ಉಡುಪಿಯ ಯಕ್ಷ ಕಲಾಭಿಮಾನಿ ಬಳಗದ ವಾರ್ಷಿಕೋತ್ಸವದಂದು ಈ ವರ್ಷದ ಸಮ್ಮಾನವನ್ನು ಬಡಗುತಿಟ್ಟಿನ ಪ್ರಸಿದ್ಧ ಯುವ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯರಿಗೆ ನೀಡಲಾಗುವುದು.ಸೆ.2ರಂದು ಉಡುಪಿಯ ಪುರಭವನದಲ್ಲಿ ಸಮ್ಮಾನ ಕಾರ್ಯಕ್ರಮ ನಡೆಯಲಿದೆ. “ಕೃಷ್ಣ ಲೀಲೆ – ಕಂಸ ವಧೆ’ ಯಕ್ಷಗಾನ ಪ್ರದರ್ಶನದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ಬಾಲ್ಯದಲ್ಲಿಯೇ ಭಾಗವತ ಕಾಳಿಂಗ ನಾವಡರ ಪದ್ಯಕ್ಕೆ ಮಾರು ಹೋದವರು ಜನ್ಸಾಲೆ.ಶಾಲಾ ಶಿಕ್ಷಣಕ್ಕೆ ತಿಲಾಂಜಲಿ ಇತ್ತು ಯಕ್ಷಗಾನದತ್ತ ಮನ ಮಾಡಿದವರು. ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣರಲ್ಲಿ ನಾಟ್ಯಾಭ್ಯಾಸವನ್ನು ಕಲಿತು, ಗುರು ಗೋರ್ಪಾಡಿ ವಿಠuಲ ಪಾಟೀಲರಲ್ಲಿ ತಾಳಗತಿ, ಹಾಡುಗಾರಿಕೆಯನ್ನು ಕಲಿತರು. ಹಾರ್ಯಾಡಿ ಸತೀಶ್ ಕೆದ್ಲಾಯರಿಂದ ಸಭಾ ಲಕ್ಷಣ ಹಾಗೂ ಪೂರ್ವರಂಗವನ್ನು ಕಲಿತವರು. ಮುಂದೆ ಎರಡು ವರ್ಷ ಹವ್ಯಾಸಿ ಭಾಗವತರಾಗಿ ಸೇವೆ ಸಲ್ಲಿಸಿದರು. ಆರಂಭದ ತಿರುಗಾಟ ಮಾರಣಕಟ್ಟೆ ಮೇಳದಲ್ಲಿ ಸಂಗೀತಗಾರರಾಗಿ 2 ವರ್ಷ, ಸಹಭಾಗವತರಾಗಿ ಐದು ವರ್ಷ ಹಾಗೂ ಐದು ವರ್ಷ ಪ್ರಧಾನ ಭಾಗವತರಾಗಿ ಮಾರಣಕಟ್ಟೆ ಮೇಳದಲ್ಲಿ ತಿರುಗಾಟ ಮಾಡಿದರು.
ನಂತರ ಪೆರ್ಡೂರು ಮೇಳದಲ್ಲಿ ತಿರುಗಾಟ ಆರಂಭಿಸಿ ಅಪಾರ ಜನಮೆಚ್ಚುಗೆ ಗಳಿಸಿದರು. ಪೌರಾಣಿಕ ಪ್ರಸಂಗಗಳಲ್ಲಿ ಇವರ ಕಂಠಸಿರಿ, ಭಾವನಾತ್ಮಕ ಪ್ರಸಂಗಗಳಲ್ಲಿ ಪರಿಣಾಮಕಾರಿಯಾಗಿ ಹಾಡುವ ಶೈಲಿ ರಂಗ ಸೃಷ್ಟಿಯನ್ನು ಮಾಡಬಲ್ಲದು. ಹಂತ ಹಂತವಾಗಿ ಕಲೆಯಲ್ಲಿ ಸಿದ್ಧಿ ಸಂಪಾದಿಸಿಕೊಂಡು ಸತತ ಪರಿಶ್ರಮದಿಂದ ಬಡಗುತಿಟ್ಟಿನ ಭಾಗವತರಲ್ಲಿ ಮುಂಚೂಣಿಯಲ್ಲಿರುವವರು. ತೀರ್ಥಳ್ಳಿ ಗೋಪಾಲ ಆಚಾರ್ಯ, ನೀಲ್ಗೊàಡು ಶಂಕರ ಹೆಗಡೆ, ರಾಮಕೃಷ್ಣ ಮಂದಾರ್ತಿ, ರಾಕೇಶ್ ಮಲ್ಯ, ಶಿವಾನಂದ ಕೋಟ, ಸುನೀಲ್ ಭಂಡಾರಿ ಮುಂತಾದ ಹಿರಿಯ ಕಲಾವಿದರಿಂದ ರಂಗ ಸೂಕ್ಷ್ಮತೆಯನ್ನು ಅರಿತವರು.
ಬಡಗಿನ ಖ್ಯಾತ ಸ್ತ್ರೀ ವೇಷಧಾರಿ ಅರಾಟೆ ಮಂಜುನಾಥರ “ಅರಾಟೆ ಪ್ರವಾಸಿ ಯಕ್ಷಗಾನ’ ತಂಡದಿಂದ ವಿವಿಧೆಡೆ ತನ್ನ ಕಂಠ ಸಿರಿಯಿಂದ ಅಪಾರ ಕೀರ್ತಿ ಪಡೆದಿರುತ್ತಾರೆ.ಸದಾ ಕಲಿಯುವ ತುಡಿತವನ್ನು ಹೊಂದಿರುವ ಇವರು ಯಕ್ಷರಂಗದ ಶಿಸ್ತು. ಸಂಪ್ರದಾಯ, ಪ್ರಸಂಗಗಳ ಅಧ್ಯಯನ, ಪುರಾಣದ ಜ್ಞಾನ, ಹಿರಿಯ ಕಲಾವಿದರ ಜೊತೆಗಿನ ಪ್ರಸಂಗ ಪೂರ್ವ ಸಿದ್ಧತೆ ಬದ್ಧತೆಯನ್ನು ಮೈಗೂಡಿಸಿಕೊಂಡವರು.
ಶಂಕರ ಬಡಗಬೆಟ್ಟು