Advertisement

ಬಹುಪ”ರಾಕ್‌’:ದಮ್ಮು ರಿದಮ್ಮುಗಳ ಅಲೆಯಲ್ಲಿ ಅವಿಯಲ್‌ ಮೋಡಿ

04:16 PM Jun 23, 2018 | |

  ಸುಮಾರು 60 ಮತ್ತು 70ರ ದಶಕಗಳಲ್ಲೇ ಭಾರತದಲ್ಲಿ ಪಾಶ್ಚಾತ್ಯ ಸಂಗೀತ ನುಡಿಸುವ ಸಂಗೀತ ತಂಡಗಳು ಹುಟ್ಟಿಕೊಂಡಿದ್ದು ಮಾತ್ರವಲ್ಲ, ಪ್ರಖ್ಯಾತಿಯನ್ನು ಪಡೆದಿದ್ದವು. ಕಲ್ಕತ್ತಾ, ಮುಂಬೈ ಅದರಲ್ಲೂ ಬೆಂಗಳೂರಿನ ಎಂ.ಜಿ ರಸ್ತೆ ಪಾಶ್ಚಾತ್ಯ ಸಂಗೀತ ತಂಡಗಳಿಗೆ ವೇದಿಕೆಯಾಗಿದ್ದವು. ನಾಡಿನ ವಿವಿಧೆಡೆಗಳಿಂದ ಸಂಗೀತ ಕೇಳಲೆಂದೇ ಇಲ್ಲಿಗೆ ಬರುತ್ತಿದ್ದರು. ಈಗಲೂ ಬರುತ್ತಾರೆ. ಏಕೆ? ಎಂಬ ಪ್ರಶ್ನೆಗೆ ಉತ್ತರದಂತಿತ್ತು ಮೊನ್ನೆ ನಡೆದ “ಅವಿಯಲ್‌’ ತಂಡದ ರಾಕ್‌ ಸಂಗೀತ ಕಛೇರಿ…

Advertisement

ಇಂದು ನೆನ್ನೆಯಲ್ಲ, ಐದಾರು ದಶಕಗಳ ಹಿಂದಿನಿಂದಲೂ ನಗರದ ಎಂ.ಜಿ ರಸ್ತೆಯಲ್ಲಿ ಭಾರತದ ಪ್ರಖ್ಯಾತ ಇಂಡೀ(ಸ್ವತಂತ್ರ) ಮ್ಯೂಸಿಕ್‌ ಬ್ಯಾಂಡುಗಳು ಪ್ರದರ್ಶನ ನೀಡುತ್ತಲೇ ಬಂದಿವೆ. ಕಾಸ್ಮೋಪಾಲಿಟನ್‌ ನಗರವೂ ಆಗಿರುವ ಬೆಂಗಳೂರಿನಲ್ಲಿ ಪರಭಾಷಿಕರು ಅಧಿಕ ಸಂಖ್ಯೆಯಲ್ಲಿ ನೆಲೆಸಿರುವುದರಿಂದ ಎಲ್ಲಾ ಪ್ರಕಾರದ ಸಂಗೀತ ತಂಡಗಳಿಗೆ ಶ್ರೋತೃಗಳು ಇಲ್ಲಿ ಸಿಗುತ್ತಾರೆ ಎನ್ನುವುದು ಇದಕ್ಕೊಂದು ಕಾರಣ. ಈ ನೆಪದಲ್ಲಿ ಜಗತ್ತಿನ, ನಾಡಿನ ಪ್ರತಿಭಾನ್ವಿತ ಸ್ವತಂತ್ರ ಸಂಗೀತಗಾರರ ಪ್ರದರ್ಶನವನ್ನು ಕಣ್ಣಾರೆ ಕಾಣುವ ಆ ಅಭೂತಪೂರ್ವ ಅನುಭವಕ್ಕೆ ಸಾಕ್ಷಿಯಾಗುವ ಸುಯೋಗ ಬೆಂಗಳೂರಿಗರದು. 

  ಇದಿಷ್ಟೂ ಪೀಠಿಕೆ ಏಕೆಂದರೆ ವಿಶ್ವ ಸಂಗೀತ ದಿನದ ಅಂಗವಾಗಿ ಜೂನ್‌ 21ರಂದು ಭಾರತದ ಪ್ರಖ್ಯಾತ ಮಲಯಾಳಿ ಇಂಡೀ ಮ್ಯೂಸಿಕ್‌ ಬ್ಯಾಂಡ್‌ “ಅವಿಯಲ್‌’ ನಗರದಲ್ಲಿ ಪ್ರದರ್ಶನ ನೀಡಿತು. “ಆರ್ಟಿಸ್ಟ್‌ ಅಲೌಡ್‌’ ಸಂಸ್ಥೆ ಪ್ರಾಯೋಜಿಸಿದ್ದ ಈ ರಾಕ್‌ ಕಛೇರಿಯಲ್ಲಿ ಸಂಗೀತ ಪ್ರಿಯರು ಈ ಪ್ರದರ್ಶನದಲ್ಲಿ ಪಾಲ್ಗೊಂಡು ತನ್ಮಯರಾಗಿ ಮೈಮರೆತರು. ಪ್ರದರ್ಶನಕ್ಕೆ ಮುನ್ನ ನಡೆಸಿದ ತಾಲೀಮಿನಲ್ಲಿ “ಉದಯವಾಣಿ’ಯನ್ನು ತಂಡ ಆಹ್ವಾನಿಸಿತ್ತು. ತಂಡದ ಸದಸ್ಯರು ಸಂಗೀತ ನುಡಿಸುತ್ತಲೇ ಮಾತಿಗೂ ಸಿಕ್ಕರು. 

ಇಂಟರ್‌ನೆಟ್‌ ಅಲೆಯಿಂದ ಇಂಟರ್‌ನ್ಯಾಷನಲ್‌ವರೆಗೆ
ಇಂದಿಗೆ ಸರಿಯಾಗಿ ಸುಮಾರು 15 ವರ್ಷಗಳ ಹಿಂದೆ ಗಿಟಾರ್‌ ವಾದಕ ರೆಕ್ಸ್‌ ವಿಜಯನ್‌ ಮತ್ತು ಟೋನಿ ಜಾನ್‌ ಮತ್ತು ಗೆಳೆಯರು ಸೇರಿ “ನಡ ನಡ…’ ಎಂಬ ಹಾಡನ್ನು ಸಂಯೋಜಿಸಿ ಇಂಟರ್‌ನೆಟ್‌ನಲ್ಲಿ ಬಿಡುಗಡೆಗೊಳಿಸಿದ್ದರು. ಅಲ್ಲಿಯ ತನಕ ಇತರ ಮ್ಯೂಸಿಕ್‌ ಬ್ಯಾಂಡ್‌ಗಳಂತೆ ಇಂಗ್ಲಿಷ್‌ ಹಾಡುಗಳನ್ನು ಮಾತ್ರವೇ ಹಾಡುತ್ತಿದ್ದ ಅವರು ಮೊದಲ ಬಾರಿ ಮಲಯಾಳಿ ಹಾಡನ್ನು ಸಂಯೋಜಿಸಿದ್ದರು. ಅವರ ಆಶ್ಚರ್ಯಕ್ಕೆ ಎಣೆಯೇ ಸಿಗದಂತೆ ಆ ಹಾಡು ಭಾರತದ ಸಂಗೀತ ಜಗತ್ತಿನಲ್ಲಿ ಹೊಸ ಅಲೆಯನ್ನೇ ಎಬ್ಬಿಸಿತ್ತು. ಆಗಲೇ ಅವಿಯಲ್‌ ತಂಡ ಹುಟ್ಟಿಕೊಂಡಿತು. ಭಾರತದಾದ್ಯಂತ “ಅವಿಯಲ್‌’ ತಂಡಕ್ಕೆ ಅಭಿಮಾನಿಗಳೂ ಹುಟ್ಟಿಕೊಂಡರು. ಅಲ್ಲಿಂದ ಮಲಯಾಳಿ ಜಾನಪದ ಹಾಡುಗಳನ್ನು ಆರಿಸಿಕೊಂಡು, ಲಿರಿಕ್ಸ್‌ ಕೊಂಚ ಬದಲಾಯಿಸಿಕೊಂಡು ಹಾಡುತ್ತಾ ಬಂದರು. ಈಗ ಅದೇ ಅವರನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. 

Advertisement

ಅವಿಯಲ್‌ ತಂಡ ಇಲ್ಲಿಯವರೆಗೆ ಬಿಡುಗಡೆ ಮಾಡಿದ್ದು ಒಂದು ಸಂಗೀತ ಆಲ್ಬಂ ಮಾತ್ರ. ಜೊತೆಗೆ ನಾಲ್ಕು ಪ್ರತ್ಯೇಕ ಹಾಡುಗಳು. ಇವಿಷ್ಟರಿಂದಲೇ ತಂಡ ಇಂದಿಗೂ ಪ್ರಖ್ಯಾತಿಯನ್ನು ಉಳಿಸಿಕೊಂಡಿದೆ ಎನ್ನುವುದು ಅವರ ಹೆಗ್ಗಳಿಕೆ. ಪ್ರಸ್ತುತ, ತಂಡದಲ್ಲಿ ಪ್ರಮುಖ ಗಾಯಕರಾಗಿ ಟೋನಿ ಜಾನ್‌, ಅಪ್ರತಿಮ ಗಿಟಾರ್‌ ವಾದಕ ರೆಕ್ಸ್‌ ವಿಜಯನ್‌, ಬೇಸ್‌ನಲ್ಲಿ ಬಿನ್ನಿ ಇಸಾಕ್‌, ಡ್ರಮ್ಮರ್‌ ಮಿಥುನ್‌ ಮತ್ತು ತಂಡದ ಏಕೈಕ ಮಹಿಳಾ ಸದಸ್ಯೆ ನೇಹಾ ನಾಯರ್‌ ಇದ್ದಾರೆ.

 ಹಣ ಸಂಪಾದಿಸಲು ಬಂದಿಲ್ಲ! – ಟೋನಿ ಜಾನ್‌ 

ನಿಮ್ಮ ಪಾಲಿಗೆ “ಸಂಗೀತ’ ಎಂದರೇನು?
ಆತ್ಮ

ನೀವು ಸಿನಿಮಾಗಳಲ್ಲೂ ಕೆಲಸ ಮಾಡಿದ್ದೀರಿ. ಅದಿಷ್ಟವೋ ತಂಡದೊಂದಿಗೆ ಪ್ರದರ್ಶನ ನೀಡುವುದು ಇಷ್ಟವೋ?
ವೇದಿಕೆ ಮೇಲೆ ಪ್ರದರ್ಶನ ನೀಡುವುದೇ ಇಷ್ಟ

ಸಿನಿಮಾ ಸಂಗೀತದ ಬಗ್ಗೆ ಒಂದೆರಡು ಮಾತು
ನಾನು ಸಾಮಾನ್ಯವಾಗಿ ಸಿನಿಮಾ ಹಾಡುಗಳನ್ನು ಕೇಳುವುದಿಲ್ಲ. ಏಕೆಂದರೆ, ಅವುಗಳಲ್ಲಿ ಫೀಲ್‌ ಇರೋದಿಲ್ಲ. ನಮ್ಮ ಅಂತರಾಳವನ್ನು ತಲುಪೋ ಸಾಮರ್ಥ್ಯ ಇರೋದಿಲ್ಲ.

ಮೊದಲು ಎಂಜಾಯ್‌ ಮಾಡಿದ ಹಾಡು
ಚಿಕ್ಕವನಾಗಿದ್ದಾಗ ಅಮ್ಮ ನನ್ನನ್ನು ಹೆಗಲ ಮೇಲೆ ಮಲಗಿಸಿಕೊಂಡು ಹಾಡುತ್ತಿದ್ದ ಜೋಗುಳ

ಬಿಡುವಿನ ವೇಳೆಯನ್ನು ಹೇಗೆ ಕಳೆಯುತ್ತೀರಿ?
ಗೆಳೆಯರ ದೊಡ್ಡ ಗ್ಯಾಂಗೇ ಇದೆ. ಅವರೊಂದಿಗೆ ಹರಟೆ, ಮೋಜು ಅಂತ ಸಮಯ ಹೋಗುತ್ತೆ. ಅದು ಬಿಟ್ಟರೆ ಲಿಯೋ ಜೊತೆ ಹೊತ್ತು ಕಳೆಯೋದು ತುಂಬಾ ಖುಷಿ ಕೊಡುತ್ತೆ. ಲಿಯೋ ನನ್ನ ಮುದ್ದಿನ ನಾಯಿ. 

ಮದುವೆ? ಗರ್ಲ್ಫ್ರೆಂಡ್ಸ್‌?
ಸದ್ಯಕ್ಕಂತೂ ನಾನು ಸಿಂಗಲ್‌. ಮದುವೆ ಯೋಚನೆ ಈಗಿಲ್ಲ. ಆ ಗಂಡಾಂತರದಿಂದ ಸ್ವಲ್ಪ ಸಮಯದ ಮಟ್ಟಿಗೆ ಬಚಾವ್‌ ಎನ್ನಬಹುದು.

ನೀವೆಷ್ಟು ಶ್ರೀಮಂತರು?
(ನಗು) ಇಲ್ಲ… ಯಾವೊಬ್ಬ ಇಂಡಿಪೆಂಡೆಂಟ್‌ ಸಂಗೀತಗಾರನೂ ಶ್ರೀಮಂತ ಆಗಿರೋಲ್ಲ. ಬಂದ ಹಣ ಖರ್ಚಾಗ್ತಾ ಇರುತ್ತೆ. ಕಷ್ಟದ ದಿನಗಳು ಇದ್ದೇ ಇರುತ್ತೆ. ಆದರೆ ನಾವಿಲ್ಲಿ ಬಂದಿರೋದು ಹಣ ಮಾಡಲಂತೂ ಖಂಡಿತ ಅಲ್ಲ, ಆತ್ಮತೃಪ್ತಿಗೆ.

ಕೋಮಾ ಗುಣ ಪಡಿಸಿದ ಹಾಡು!
ನಮಗೆ ಗೊತ್ತಿಲ್ಲದಂತೆಯೇ ಅನೇಕ ಮನಸ್ಸುಗಳನ್ನು ಮುಟ್ಟುವ, ಖುಷಿಪಡಿಸುವ ಶಕ್ತಿ ಇದೆ ಸಂಗೀತಕ್ಕೆ. ಕೆಲ ಸಮಯದ ಹಿಂದೆ ಫೇಸ್‌ಬುಕ್‌ನಲ್ಲಿ ಮಹಿಳೆಯೊಬ್ಬರು ಮೆಸೇಜ್‌ ಮಾಡಿದ್ದರು. ಅವರ ತಂದೆ ಕೋಮಾಗೆ ಜಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಂತೆ. ಈ ಮಹಿಳೆ ಪ್ರತಿದಿನವೂ ನನ್ನ “ನಗುಮೋ…’ ಹಾಡನ್ನು ಅವರಿಗೆ ಕೇಳಿಸುತ್ತಿದ್ದರಂತೆ. ಒಂದು ವಾರ ಕಳೆಯುತ್ತಿದ್ದಂತೆ ಅವರ ತಂದೆಗೆ ಪ್ರಜ್ಞೆ ಬಂದಿತಂತೆ. ಅವರನ್ನು ನಿಜಕ್ಕೂ ಗುಣಪಡಿಸಿದ್ದು ನನ್ನ ಹಾಡೇ ಅಲ್ಲವೇ ಎಂಬುದು ನನಗೆ ಖಚಿತವಾಗಿ ಗೊತ್ತಿಲ್ಲ. ಆದರೆ, ಆ ಮಹಿಳೆ ಆ ಕತೆ ಹೇಳಿಕೊಂಡು ಧನ್ಯವಾದ ಅರ್ಪಿಸಿದಳಲ್ಲ ಅದನ್ನು ನೆನೆದಾಗ ತುಂಬಾ ತೃಪ್ತಿಯಾಗುತ್ತೆ.


– ನೇಹಾ ನಾಯರ್‌, “ಅವಿಯಲ್‌’ ತಂಡದ ಗಾಯಕಿ

ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next