ಪಿರಿಯಾಪಟ್ಟಣ: ಯಾವುದೇ ವಿಚಾರಣೆ ನಡೆಸದೆ ಸಿಡಿಪಿಒ ಏಕಾಏಕಿ ನೋಟಿಸ್ ನೀಡಿದ ಪರಿಣಾಮ ಮಾನಸಿಕ ಒತ್ತಡಕ್ಕೆ ಒಳಗಾಗಿ ಅಂಗನ ವಾಡಿ ಶಿಕ್ಷಕಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಆರೋಪಿಸಿ, ಅಂಗನವಾಡಿ ಸಂಘಟನೆ ಕಾರ್ಯಕರ್ತರು ಧರಣಿ ನಡೆಸಿರುವ ಘಟನೆ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ.
ಲಿಂಗಾಪುರದ ಅಂಗನವಾಡಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಚಂದ್ರಾವತಿ (42) ಬುಧವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಮಾನಸಿಕ ಒತ್ತಡದಿಂದಲೇ ತಮ್ಮ ತಾಯಿ ಮೃತಪಟ್ಟಿದ್ದಾರೆ ಎಂದು ಮೃತರ ಮಕ್ಕಳು ಆರೋಪಿಸಿದ್ದು, ಇದಕ್ಕೆ ಅಂಗನವಾಡಿ ಸಿಬ್ಬಂದಿ ದನಿಗೂಡಿಸಿದ್ದಾರೆ.
ಏನಿದು ಘಟನೆ?: ಚಂದ್ರಾವತಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ಲಿಂಗಾಪುರದ ಕೆಲವರು ಕೆಲ ದಿನಗಳ ಹಿಂದೆ ಸಿಡಿಪಿಒಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಸಿಡಿಪಿಒ, ಚಂದ್ರಾವತಿಗೆ ನೋಟಿಸ್ ಜಾರಿ ಮಾಡಿದ್ದರು. ಇದರಿಂದ ಮನನೊಂದ ಮಾನಸಿಕ ಆಘಾತಕ್ಕೆ ಒಳಗಾದ ಅವರು ಅನಾರೋಗ್ಯಕ್ಕೀಡಾಗಿದ್ದರು. ಬುಧವಾರ ರಾತ್ರಿ ಹೃದಯಾ ಘಾತವಾಗಿ ಮೃತಪಟ್ಟಿದ್ದು, ಸಿಡಿಪಿಒ ದುಡುಕಿನ ನಿರ್ಧಾರದಿಂದಲೇ ಚಂದ್ರಾವತಿ ಮೃತಪಟ್ಟಿದ್ದಾರೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.
ಈ ವೇಳೆ ಸ್ಥಳಕ್ಕಾಗಮಿಸಿ ಸಿಡಿಪಿಒ ಇಂದಿರಾ ಮತ್ತು ಅಂಗನವಾಡಿ ಮೇಲ್ವಿಚಾರಕಿ ಶ್ವೇತಾ ಅವರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ಕೇವಲ ಗ್ರಾಮಸ್ಥರು ನೀಡಿದ ದೂರಿನ ಆಧಾರದ ಮೇಲೆ ನೋಟಿಸ್ ನೀಡಿದ್ದು ಎಷ್ಟು ಸರಿ. ಈ ಕುರಿತು ವಿಚಾರಣೆ ನಡೆಸಬೇಕಾಗಿತ್ತು. ಆದರೆ, ಯಾವುದೇ ವಿಚಾರಣೆ ನಡೆಸದೆ ಏಕಾಏಕಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದರಿಂದ ಅವರು ಭಾರೀ ಆಘಾತಕ್ಕೆ ಒಳಾಗಾಗಿದ್ದಾರೆ. ಕೊನೆಗೆ ಮೃತಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೃತ ಚಂದ್ರಾವತಿ ಅವರ ಮಗಳಿಗೆ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡುವವರೆಗೆ ಅಂತ್ಯಸಂಸ್ಕಾರಕ್ಕೆ ಅನುವು ಮಾಡಿಕೊಡುವುದಿಲ್ಲ ಎಂದು ಅಂಗನವಾಡಿ ಶಿಕ್ಷಕಿಯರು ಪಟ್ಟುಹಿಡಿದರು. ಕೊನೆಗೆ ಸಿಡಿಪಿಒ ಇಂದಿರಾ ಈ ಕುರಿತು ಲಿಖೀತ ಭರವಸೆ ನೀಡಲು ಸಾಧ್ಯವಿಲ್ಲ.
ಬದಲಾಗಿ ಚಂದ್ರಾವತಿ ಕುಟುಂಬಕ್ಕೆ ಅನುಕೂಲವಾಗುವ ರೀತಿಯಲ್ಲಿ ವರದಿಯನ್ನು ಸರ್ಕಾರಕ್ಕೆ ನೀಡುವುದಾಗಿ ಭರವಸೆ ನೀಡಿದರು. ಬಳಿಕ ಅಂಗನವಾಡಿ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಕೈಬಿಟ್ಟರು. ಅಂಗನವಾಡಿ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಕಾವೇರಮ್ಮ, ಕಾರ್ಯದರ್ಶಿ ರಾಜಾಮಣಿ ಸೇರಿದಂತೆ ನೂರಾರು ಕಾರ್ಯಕರ್ತೆಯರು ಹಾಜರಿದ್ದರು.