Advertisement

ಕಾರ್ಮಿಕ ವಿರೋಧಿ ಸರ್ಕಾರಗಳನ್ನು ದೂರವಿಡಿ

03:21 PM May 02, 2018 | Team Udayavani |

ಮೈಸೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿ ಅನಸರಿಸುತ್ತಿದ್ದು, ಹೀಗಾಗಿ ಚುನಾವಣೆಯಲ್ಲಿ ಕಾರ್ಮಿಕರ ಪರವಾಗಿರುವ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್‌.ಆರ್‌.ಶೇಷಾದ್ರಿ ಹೇಳಿದರು.

Advertisement

ನಗರದ ಪುರಭವನದಲ್ಲಿ ಕಾರ್ಮಿಕರ ಸಂಘಟನೆಗಳ ಜಂಟಿ ಸಮಿತಿ ಹಾಗೂ ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ ಸಹಯೋಗದಲ್ಲಿ ಕಾರ್ಮಿಕರ ದಿನದ ಪ್ರಯುಕ್ತ  ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿದ್ದು, ಆ ಮೂಲಕ ಕಾರ್ಮಿಕರ ಕಾನೂನು, ಕಾಯ್ದೆಗಳನ್ನು ವಿಲೀನಗೊಳಿಸಿ ಅವುಗಳನ್ನು ದುರ್ಬಲಗೊಳಿಸಲು ಮುಂದಾಗಿವೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಕಾರ್ಮಿಕರಿಗೆ ವೇತನ ಭತ್ಯೆ, ಪಿಎಫ್, ಇಎಸ್‌ಐ ಸೇರಿದಂತೆ ಇತ್ಯಾದಿ ಸೌಲಭ್ಯಗಳನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದ್ದು, ಯಾವುದೇ ಚರ್ಚೆ ಮಾಡದೆ ಕಾರ್ಮಿಕರಿಗೆ ಸಂಬಂಧಿಸಿದ ಕಾನೂನುಗಳನ್ನು ಏಕಾಏಕಿ ಜಾರಿಗೊಳಿಸುವ ಮೂಲಕ ಕೋಟ್ಯಂತರ ಕಾರ್ಮಿಕರನ್ನು ಚಿಂತೆಗೀಡು ಮಾಡಿದೆ ಎಂದು ಟೀಕಿಸಿದರು.

ನಿರುದ್ಯೋಗ ಬಗೆಹರಿಸಿಲ್ಲ: ಅಚ್ಚೇ ದಿನ್‌ ಬರಲಿದೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಸಾಧ್ಯವಾಗಿಲ್ಲ. ಇದಕ್ಕೆ ಪೂರಕವಾಗಿ ಉದ್ಯೋಗವನ್ನು ಸೃಷ್ಟಿಸಿಲ್ಲ. ಇನ್ನು ಕಾರ್ಮಿಕರು ಪ್ರತಿಭಟನೆ ಅಥವಾ ಮುಷ್ಕರ ನಡೆಸಿದರೆ ಕಾರ್ಮಿಕರೊಂದಿಗೆ ಚರ್ಚಿಸುವ ಸೌಜನ್ಯವೂ ಕೇಂದ್ರ ಸರ್ಕಾರಕ್ಕಿಲ್ಲ ಎಂದು ಕಿಡಿಕಾರಿದರು.

ಚುನಾವಣೆಯಲ್ಲಿ ಸಮರ್ಥ ಹಾಗೂ ಉತ್ತಮ ಆಡಳಿತ ನಡೆಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ನಮ್ಮ ಕೈಯಲ್ಲಿದೆ. ಹೀಗಾಗಿ ಚುನಾವಣೆಯಲ್ಲಿ ಕಾರ್ಪೋರೆಟ್‌ ಹಾಗೂ ಉದ್ಯಮಿಗಳ ಪರವಾಗಿ ನಿಲ್ಲುವ, ಕೋಮುವಾದಿ ಮತ್ತು ಕಾರ್ಮಿಕರ ವಿರೋಧಿ ಪಕ್ಷಗಳನ್ನು ತಿರಸ್ಕರಿಸಿ, ಕಾರ್ಮಿಕರ ಪರವಾಗಿರುವ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಬಂಡವಾಳಶಾಹಿಗಳನ್ನು ಪ್ರೋತ್ಸಹಿಸುವ ಅಭ್ಯರ್ಥಿಗಳನ್ನು ದೂರ ಇಡಬೇಕಿದೆ ಎಂದು ತಿಳಿಸಿದರು.

Advertisement

ರಾಜಕೀಯ ಪ್ರಜ್ಞೆ ಅಗತ್ಯ: ಎಐಯುಟಿಯುಸಿ ಜಿಲ್ಲಾ ಸಂಘಟನಾಕಾರ ಬಿ.ರವಿ ಮಾತನಾಡಿ, ಕಾರ್ಮಿಕರು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕಿದ್ದು, ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಆತನ ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಅರಿತುಕೊಳ್ಳಬೇಕಿದೆ. ಇದರೊಂದಿಗೆ ಜನರ ಏಳಿಗೆಗಾಗಿ ಕೆಲಸ ಮಾಡುವ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು.

ಹೀಗೆ ಆಯ್ಕೆ ಮಾಡಿದಲ್ಲಿ ವ್ಯವಸ್ಥೆ ಸರಿಯಾಗಿದ್ದರೆ ಎಲ್ಲಾ ಸೌಕರ್ಯಗಳು ಜನರಿಗೆ ತಲುಪಲಿವೆ. ಹೀಗಾಗಿ ಕಾರ್ಮಿಕರು ರಾಜಕೀಯ ಪ್ರಜ್ಞೆ ಬೆಳೆಸಿಕೊಂಡು ಜನಪ್ರತಿನಿಧಿಗಳನ್ನು ಪ್ರಶ್ನೆ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಕಾರ್ಮಿಕ ದಿನಾಚರಣೆ ಅಂಗವಾಗಿ ಕಾರ್ಮಿಕರ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ನೂರಾರು ಕಾರ್ಮಿಕರು ಪುರಭವನ, ದೊಡ್ಡ ಗಡಿಯಾರ ವೃತ್ತ, ಗಾಂಧಿಚೌಕ ಮಾರ್ಗದಲ್ಲಿ ಬೃಹತ್‌ ಮೆರವಣಿಗೆ ನಡೆಸಿದರು. ಕಾರ್ಯಕ್ರಮದಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಮುರಳೀಧರ ಪೇಶ್ವ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಜಯರಾಂ, ಎಐಟಿಯುಸಿ ರಾಜು, ಎಐಯುಟಿಯುಸಿ ಜಿಲ್ಲಾ ಸಂಚಾಲಕಿ ವಿ.ಯಶೋಧಾ, ಕಾಮ್ರೇಡ್‌ ಜವರಯ್ಯ ಮತ್ತಿತರಿರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next