Advertisement
2015ರಲ್ಲಿಯೇ ನೂತನ ಗ್ರಾಪಂ ಕೇಂದ್ರವಾಗಿ ರಚನೆಯಾದ ಗುಡಪಳ್ಳಿ ನಾಲ್ಕು ಗ್ರಾಮ ಹಾಗೂ ಮೂರು ತಾಂಡಾಗಳಿಂದ ಕೂಡಿದೆ. ಒಟ್ಟು 13 ಸದಸ್ಯರ ಬಲ ಹೊಂದಿರುವ ಗ್ರಾಪಂ ನಾಲ್ಕು ವರ್ಷದಲ್ಲಿಯೇ ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿ ಅತಿ ಕಡಿಮೆ ಅವಧಿಯಲ್ಲಿಯೇ ಗಾಂಧಿ ಗ್ರಾಮ ಪುರಸ್ಕಾರ ಪಡೆದುಕೊಂಡು ಬೀದರ ಜಿಲ್ಲೆಯಲ್ಲಿಯೆ ಮೊದಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
Related Articles
Advertisement
ಸಾಧನೆ ಹಾದಿ: ನರೇಗಾ ಯೋಜನೆಯಲ್ಲಿ ಕಲ್ಲು ಆಯುವ ಕೆಲಸ, ಚೆಕ್ ಡ್ಯಾಂ, ತೆರೆದ ಬಾವಿ ನಿರ್ಮಾಣ, ಕೃಷಿ ಹೊಂಡ, ಹೊಲದ ಅಂಚಿನಲ್ಲಿ ಸಸಿ ಹಚ್ಚುವ ಕೆಲಸ ಸಹ ಅಚ್ಚುಕಟ್ಟಾಗಿ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಇಲಾಖೆ ನಿಯಮದ ಪ್ರಕಾರ ಹತ್ತು ಸಾವಿರ ದುಡಿಯುವ ಕೈಗೆ ಕೆಲಸ ನೀಡುವಂತೆ ಗುರಿ ನೀಡಲಾಗಿತ್ತು. ಆದರೆ ಗುಡಪಳ್ಳಿ ಪಂಚಾಯತನಲ್ಲಿ ಹದಿನಾರು ಸಾವಿರ ಜನರಿಗೆ ನರೇಗಾ ಯೋಜನೆಯಲ್ಲಿ ಕೆಲಸ ನೀಡಲಾಗಿದೆ.ಪಂಚಾಯತ ವ್ಯಾಪ್ತಿಯಲ್ಲಿ 94 ಮನೆ ನಿರ್ಮಾಣ ಮಾಡುವಂತೆ ನಿಯಮ ಇತ್ತು. ಅದಕ್ಕೂ ಮೀರಿ 135 ಮನೆ ನಿರ್ಮಾಣ ಮಾಡಿ ಗುಡಿಸಲು ನಿವಾಸಿಗಳಿಗೆ ಸೂರು ಕಲ್ಪಿಸಿಕೊಡಲಾಗಿದೆ.
ನೂರರಷ್ಟು ಕರ ವಸೂಲಿ: 10 ಲಕ್ಷ ರೂ. ಕರ ವಸೂಲಿ ಮಾಡಿ ಶೇ. 100ರಷ್ಟು ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಭಿವೃದ್ಧಿ ಕೆಲಸದ ಬಗ್ಗೆ ಅರಿವು ಮೂಡಿಸಿ ಕರ ವಸೂಲಿ ಮಾಡಲಾಗಿದೆ. ಕರ ವಸೂಲಿಯಿಂದ ಬಂದ ಹಣದಲ್ಲಿ ಪಂಚಾಯತನಲ್ಲಿ ಕೆಲಸ ಮಾಡುತ್ತಿರುವ 11 ಜನ ಸಿಬ್ಬಂದಿಗೆ ಸೆಪ್ಟೆಂಬರ್ ತಿಂಗಳ ತನಕ ಪೂರ್ತಿ ವೇತನ ನೀಡಲಾಗಿದೆ.
ಗುಡಪಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿವಾನಂದ ಔರಾದೆ ತಮ್ಮ 9 ವರ್ಷದ ಅವಧಿಯಲ್ಲಿ ಮೂರನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ತಾವು ಸೇವೆ ಮಾಡುವ ಪಂಚಾಯತ ಪಾಲಾಗುವಂತೆ ಮಾಡಿದ್ದಾರೆ.
ಪರಿಹಾರ ನಿಧಿಗೆ ಹಣ: ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ 1.35ಲಕ್ಷ ರೂ. ಹಣ ನೀಡಿ ಅತಿ ಹೆಚ್ಚು ಪರಿಹಾರ ನೀಡಿದ ಬೀದರ ಜಿಲ್ಲೆಯ ಪ್ರಥಮ ಪಂಚಾಯತ ಎಂದು ಹೆಸರು ಪಡೆದುಕೊಂಡಿದೆ.ಹಿಗಾಗಿಯೇ ಅಂದಿನ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪಂಚಾಯತ ಅಧ್ಯಕ್ಷರಿಗೆ ಅಭಿನಂದನಾ ಪತ್ರ ಸಲ್ಲಿಸಿದ್ದಾರೆ.
ರವೀಂದ್ರ ಮುಕ್ತೇದಾರ