮಿಡಲ್ ಈಸ್ಟ್ ಕಂಪೆನಿಗಳೊಂದಿಗಿನ ಸ್ಪರ್ಧೆಯಲ್ಲಿ ವೆಲ್ವಿನ್ ನ್ಯೂ ಫ್ಯಾಕ್ಟರಿ ಪ್ಲಾನಿಂಗ್ ವಿಭಾಗದಲ್ಲಿ ದ್ವಿತೀಯ ಸ್ಥಾನಕ್ಕೆ ಭಾಜನವಾಗಿದೆ.
ಕಾರ್ಯುಗೇಟೆಡ್ ಇಂಡಸ್ಟ್ರಿಯಲ್ಲಿ ಭಾರತ ರಾಷ್ಟ್ರದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವುದೇ ಒಂದು ಅಸಾಧಾರಣ ಮತ್ತು ಸ್ಥೈರ್ಯತ್ವದ ದೊಡ್ಡ ಸಾಧನೆಯಾಗಿದೆ. ನಮ್ಮ ಜಯ ರಾಷ್ಟ್ರದ ಮತ್ತು ಮಹಾರಾಷ್ಟ್ರದ ಉದ್ಯಮದ ಜಯವಾಗಿದೆ ಎಂದು ವೆಲ್ವಿನ್ ಪೇಪರ್ ಪ್ರೊಡಕ್ಟ್ ಸಂಸ್ಥೆಯ ಕಾರ್ಯಾಧ್ಯಕ್ಷ ವಿನ್ಸೆಂಟ್ ಮಥಾಯಸ್ ತಿಳಿಸಿದ್ದಾರೆ. ಸಮಾವೇಶದಲ್ಲಿ ವೆಲ್ವಿನ್ ಸಂಸ್ಥೆಯ ನಿರ್ದೇಶಕ ವರ್ಟನ್ ಮಥಾಯಸ್ ಉಪಸ್ಥಿತರಿದ್ದರು.