ಹೊಸದಿಲ್ಲಿ: ಮೊರೊಕ್ಕೊದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ “ಡೈಮಂಡ್ ಲೀಗ್ ಮೀಟ್’ನಲ್ಲಿ ಭಾರತದ ಅವಿನಾಶ್ ಸಬ್ಲೆ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿ 5ನೇ ಸ್ಥಾನದ ಗೌರವ ಸಂಪಾದಿಸಿದ್ದಾರೆ. ಈ ವೇಳೆ ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತನನ್ನು ಹಿಂದಿಕ್ಕಿದರೂ ಸಬ್ಲೆ ಪದಕ ಗೆಲ್ಲುವಲ್ಲಿ ವಿಫಲರಾದರು.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ 27 ವರ್ಷದ ಆರ್ಮಿಮ್ಯಾನ್ ಅವಿನಾಶ್ ಸಬ್ಲೆ 3,000 ಮೀ. ಸ್ಟೀಪಲ್‌ಚೇಸ್ ದೂರವನ್ನು 8:12.48 ಸೆಕೆಂಡ್‌ಗಳಲ್ಲಿ ಮುಗಿಸಿದರು. ಕಳೆದ ಮಾರ್ಚ್ ನಲ್ಲಿ ತಿರುವನಂತಪುರದಲ್ಲಿ ನಡೆದ ಇಂಡಿಯನ್ ಗ್ರ್ಯಾನ್‌ಪ್ರೀಯಲ್ಲಿ 8:16.21 ಸೆಕೆಂಡ್‌ಗಳ ಸಾಧನೆಯೊಂದಿಗೆ ಅವಿನಾಶ್ ರಾಷ್ಟ್ರೀಯ ದಾಖಲೆ ನಿರ್ಮಿ ಸಿದ್ದರು. ಈ ದಾಖಲೆ ಇವರಿಂದಲೇ ಪತನಗೊಂಡಿತು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಆತಿಥೇಯ ದೇಶದ ಸೌಫಿಯೇನ್ ಎಲ್ ಬಕ್ಕಲಿ ಚಿನ್ನದ ಪದಕ ಗೆದ್ದರು (7:58.28). ಟೋಕಿಯೋದಲ್ಲಿ ಬೆಳ್ಳಿ ಗೆದ್ದ ಇಥಿಯೋಪಿಯಾದ ಲೆಮೆಕ ಗಿರ್ಮ ಬೆಳ್ಳಿ (7:59.54), ಇಥಿಯೋ ಪಿಯಾದ ಮತ್ತೋರ್ವ ಓಟಗಾರ ಹೈಲೆಮರಿಯಮ್ ಟೆಗೆನ್ ಕಂಚು ಜಯಿಸಿದರು (8:06.29). 4ನೇ ಸ್ಥಾನ ರಿಯೋ ಒಲಿಂಪಿಕ್ಸ್ ಚಾಂಪಿಯನ್, ಕೀನ್ಯಾದ ಕನ್ಸೆಲ್ಸಸ್ ಕಿಪ್ರೊಟೊ ಅವರ ದಾಯಿತು (8:12.47).
8 ಸಲ ದಾಖಲೆ
ಅವಿನಾಶ್ ಸಬ್ಲೆ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿಯುತ್ತಿರುವುದು ಇದು 8ನೇ ಸಲ ಎಂಬುದು ಉಲ್ಲೇಖನೀಯ. ಅವರು ಮೊದಲ ಸಲ ಈ ದಾಖಲೆಯನ್ನು ಮುರಿದದ್ದು 2018ರಲ್ಲಿ (8:29.80).
ಪುರುಷರ 5,000 ಮೀ. ನ್ಯಾಶನಲ್ ರೆಕಾರ್ಡ್ ಕೂಡ ಸಬ್ಲೆ ಹೆಸರಲ್ಲೇ ಇದೆ. ಕಳೆದ ತಿಂಗಳಷ್ಟೇ ನಡೆದ ಯುಎಸ್‌ಎ ಟೂರ್ನಿಯಲ್ಲಿ ಅವರು 13 ನಿಮಿಷ, 25.65 ಸೆಕೆಂಡ್‌ಗಳಲ್ಲಿ ಈ ದೂರ ಕ್ರಮಿಸಿದ್ದರು. ಇದರೊಂದಿಗೆ 1992ರಲ್ಲಿ ಬಹಾದೂರ್ ಪ್ರಸಾದ್ ಬರ್ಮಿಂಗ್‌ಹ್ಯಾಮ್‌ನಲ್ಲಿ ನಿರ್ಮಿಸಿದ ದಾಖಲೆ ಪತನಗೊಂಡಿತ್ತು (13:29.70).