Advertisement

ಜಾಗೃತಿ ಹುಟ್ಟಿಸಿದ ಎದುರ್ಕಳ ಕಿಂಡಿ ಅಣೆಕಟ್ಟೇ ದುರ್ಬಲ

11:08 PM Jan 01, 2020 | mahesh |

ಪುತ್ತೂರು: ಕಿಂಡಿ ಅಣೆಕಟ್ಟಿನ ಮೂಲಕ ತಾಲೂಕಿನಲ್ಲಿ ಇತ್ತೀಚಿಗಿನ ವರ್ಷಗಳಲ್ಲಿ ಮತ್ತೆ ಜಲ ಸಂರಕ್ಷಣೆಗೆ ನಾಂದಿ ಹಾಡಿದ ಕೆದಿಲ ಗ್ರಾಮದ ಎದುರ್ಕಳ ಕಿಂಡಿ ಅಣೆಕಟ್ಟಿನ ಹಲಗೆ ಮುರಿದ ಪರಿಣಾಮ ನೀರು ಹರಿದು ಹೋಗಲಾರಂಭಿಸಿದೆ.

Advertisement

ಎದುರ್ಕಳ ಕಿಂಡಿ ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರು ಸೋಮವಾರದಿಂದ ಮತ್ತೆ ಕಿರು ನದಿಗೆ ಹರಿದು ಹೋಗಲಾರಂಭಿಸಿದೆ. ಹಲಗೆಗಳು ದುರ್ಬಲವಾಗಿರುವ ಪರಿಣಾಮ ಈ ಸೋರಿಕೆ ಉಂಟಾಗಿದ್ದು, ಇದನ್ನು ಅಳವಡಿಸುವಾಗಲೇ ಮೇ ತಿಂಗಳ ತನಕ ನೀರು ನಿಲ್ಲುವಂತೆ ಸದೃಢವಾಗಿರುವ ಕುರಿತು ಸ್ಥಳೀಯರಲ್ಲಿ ಅನುಮಾನ ಉಂಟಾಗಿತ್ತು.

ಅಣೆಕಟ್ಟಿನಲ್ಲಿ ನೀರು ನಿಲ್ಲಿಸದಿದ್ದರೆ ಅಂತರ್ಜಲ ಮಟ್ಟ ಹೆಚ್ಚಾಗುವ ನಿರೀಕ್ಷೆಯಲ್ಲಿದ್ದ ಕೆರೆ ಮತ್ತು ಬಾವಿಗಳಲ್ಲಿ ನೀರು ಏರಿಕೆಯಾಗುವ ಸಾಧ್ಯತೆಗಳು ಇಲ್ಲ. ಅಣೆಕಟ್ಟಿನ ಹಲಗೆಗೆ ಪರ್ಯಾಯವಾಗಿ ಅಡಿಕೆ ಮರದ ತೋಳುಗಳನ್ನು ಅನಿವಾರ್ಯವಾಗಿ ಇರಿಸಿ ಮಣ್ಣು ಮುಚ್ಚಬೇಕಾಗಿದೆ. 24 ತಾಸುಗಳೊಳಗೆ ಈ ಕಾಮಗಾರಿಯನ್ನು ನಡೆಸದಿದ್ದರೆ ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರು ಮತ್ತೆ ಕಿರು ನದಿಗೆ ಹರಿದು ಹೋಗಲಿದೆ.

ತಾಲೂಕಿನಲ್ಲಿ ಜಾಗೃತಿ
ಎದುರ್ಕಳ ಕಿಂಡಿ ಅಣೆಕಟ್ಟಿನ ದಂಡೆ ಕುಸಿದಿದೆ. ತಡೆಗೋಡೆ ಬಿರುಕು ಬಿಟ್ಟಿದೆ. ಇದನ್ನು ದುರಸ್ತಿಪಡಿಸದಿದ್ದರೆ ಮುಂದಿನ ಮಳೆಗಾಲದಲ್ಲಿ ಎದುರ್ಕಳ ಕಿಂಡಿ ಅಣೆಕಟ್ಟು ನದಿಯ ಪ್ರವಾಹಕ್ಕೆ ಕೊಚ್ಚಿ ಹೋಗುವ ಸಾಧ್ಯತೆಗಳು ಹೆಚ್ಚಿವೆ. ಗ್ರಾಮಸ್ಥರೇ ಸೇರಿ ಆಸಕ್ತಿಯಿಂದ ಈ ಕಿಂಡಿ ಅಣೆಕಟ್ಟಿಗೆ ಹಲಗೆ ಇರಿಸಿ ನೀರು ನಿಲ್ಲಿಸಲು ಆರಂಭಿಸಿದ್ದರು. ಎದುರ್ಕಳದ ಪ್ರಯೋಗ ಪುತ್ತೂರು ತಾಲೂಕಿನಲ್ಲಿ ಕಿಂಡಿ ಅಣೆಕಟ್ಟಿನ ಕುರಿತು ಜಾಗೃತಿಗೆ ಕಾರಣವಾಗಿ ಇದೇ ಮಾದರಿಯನ್ನು ಹಲವು ಕಡೆ ಅನುಸರಿಸಿದ್ದರು.

ಎದುರ್ಕಳದ ಈ ಕಿಂಡಿ ಅಣೆಕಟ್ಟನ್ನು ಸಣ್ಣ ನೀರಾವರಿ ಇಲಾಖೆಯಿಂದ ತ್ವರಿತವಾಗಿ ದುರಸ್ತಿಗೊಳಿಸುವಂತೆ ಸ್ಥಳೀಯರು ಶಾಸಕ ಸಂಜೀವ ಮಠಂದೂರು ಅವರ ಮೂಲಕ ರಾಜ್ಯದ ಸಣ್ಣ ನೀರಾವರಿ ಖಾತೆ ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ಶನಿವಾರ ಮನವಿ ಮಾಡಿದ್ದರು. ಈ ಕುರಿತು ತ್ವರಿತ ಕ್ರಮ ಕೈಗೊಳ್ಳಲು ಸಚಿವರು ನೀರಾವರಿ ಇಲಾಖೆಯ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

Advertisement

ದುರಸ್ತಿಪಡಿಸಬೇಕು
ಎದುರ್ಕಳದ ಕಿಂಡಿ ಅಣೆಕಟ್ಟನ್ನು ದುರಸ್ತಿಪಡಿಸುವುದು ಅಗತ್ಯದ ಕೆಲಸವಾಗಿದೆ. ಶಾಸಕರು ಕೂಡಾ ಈ ದಿಸೆಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ತುಂಡಾದ ಹಲಗೆಯ ಸ್ಥಳದಲ್ಲಿ ಅಡಿಕೆ ಮರದ ತೋಳು ಇರಿಸಿ ಮಣ್ಣು ಹಾಕಿ ಮತ್ತೆ ನೀರು ನಿಲ್ಲಿಸುವ ಕೆಲಸ ಮಾಡಲಾಗುತ್ತದೆ.
– ಕೆ.ರಾಘವೇಂದ್ರ ಭಟ್‌, ಸಿವಿಲ್‌ ಎಂಜಿನಿಯರ್‌, ಕೆದಿಲ

Advertisement

Udayavani is now on Telegram. Click here to join our channel and stay updated with the latest news.

Next