ಬಂಗಾರಪೇಟೆ: ಖಾಸಗಿ ಆಸ್ಪತ್ರೆಗಿಂತ ಹೆಚ್ಚಿನ ಗುಣಮಟ್ಟದಲ್ಲಿ ರೋಗಿಗಳಿಗೆ ಮೂಲಭೂತ ಸೌಕರ್ಯಗಳನ್ನು ಪೂರೈಸುವುದರ ಜೊತೆಗೆ ಸಮರ್ಪಕ ರೀತಿಯಲ್ಲಿ ಸ್ವತ್ಛತೆ ಕಾಪಾಡಿಕೊಂಡು, ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆ ಒದಗಿಸುತ್ತಾ ಬರುತ್ತಿರುವ ತಾಲೂಕಿನ ಬೂದಿಕೋಟೆ ಹಾಗೂ ತೊಪ್ಪನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಟ್ಟಣದ ಸರ್ಕಾರಿ ಆಸ್ಪತ್ರೆ ಕಾಯಕಲ್ಪ ಯೋಜನೆಯ ಪ್ರಶಸ್ತಿಗೆ ಭಾಜನವಾಗಿದೆ.
ತಾಲೂಕಿನ ಬೂದಿಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಶಸ್ತಿಯಲ್ಲಿ ಕಳೆದ ವರ್ಷ 2019-20ನೇ ಸಾಲಿನ ಪ್ರಶಸ್ತಿಯನ್ನು ಕೊರೊನಾ ಲಾಕ್‌ಡೌನ್ ವೇಳೆಯಲ್ಲಿ ಘೋಷಣೆ ಮಾಡಿದ್ದರೂ ಸಹ ಪ್ರಶಸ್ತಿ ನೀಡಲಾಗದೇ ನಿಲ್ಲಿಸಿದ್ದರು. ವಾರದ ಹಿಂದೆ ಪ್ರಶಸ್ತಿ ಪ್ರಕಟಿಸಿದ್ದು, ಬೂದಿಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಜೊತೆಗೆ ತೊಪ್ಪನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬಂಗಾರಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯು ಸಹ ಕಾಯಕಲ್ಪ ಪ್ರಶಸ್ತಿಗೆ ಆಯ್ಕೆಯಾಗಿದೆ.ಕಾಯಕಲ್ಪ ಪ್ರಶಸ್ತಿ ಸಿಕ್ಕಿರುವುದು ಒಂದೆಡೆಯಾದರೆ, ಕೇಂದ್ರಗಳಲ್ಲಿ ಹಲವು ನ್ಯೂನತೆಗಳಿದ್ದು, ಹಲವು ಸೌಲಭ್ಯಗಳನ್ನು ಕಲ್ಪಿಸಬೇಕಿದೆ.
10 ಕೇಂದ್ರಗಳಿಗೆ ಪ್ರಶಸ್ತಿ: ಸರ್ಕಾರ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಿಗಿಂತ ಗುಣಮಟ್ಟದ ಸೇವೆ ನೀಡಬೇಕು. ಬಾಹ್ಯ ಮತ್ತು ಆಂತರಿಕ ಸ್ವತ್ಛತೆಯನ್ನು ಬಲಪಡಿಸುವುದರ ಜೊತೆಗೆ ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆಯುವಂತೆ ಸರ್ಕಾರಿ ಆಸ್ಪತ್ರೆಗಳು ಅಭಿವೃದ್ಧಿ ಹೊಂದಬೇಕೆಂಬ ದೃಷ್ಟಿಯಿಂದ ಕಾಯಕಲ್ಪ ಯೋಜನೆ ಆರಂಭಿಸಿದೆ. ಈ ಯೋಜನೆಯಲ್ಲಿ ಕೋಲಾರ ಜಿಲ್ಲೆಯ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಪ್ರಶಸ್ತಿ ಪಡೆದಿದ್ದು, ಈ ಪೈಕಿ ತಾಲೂಕಿನ ಬೂದಿಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರವೂ ಸಹ ಒಂದಾಗಿದೆ.
ಅತೀ ಹೆಚ್ಚು ಜನಸಂಖ್ಯೆ: ತಾಲೂಕಿನ ಬೂದಿಕೋಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವು ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಜನಸಂಖ್ಯೆ ಹಾಗೂ ವ್ಯಾಪ್ತಿ ಹೊಂದಿದೆ. ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು 58,000 ಜನಸಂಖ್ಯೆ ಇದ್ದು, ಇಷ್ಟೂ ಜನರಿಗೆ ಸಮರ್ಪಕ ವೈದ್ಯಕೀಯ ಸೇವೆಯನ್ನು ಕಲ್ಪಿಸಲು 9 ಉಪ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ. ಹಲವು ವರ್ಷಗಳ ಕಾಲ ಆರೋಗ್ಯ ಸಿಬ್ಬಂದಿಗಳು ಹಾಗೂ ಖಾಯಂ ವೈದ್ಯರು ಇಲ್ಲದೆ ಸ್ವಚ್ಛತೆ ಮರೀಚಿಕೆಯಾಗಿತ್ತು. ಕಳೆದ ಎರಡು ವರ್ಷಗಳಿಂದ ಆಸ್ಪತ್ರೆಯು ಸ್ವತ್ಛತೆಯಿಂದ ಕೂಡಿ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ನೀಡಲಾಗುತ್ತಿದೆ.
ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ: ಆಸ್ಪತ್ರೆಯಲ್ಲಿ ಸಿಗುವ ಸೇವೆಗಳ ಜೊತೆಗೆ ಆಯುಷ್ಮಾನ್ ಭಾರತ ಯೋಜನೆಯಿಂದ ಹಲವು ರೋಗಗಳಿಗೆ ಚಿಕಿತ್ಸೆ ದೊರೆಯುತ್ತಿದೆ. ಪ್ರತಿ ವಾರ 35ಕ್ಕೂ ಮೇಲ್ಪಟ್ಟ ಗರ್ಭಿಣಿಯರು ತಪಾಸಣೆಗೆ ಒಳಗಾಗುತ್ತಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಕಾಯಕಲ್ಪ ತಂಡದ ಸದಸ್ಯರು ಆಸ್ಪತ್ರೆಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಯಕಲ್ಪ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.