ಹೊಸದಿಲ್ಲಿ: 2009 ರಲ್ಲಿ ಹಾಲಿವುಡ್ ನಲ್ಲಿ ಸಂಚಲನ ಸೃಷ್ಟಿಸಿದ್ದ ಸೈನ್ಸ್ -ಫಿಕ್ಷನ್ ‘ಅವತಾರ್ʼ ಚಿತ್ರ ಮತ್ತೊಮ್ಮೆ ಥಿಯೇಟರ್ ನಲ್ಲಿ ಮರು ಬಿಡುಗಡೆಯಾಗಲು ಸಿದ್ಧತೆ ನಡೆಸಿದೆ.
ಅದ್ಧೂರಿ ತಂತ್ರಜ್ಞಾನ, ಎಡಿಟಿಂಗ್, ಗ್ರಾಫಿಕ್ಸ್ ಛಾಯಗ್ರಹಣ, ಸೌಂಡ್ ಎಫೆಕ್ಟ್ ಹೀಗೆ ಎಲ್ಲಾ ವಿಭಾಗದಲ್ಲೂ ಸಿನಿ ರಸಿಕರನ್ನು ಮೋಡಿ ಮಾಡಿ, ಥಿಯೇಟರ್ ನಲ್ಲಿ ಕೂರಿಸಿ, ಬೇರೆ ಲೋಕಕ್ಕೆ ಪಯಣ ಬೆಳೆಸಿದ್ದ ಜೇಮ್ಸ್ ಕ್ಯಾಮೆರಾನ್ ಅವರ ʼಅವತಾರ್ʼ ಚಿತ್ರ ಹಾಲಿವುಡ್ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಮ್ಯಾಜಿಕ್ ಮಾಡಿತ್ತು. ಚಿತ್ರ ಬಿಡುಗಡೆಯಾಗಿ 13 ವರ್ಷಗಳು ಕಳೆದಿವೆ. ಚಿತ್ರದ ಮುಂದಿನ ಭಾಗವೂ ಬಿಡುಗಡೆಗೆ ಸಿದ್ದವಾಗಿದೆ. ಆದರೆ ಮತ್ತೊಮ್ಮೆ ʼಅವತಾರ್ʼ ಕಾಡಿನ ಲೋಕದ ಸಫಾರಿ ಮಾಡಿಸಲು ಥಿಯೇಟರ್ ಗೆ ಲಗ್ಗೆಯಿಡಲಿದೆ.
ಹಾಲಿವುಡ್ ಸ್ಟಾರ್ ಗಳಾದ ಸ್ಯಾಮ್ ವರ್ಥಿಂಗ್ಟನ್, ಜೊಯ್ ಸಲ್ಡಾನಾ, ಸ್ಟೀಫನ್ ಲ್ಯಾಂಗ್, ಜಿಯೋವಾನಿ ರಿಬಿಸಿ ಮುಂತಾದವರು ನಟಿಸಿದ್ದ ಅವತಾರ್ ಚಿತ್ರ 3 ಆಸ್ಕರ್ ಪ್ರಶಸ್ತಿಯೊಂದಿಗೆ ಹತ್ತು ಹಲವಾರು ವಿಭಾಗದಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಎರಡನೇ ಭಾಗದ ಮೊದಲು ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಅವತಾರ್ ಮೊದಲ ಭಾಗವನ್ನು ಮತ್ತೊಮ್ಮೆ ಥಿಯೇಟರ್ ನಲ್ಲಿ ಮರು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. 4K ಮಾದರಿಯ ತಂತ್ರಜ್ಞಾನ ಹಾಗೂ ಗ್ರಾಫಿಕ್ಸ್ ಅಳವಡಿಸಿ ಚಿತ್ರ ಸೆಪ್ಟೆಂಬರ್ 23 ರಂದು ರೀ- ರಿಲೀಸ್ ಆಗಲಿದೆ. ಮತ್ತೊಮ್ಮೆ ಚಿತ್ರ ಥಿಯೇಟರ್ ರಿಲೀಸ್ ಆಗುತ್ತಿರುವುದಿಂದ ಕೆಲ ಓಟಿಟಿಯಲ್ಲಿ ಅವತಾರ್ ಚಿತ್ರದ ಸ್ಟ್ರೀಮಿಂಗ್ ನಿಲ್ಲಿಸಲಾಗಿದೆ. ಅಂದ ಹಾಗೆ ಚಿತ್ರ ರೀ- ರಿಲೀಸ್ ಆಗಿ ಎರಡು ವಾರ ಮಾತ್ರ ಥಿಯೇಟರ್ ನಲ್ಲಿರುತ್ತದೆ. ಚಿತ್ರದ ಹೊಸ ಟ್ರೇಲರ್ ಕೂಡ ರಿಲೀಸ್ ಮಾಡಲಾಗಿದೆ.
ಈ ಹಿಂದೆ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಅವತಾರ್ ಚಿತ್ರ ಒಟ್ಟು 5 ಭಾಗಗಳಾಗಿ ಬರಲಿದೆ ಎಂದು ಹೇಳಿದ್ದರು. ಅದರಂತೆ ಚಿತ್ರದ 2ನೇ ಭಾಗಕ್ಕೆ “ಅವತಾರ್ : ದಿ ವೇ ಆಫ್ ವಾಟರ್” ಎಂದು ಟೈಟಲ್ ಇಡಲಾಗಿದ್ದು, ಇದೇ ವರ್ಷ ಡಿಸೆಂಬರ್ 16 ರಂದು ಚಿತ್ರ ರಿಲೀಸ್ ಆಗಲಿದೆ ಎಂದು ಚಿತ್ರ ತಂಡ ಘೋಷಿಸಿದೆ.