Advertisement

ಮೇ 7-8ರಂದು ರಂಗ ಸಾಧಕರಿಗೆ ಪ್ರಶಸ್ತಿ

12:35 PM Apr 16, 2022 | Team Udayavani |

ಬಳ್ಳಾರಿ: ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಮೇ 7,8 ರಂದು ಎರಡು ದಿನಗಳ ಕಾಲ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು, 2021ನೇ ಸಾಲಿಗೆ ಅಕಾಡೆಮಿಯಿಂದ ನೀಡಲಾಗುವ ಜೀವಮಾನ ರಂಗಸಾಧನೆ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ, ದತ್ತಿ ಪುರಸ್ಕಾರ, ವಾರ್ಷಿಕ ಬಹುಮಾನ ಸೇರಿ ಎಲ್ಲ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಪ್ರೊ| ಆರ್‌. ಭೀಮಸೇನ ಹೇಳಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 25 ವರ್ಷಗಳ ಬಳಿಕ ಬಳ್ಳಾರಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಹರ್ನಿಶಿ ಶ್ರಮಿಸುತ್ತಿರುವ ವೃತ್ತಿ, ಹವ್ಯಾಸಿ, ಗ್ರಾಮೀಣ ರಂಗಭೂಮಿಯ ನಟ, ನಟಿ, ನರ್ದೇಶಕ, ಸಂಗೀತ ಮೇಷ್ಟ್ರು, ನಾಟಕಕಾರ, ಮೇಕಪ್‌ ಮುಂತಾದ ನೇಪಥ್ಯ ಕಲಾವಿದ ಹಾಗೂ ಸಂಘಟಕರನ್ನು ಈ ಪ್ರಶಸ್ತಿಗಳಿಗೆ ಪರಿಗಣಿಸಲಾಗುತ್ತದೆ. ಪುರುಷ ಕಲಾವಿದರಿಗೆ 60 ವರ್ಷ ವಯಸ್ಸು, ಕನಿಷ್ಟ 25 ವರ್ಷ ರಂಗ ಸಾಧನೆ ಮತ್ತು ಮಹಿಳಾ ಕಲಾವಿದರಿಗೆ 55 ವರ್ಷ ವಯಸ್ಸು ಕನಿಷ್ಟ 20ವರ್ಷಗಳ ರಂಗಸಾಧನೆಯ ಹಿರಿಯ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಜೊತೆಗೆ ರಾಜ್ಯದ ಗಡಿನಾಡಿನಲ್ಲಿ ರಂಗಕಲೆಯೇ ಬದುಕಾಗಿರುವ ಕಲಾವಿದರನ್ನು ಮತ್ತು ರಂಗಭೂಮಿಯಲ್ಲಿ ನಿರಂತರ ಚಟುವಟಿಕೆಯಲ್ಲಿರುವ ರಂಗಸಂಸ್ಥೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ ಎಂದವರು ವಿವರಿಸಿದರು. ‘ಯುವರಂಗ’ ಕಳೆದ 2021ನೇ ಸಾಲಿಗೆ ರಂಗಶಾಲೆಗಳಿಂದ ಪದವೀಧರರಾಗಿ ರಂಗಭೂಮಿಯಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವ 40 ವರ್ಷ ಮೀರದ ಯುವ ರಂಗನಿರ್ದೇಶಕ, ನಿರ್ದೇಶಕಿಯನ್ನು ಪ್ರಥಮ ಬಾರಿಗೆ ಯುವರಂಗ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.

ದತ್ತಿ ಪುರಸ್ಕಾರ ನಿಧಿ ಹೆಚ್ಚಳ

ಕಳೆದ 2020ನೇ ಸಾಲಿಗೆ ನಾಡಿನ ಖ್ಯಾತ ಹಿರಿಯ ರಂಗ ಕಲಾವಿದೆ ‘ಮಾಲತಿಶ್ರೀ ಮೈಸೂರು’ ಅವರ ದತ್ತಿ ನಿಧಿ ಪುರಸ್ಕಾರ ಆರಂಭಗೊಂಡು ಇದುವರೆಗೂ ಪ್ರಶಸ್ತಿ ಜೊತೆಗೆ 5 ಸಾವಿರ ಗೌರವಧನ ನೀಡಲಾಗುತ್ತಿತ್ತು. 2021ನೇ ಸಾಲಿನ ದತ್ತಿ ನಿಧಿ ಪುರಸ್ಕಾರದ ಗೌರವಧನವನ್ನು ಪ್ರಶಸ್ತಿ ಜೊತೆಗೆ 10ಸಾವಿರ ರೂಗೆ ಹೆಚ್ಚಿಸಿ ನೀಡಲಾಗುತ್ತಿದೆ. ಮಹಿಳಾ ಪ್ರಾತಿನಿಧ್ಯ, ಸಾಮಾಜಿಕ ಹಾಗೂ ಪ್ರಾದೇಶಿಕ ನ್ಯಾಯಗಳನ್ನು ಗಮನದಲ್ಲಿಟ್ಟುಕೊಂಡು ಅಕಾಡೆಮಿಯ ಒಂದು ಜೀವಮಾನ ರಂಗಸಾಧನೆ ಪ್ರಶಸ್ತಿ, ಒಂದು ಯುವರಂಗ ಪ್ರಶಸ್ತಿ, ಗಡಿನಾಡು ಪ್ರಶಸ್ತಿ ಸೇರಿದಂತೆ ಒಟ್ಟು 25 ವಾರ್ಷಿಕ ರಂಗ ಪ್ರಶಸ್ತಿ ಮತ್ತು ಒಂದು ರಂಗಸಂಸ್ಥೆ ಸೇರಿದಂತೆ ಒಟ್ಟು 5 ದತ್ತಿ ನಿಧಿ ಪುರಸ್ಕಾರಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭ

Advertisement

ಬಳ್ಳಾರಿಯಲ್ಲಿ ಮೇ 7, 8 ರಂದು ಎರಡು ದಿನಗಳ ಕಾಲ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಮೇ 7ರಂದು ಶನಿವಾರ ಪ್ರಶಸ್ತಿ ಪುರಸ್ಕೃತರು ಆಗಮಿಸಲಿದ್ದು ಅಂದು ಸಂಜೆ 4 ಗಂಟೆಗೆ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸುವ ಅದ್ಧೂರಿ ರಂಗ ಶೋಭಾಯಾತ್ರೆ ನಡೆಯಲಿದೆ. ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ. ಮರುದಿನ ಮೇ 8 ರಂದು ಭಾನುವಾರ ಬೆಳಗ್ಗೆ 11 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯ ಪ್ರಭುದೇವ ಕಪ್ಪಗಲ್ಲು, ಶಿವೇಶ್ವರಗೌಡ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next