ರಾಯಚೂರು: ಇಷ್ಟು ದಿನ ಯಾರು ಪ್ರಶಸ್ತಿಗಳಿಗಾಗಿ ಅರ್ಜಿ ಹಾಕುತ್ತಿದ್ದರೋ ಅಂಥವರಿಗೆ ಪ್ರಶಸ್ತಿ ನೀಡಲಾಗುತ್ತಿತ್ತು. ಆದರೆ, ಬಿಜೆಪಿ ಸರ್ಕಾರ ಅರ್ಜಿ ಹಾಕಿದವರಿಗಿಂತ ಅರ್ಹರನ್ನು ಗುರುತಿಸಿ ಪ್ರಶಸ್ತಿ ನೀಡುವ ವಿನೂತನ ಸಂಪ್ರದಾಯಕ್ಕೆ ನಾಂದಿ ಹಾಡಿದೆ ಎಂದು ನಗರ ಶಾಸಕ ಡಾ| ಶಿವರಾಜ್ ಪಾಟೀಲ್ ತಿಳಿಸಿದರು.
ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಾತೋಶ್ರೀ ಮಹಾಂತಮ್ಮ ಶಿವಬಸಪ್ಪ ಗೋನಾಳ ಪ್ರತಿಷ್ಠಾನದಿಂದ ಪ್ರತಿಭಾ ಸುಗಮ ಸಂಗೀತ ಸಂಸ್ಥೆಯ 12ನೇ ವಾರ್ಷಿಕೋತ್ಸವದ ಅಂಗವಾಗಿ ಮಹಾಂತ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಸರ್ಕಾರ ಕಲೆ, ಯೋಗ್ಯತೆ ನೋಡಿ ಪ್ರಶಸ್ತಿಗಳನ್ನು ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಅರ್ಹತೆ ಇರುವ ಯಾರಿಗೆ ಬೇಕಾದರೂ ಪ್ರಶಸ್ತಿಗಳು ಸಿಗಬಹುದು. ಆಸ್ಪತ್ರೆ ಮುಂದೆ ಹಣ್ಣು ಮಾರಿ ಶಾಲೆ ಕಟ್ಟಿಸಿದ ವ್ಯಕ್ತಿಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಹೀಗೆ ಎಲೆ ಮರೆ ಕಾಯಿಯಂತೆ ಕೆಲಸ ಮಾಡುವವರನ್ನು ಗುರುತಿಸುವ ಕೆಲಸವಾಗಬೇಕು ಎಂದರು.
ಶರಣಪ್ಪ ಗೋನಾಳ ಕಳೆದ 12 ವರ್ಷದಿಂದ ಒಂದೇ ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ರಾಜ್ಯದ ಮೂಲೆ- ಮೂಲೆಗಳಲ್ಲಿ ಸದ್ದಿಲ್ಲದೇ ಸಾಧನೆ ಮಾಡುತ್ತಿರುವವರನ್ನು ಗುರುತಿಸಿ ಪ್ರಶಸ್ತಿ ನೀಡುವುದು ನಿಜಕ್ಕೂ ಸ್ವಾಗತಾರ್ಹ. ಸುಮಾರು ವರ್ಷಗಳಿಂದ ವರ್ಷಕ್ಕೆ 10 ಕಾರ್ಯಕ್ರಮ ನಡೆಸಿ ಪ್ರಶಸ್ತಿ ನೀಡುತ್ತಾರೆ. ಸಾಧಕರಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಕಾರ್ಯ ಎಂದರು.
ಚಿಕ್ಕಸೂಗುರು ಚೌಕಿಮಠದ ಡಾ| ಸಿದ್ಧಲಿಂಗ ಸ್ವಾಮಿ ಆಶೀರ್ವಚನ ನೀಡಿ, ದೇವರ ಅನುಗ್ರಹದಿಂದಲೇ ಸುಖ, ದುಃಖ ಸಿಗುವುದು. ಅದೇ ರೀತಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಸಿಗುತ್ತವೆ. ಪ್ರಶಸ್ತಿಗಾಗಿಯೇ ಸಾಧನೆ ಮಾಡುವುದಲ್ಲ. ನಿಮ್ಮ ಸಾಧನೆಗೆ ಪ್ರಶಸ್ತಿಗಳು ಸಿಗಬೇಕು ಎಂದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ವಿಜಯ ಮಹಾಂತ ಅನುಗ್ರಹ, ಮಹಾಂತ ಕಾಯಕಯೋಗಿ, ಶ್ರೀಗುರು ರಕ್ಷೆ, ಆದರ್ಶ ದಂಪತಿ, ಮಹಾಂತಶ್ರೀ ಪುರಸ್ಕಾರ ಸೇರಿದಂತೆ ಇನ್ನಿತರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಪ್ರತಿಭಾ ಸುಗಮ ಸಂಗೀತ ಸಂಸ್ಥೆಯ ಅಧ್ಯಕ್ಷ ಶರಣಪ್ಪ ಗೋನಾಳ ಮಾತನಾಡಿದರು.
ಆರ್‌ಡಿಎ ಅಧ್ಯಕ್ಷ ವೈ.ಗೋಪಾಲ ರೆಡ್ಡಿ, ಮಾಜಿ ಅಧ್ಯಕ್ಷ ಕಡಗೋಲ್ ಆಂಜಿನಯ್ಯ, ಪೂರ್ಣಿಮಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್. ಎಲ್. ಕೇಶವರೆಡ್ಡಿ, ನಗರಸಭೆ ಮಾಜಿ ಸದಸ್ಯ ಹರೀಶ ನಾಡಗೌಡ, ನಗರಸಭೆ ಸದಸ್ಯ ಕೆ.ಎನ್. ನಾಗರಾಜ, ಬಾಬುರಾವ್, ರವೀಂದ್ರ ಜಲ್ದಾರ್ ಇದ್ದರು.