Advertisement

ಹಪ್ತಾ ವಸೂಲಿಯಿಂದ ದೂರವಿರಿ: ಜಮಾದಾರ

10:27 AM Feb 27, 2018 | Team Udayavani |

ಅಫಜಲಪುರ: ಇದ್ದು ಸತ್ತಂತಿರುವ ಸಮಾಜವನ್ನು ಸಂಘಟಿಸಿ ಎಲ್ಲರನ್ನು ಎಚ್ಚರಿಸಿದ್ದು ದಿ| ವಿಠ್ಠಲ್‌ ಹೇರೂರ. ಆದರೆ ಇಂದು ಕೆಲಸವರು ಅವರ ಹೆಸರು ಹೇಳಿ ಹಪ್ತಾ ವಸೂಲಿ ಸಂಘಟನೆಗಳನ್ನು ಕಟ್ಟಿಕೊಂಡು ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಅಂಥವರಿಂದ ಸಮುದಾಯದ ಯುವಕರು ದೂರವಿರಬೇಕು ಎಂದು ಲಚ್ಚಪ್ಪ ಜಮಾದಾರ ಹೇಳಿದರು.

Advertisement

ಪಟ್ಟಣದ ಎಪಿಎಂಸಿ ಆವಣದಲ್ಲಿ ಏರ್ಪಡಿಸಿದ್ದ ಅಂಬಿಗರ ಚೌಡಯ್ಯ ಜಯಂತಿ ಹಾಗೂ ಬೃಹತ್‌ ಸಮಾವೇಶದಲ್ಲಿ ಅವರು ಮಾತನಾಡಿ, ಹಪ್ತಾ ವಸೂಲಿ ವೇದಿಕೆಗಳಿಂದ ಸಮುದಾಯದ ಯುವಕರು ದಾರಿ ತಪ್ಪುತ್ತಿದ್ದಾರೆ. ನಮ್ಮ ಗುರಿ ಹಳಿ ತಪ್ಪುತ್ತಿದೆ.

ಹೀಗಾಗಿ ಈ ಪ್ರವೃತ್ತಿ ಬದಲಾಗುವ ತನಕ ಸಮಾಜದ ಏಳ್ಗೆ ಸಾಧ್ಯವಾಗುವುದಿಲ್ಲ. ನಮ್ಮ ಗುರಿ ಈಡೇರಿಕೆಗಾಗಿ ಸರ್ಕಾರದ ಕಣ್ಣು ತೆರೆಸಲು ನಾವೇಲ್ಲರೂ ಒಂದಾಗಿ ಶಿಕ್ಷಿತರಾಗಿ, ಸಂಘಟಿತರಾಗಿ ಹೋರಾಟ ರೂಪಿಸಬೇಕಾಗಿದೆ ಎಂದರು.

ಶಾಸಕ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ಚೌಡಯ್ಯ ಜಯಂತಿ ಆಚರಣೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ. ಹೀಗಾಗಿ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ.

ನಿಗಮಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡುತ್ತೇವೆ. ಕೋಲಿ ಸಮಾಜ ಹಿಂದೂಳಿದ ಸಮಾಜವಾಗಿದ್ದು, ಸಮಾಜ ಬಾಂಧವರು ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಕೊಡಿಸಿ ವಿಠ್ಠಲ್‌ ಹೇರೂರ ಕನಸನ್ನು ನನಸಾಗಿಸಿ ಎಂದು ಹೇಳಿದರು.

Advertisement

ಗಡಿ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಬಾಬುರಾವ್‌ ಚಿಂಚನಸೂರ್‌ ಮಾತನಾಡಿ, ಸಪ್ತ ಖಾತೆಗಳ ಸಚಿವನಾಗಿದ್ದಾಗ ನಮ್ಮ ಸಮುದಾಯವನ್ನು ಪ್ರವರ್ಗ 1ಕ್ಕೆ ಸೇರಿಸಿದ್ದೆ. ದಿ| ವಿಠ್ಠಲ್‌ ಹೇರೂರ ಅವರ ಕನಸನ್ನು ನನಸಾಗಿಸಲು ಶತ ಪ್ರಯತ್ನ ಮಾಡುತ್ತಿದ್ದೇವೆ. ನನಗೆ ಮಕ್ಕಳು, ಬಂಧು ಬಳಗವಿಲ್ಲ. ಸಮಾಜವೇ ನನ್ನ ತಂದೆ-ತಾಯಿ, ಮಕ್ಕಳು, ಬಂಧು ಬಳಗವಾಗಿದ್ದಾರೆ. ಹೀಗಾಗಿ ನನ್ನ
ಕೊನೆ ಉಸಿರು ಇರುವ ತನಕ ಸಮಾಜಕ್ಕೆ ಸೇವೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಹಾವೇರಿಯ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಶಿವಾಚಾರ್ಯರು, ಮಾಜಿ ಶಾಸಕ ಎಂ.ವೈ. ಪಾಟೀಲ್‌, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಗನ್ನಾಥ ಜಮಾದಾರ, ಚೌಡಯ್ಯ ಮಹಾಸಭಾ ರಾಜ್ಯಾಧ್ಯಕ್ಷೆ ಅಂಬಿಕಾ ಜಾಲಗಾರ ಮಾತನಾಡಿದರು. ಸಮಾಜದ ತಾಲೂಕು ಅಧ್ಯಕ್ಷ ಶಂಕು ಮ್ಯಾಕೇರಿ ಅಧ್ಯಕ್ಷತೆ ವಹಿಸಿದ್ದರು. ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.

ತಾಪಂ ಅಧ್ಯಕ್ಷೆ ರುಕ್ಮಿಣಿ ಜಮಾದಾರ, ಪ್ರಭುಲಿಂಗ ಜಮಾದಾರ, ಗುರುಬಾಳ ಜಕಾಪೂರ, ಗುರಣ್ಣ ತೆಗ್ಗೆಳ್ಳಿ, ಬಲವಂತ ಜಕಬಾ, ಶರಣಪ್ಪ ನಾಯ್ಕೋಡಿ, ರಮೇಶ ಮಾಸ್ತರ, ಸುಭಾಷ ಹಂಚಿನಾಳ, ಅಂಬಣ್ಣ ಚಿಂಚೋಳಿ, ಸಿದ್ದಪ್ಪ ಸಿನ್ನೂರ, ಮಹಾಂತೇಶ ಬಡಿಗೇರಿ, ಶರಣಪ್ಪ ದುದ್ದಗಿ, ಶಂಕರಲಿಂಗ ಮೇತ್ರಿ, ರಾಜಕುಮಾರ ಗೋವಿಂದ್‌, ಮಲ್ಲಿನಾಥ ಪಾಟೀಲ್‌, ವಿಶ್ವನಾಥ ರೇವೂರ, ಶಿವು ಘಾಣೂರ ಇದ್ದರು. ಲಕ್ಷ್ಮಣ ಹೇರೂರ ಸ್ವಾಗತಿಸಿದರು. ಚಂದ್ರಕಾಂತ ಪ್ಯಾಟಿ ನಿರೂಪಿಸಿ, ವಂದಿಸಿದರು.

ಕೋಲಿ ಸಮಾಜ ಎಸ್ಟಿಗೆ ಸೇರಿಸುವುದೇ ಜೀವನದ ಗುರಿ
ಅಫಜಲಪುರ:
ರಾಜ್ಯದಲ್ಲಿ ಅತೀ ಹಿಂದೂಳಿದ ಕೋಲಿ ಕಬ್ಬಲಿಗ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದೇ ನನ್ನ ಜೀವನದ ಕೊನೆಯ ಗುರಿಯಾಗಿದೆ ಎಂದು ಮಾಜಿ ಸಚಿವ, ಗಡಿ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಬಾಬುರಾವ್‌ ಚಿಂಚನಸೂರ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ಹೆಸರುಗಳಿಂದ ಹರಿದು ಹಂಚಿ ಹೋಗಿದ್ದ ಸಮಾಜವನ್ನು ದಿ|ವಿಠ್ಠಲ್‌ ಹೇರೂರ್‌ ಅವರು ಸಂಘಟಿಸಿ ಒಂದಾಗಿಸಿದ್ದಾರೆ. ನಮ್ಮ ಸಮಾಜವನ್ನು ಎಸ್‌ಟಿಗೆ ಸೇರಿಸುವ ಅವರ ಕನಸಿನ ಥೇರನ್ನು ನಾನು ಎಳೆದುಕೊಂಡು ಹೋಗುತ್ತಿದ್ದೇನೆ. ಮೇಣದ ಬತ್ತಿಯ ಹಾಗೆ ಸುಟ್ಟುಕೊಂಡು ಸಮಾಜದ ಏಳ್ಗೆಗೆ ದುಡಿಯುತ್ತಿದ್ದೇನೆ ಎಂದರು.

ಇನ್ನೂ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸುವ ಪ್ರಕ್ರಿಯೆ ನಡೆದಿದೆ. ಕೇಂದ್ರ ಸರ್ಕಾರ ನಮ್ಮ ಮನವಿ ತಿರಸ್ಕರಿಸಿತ್ತು. ಪುನಃ ಪ್ರಯತ್ನ ಮಾಡಿ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ಮತ್ತೆ ಕೇಂದ್ರದ ಅಂಗಳಕ್ಕೆ ಫೈಲ್‌ ಹೋಗುವಂತೆ ಮಾಡಿದ್ದೇನೆ. ಆದಷ್ಟು ಬೇಗ ನನ್ನ ಕೋಲಿ ಸಮುದಾಯಕ್ಕೆ ಸಿಹಿ ಸುದ್ದಿ ಸಿಗಲಿದೆ ಎಂದರು.

ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಗನ್ನಾಥ ಜಮಾದಾರ, ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಂಕು ಮ್ಯಾಕೇರಿ, ಮುಖಂಡರಾದ ಲಚ್ಚಪ್ಪ ಜಮಾದಾರ, ಶರಣಪ್ಪ ಕಣ್ಮೆಶ್ವರ, ಶಾಂತಪ್ಪ ಕೂಡಿ, ಬಸವರಾಜ ಸಪ್ಪನಗೋಳ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next