ಹುಬ್ಬಳ್ಳಿ: ಅಂಗನವಾಡಿ ಕೇಂದ್ರಕ್ಕೆ ಸ್ಥಳಾವಕಾಶ ನೀಡದೇ ಮಂಜೂರಾದ ಅಂಗನವಾಡಿ ಕೇಂದ್ರವನ್ನು ಒತ್ತಡ ತಂದು ರದ್ದುಪಡಿಸಿ ಪಾಲಿಕೆ ಸದಸ್ಯರು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಲೋಕಪ್ಪನ ಹಕ್ಕಲದ ನಿವಾಸಿಗಳು ಮಕ್ಕಳೊಂದಿಗೆ ಸೋಮವಾರ ಪ್ರತಿಭಟನೆ ನಡೆಸಿದರು.
ಉಪಮಹಾಪೌರರ ಲಕ್ಷ್ಮೀ ಉಪ್ಪಾರ ಅವರ ವಾರ್ಡ್‌ನಲ್ಲೇ ಇದು ನಡೆದಿದೆ. ಲೋಕಪ್ಪನ ಹಕ್ಕಲ ಸುತ್ತಮುತ್ತ ಬಡಜನರು ವಾಸಿಸುತ್ತಿದ್ದು, ಇಲ್ಲೊಂದು ಅಂಗನವಾಡಿ ಕೇಂದ್ರ ನೀಡುವಂತೆ ಹಲವಾರು ಬಾರಿ ಮನವಿ ಮಾಡಲಾಗಿತ್ತು. ಈ ಹಿಂದೆ ಹನುಮಂತ ದೇವರ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸಲಾಗಿತ್ತು.
ಅದು ನಿರ್ಮಾಣವಾಗಿ ಎರಡು ವರ್ಷಗಳು ಗತಿಸಿದ ನಂತರ ಈ ಜಾಗ ಹನುಮಂತ ದೇವಸ್ಥಾನಕ್ಕೆ ಸೇರಿದ ಜಾಗವಾಗಿದ್ದು ಕೂಡಲೇ ಖಾಲಿ ಮಾಡಬೇಕೆಂದು ಆ ಸ್ಥಳದಿಂದ ಅಂಗನವಾಡಿ ಕೇಂದ್ರವನ್ನು ಹೊರ ಹಾಕಲಾಯಿತು. ತದ ನಂತರ ಲೋಕಪ್ಪನ ಹಕ್ಕಲದಲ್ಲಿರುವ ದೇವಸ್ಥಾನದಲ್ಲಿ ಇದೀಗ ಅಂಗನವಾಡಿ ಕೇಂದ್ರ ನಡೆಸಲು ಅವಕಾಶ ನೀಡಲಾಗಿದೆ.
ಆದರೆ ಈ ಭಾಗಕ್ಕೆ ಶಾಶ್ವತ ಅಂಗನವಾಡಿ ಕೇಂದ್ರದ ಅವಶ್ಯಕತೆ ಇದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಹಿಂದೆ ಜಿಲ್ಲಾಧಿಕಾರಿಗಳೇ ಸ್ವತಃ ಲೋಕಪ್ಪನ ಹಕ್ಕಲದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಅಂಗನವಾಡಿ ಕೇಂದ್ರ ನಡೆಸಲು ಅವಕಾಶ ನೀಡುವಂತೆ ಸೂಚನೆ ನೀಡಿದ್ದರೂ ಪಾಲಿಕೆ ಸದಸ್ಯರು ಒತ್ತಡದಿಂದ ಅದನ್ನು ರದ್ದುಪಡಿಸಿದ್ದರು ಎಂದು ಸ್ಥಳೀಯರು ಆರೋಪಿಸಿದರು.
ಕೂಡಲೇ ಶಾಶ್ವತ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ಮುಂದುವರಿಯಲಿದೆ ಎಂದು ಅಲ್ಲಿನ ನಿವಾಸಿಗಳು ಎಚ್ಚರಿಸಿದ್ದಾರೆ.