Advertisement
ಇತ್ತೀಚೆಗೆ ನಮ್ಮ ಮನೆಯ ಕುಕ್ಕರ್ ಕೈಕೊಟ್ಟಿತ್ತು. ಗ್ಯಾಸ್ಕೆಟ್ ಬದಲಿಸಿ, ಹಿಡಿಯ ಸ್ಕ್ರೂ ಬದಲಿಸಿ, ಏನೆಲ್ಲ ಸರ್ಕಸ್ ಮಾಡಿದರೂ ಅದರ ಮುನಿಸು ಇಳಿದಿರಲಿಲ್ಲ. ಅಚಾನಕ್ಕಾಗಿ ಸಿಕ್ಕ ಕುಕ್ಕರ್ ರಿಪೇರಿಯ ಅಜ್ಜ ಮನೆಗೆ ಬಂದು, ಅದನ್ನು ರಿಪೇರಿ ಮಾಡಿಕೊಟ್ಟಿದ್ದಲ್ಲದೇ, ಸಣ್ಣಗೆ ಉರಿಯುತ್ತಿದ್ದ ಗ್ಯಾಸ್ ಬರ್ನರ್ ರಿಪೇರಿ ಮಾಡಿದ. ಉತ್ತರ ಭಾರತೀಯರು ಇಂಥ ಅಡ್ಜಸ್ಟ್‌ಮೆಂಟ್‌ಗಳಿಗೆ ‘ಜುಗಾದ್’ ಅಂತ ಕರೆಯೋದು ನೆನಪಿಗೆ ಬಂತು.
Related Articles
Advertisement
ಜುಗಾದ್ ಹಿಂದಿನ ಕಲೆಗಾರಿಕೆಈ ಎಲ್ಲ ಜುಗಾದ್‌ಗಳ ಹಿಂದೆಯೂ ಅಪಾರ ಜೀವನಪ್ರೀತಿ, ಮಿತವ್ಯಯ ಅಂತೆಯೇ ಸೃಜನಶೀಲತೆ, ಹೊಸದರಲ್ಲಿ ಹಳೆಯದನ್ನು ಮಿಳಿತಗೊಳಿಸುವ ಕಲೆಗಾರಿಕೆ ಇದೆ. ಜೀನ್ಸ್ ಮೇಲೆ ಸಲ್ವಾರ್ ಟಾಪ್ ಹಾಕುವ, ಸೀರೆಯೊಂದಿಗೆ ಜಾಕೆಟ್ ಧರಿಸುವ, ಲುಂಗಿ ಉಟ್ಟುಕೊಂಡು ಸಂಗೀತ ಹೇಳುವ- ಹೀಗೆ ಇದೊಂದು ರೀತಿಯ ಫ್ಯೂಶನ್ ಕೂಡ. ಅದೇ ರೀತಿ ಬಳೆಯ ಚೂರುಗಳನ್ನು ಅಂದವಾಗಿ ಜೋಡಿಸಿದ ಕ್ರಾಫ್ಟ್, ಕಾಡುಬಳ್ಳಿಗಳಿಂದ ಹೆಣೆಯುವ ಬುಟ್ಟಿ, ಹೀಗೆ ನಮ್ಮ ಕಸೂತಿ, ಕಲೆಗಳಲ್ಲೂ ಸಣ್ಣ ಮಟ್ಟಿಗೆ ಜುಗಾದ್ ಇದೆ ಅನ್ನಬಹುದೇನೋ. ಹಾಗೆ ನೋಡುವುದಿದ್ದರೆ, ಗಾಳಿಯಂತ್ರದಿಂದ ಹಿಡಿದು ವಿಮಾನದವರೆಗೆ ಎಲ್ಲ ಸಂಶೋಧನೆಗಳೂ ಮಾನವ ಜೀವಿತವನ್ನು ಸುಗಮಗೊಳಿಸುವ ಪ್ರಯತ್ನಗಳೇ ಆಗಿದ್ದವು ಅಲ್ಲವೆ? ಹಳ್ಳಿಗರ ಅರಿವಿನ ಲೋಕ
ತೋಟದಲ್ಲಿ ತನ್ನ ಪಾಡಿಗೆ ಪಂಪು ರಿಪೇರಿ ಮಾಡುವ ಕೃಷಿಕರು, ತೆಂಗಿನ ಮರವೇರಲು, ಎಳನೀರು ಕೊಚ್ಚಲು ಎಂದೆಲ್ಲ ಯಂತ್ರ ಕಂಡು ಹುಡುಕುವ ಸೃಜನಶೀಲರು- ಎಲ್ಲರೂ ಒಂದು ರೀತಿಯ ಸಂಶೋಧಕರು. ಹಾಗಿದ್ದರೂ ಜುಗಾದ್ ನ ಸ್ವರೂಪ ಕೊಂಚ ಭಿನ್ನ. ಅದು ಅನಕ್ಷರಸ್ಥರ, ಕಡಿಮೆ ಆದಾಯದವರ ಪ್ರಪಂಚ. ಅದು ಟೆಕ್ನಾಲಜಿಯನ್ನು ಬಡತನಕ್ಕೆ ಒಗ್ಗಿಸಿಕೊಂಡ ರೂಪ. ನಾಲ್ಕೈದು ವೈರ್, ಸ್ವಿಚ್, ಹಾಗೆ ಎಲ್ಲ ಬಳಸಿ ತಾನೇ ಫ್ಯಾನ್ ತಯಾರಿಸುವವರು, ಸೈಕಲ್ ಗಾಡಿಯ ಹಿಂಭಾಗದಲ್ಲಿ ದೊಡ್ಡ ಸ್ಟೀಲ್ ಬಾಸ್ಕೆಟ್ ಇಟ್ಟು ಬೆಡ್‌ಶೀಟ್ ಮಾರುವವರು- ಹೀಗೆ ಅದೊಂದು ಆವಶ್ಯಕತೆ ಕೂಡ. ಒಟ್ಟಿನಲ್ಲಿ ಕಡಿಮೆ ಖರ್ಚಿನಲ್ಲಿ ಶ್ರಮವನ್ನು ಸರಳಗೊಳಿಸುವ ವಿಧಾನಗಳನ್ನು “ಜುಗಾದ್’ ಎನ್ನಬಹುದು. ಕೈಯಿಂದ ಓಡಿಸುವ ಟ್ರ್ಯಾಕ್ಟರ್, ಪ್ಲಾಸ್ಟಿಕ್ ಬಾಟಲಿಯಿಂದ ಶವರ್… ಹೀಗೆ. ಜಗತ್ತೇ ‘ಜುಗಾದ್’ಮಯ
ಇತ್ತೀಚೆಗೆ ಜಾಹೀರಾತೊಂದರಲ್ಲಿ ಒಬ್ಬ ಮಹಿಳೆ ಹಳೆಯ, ಉಪಯೋಗಕ್ಕೆ ಬಾರದ ಕಾರನ್ನು ಆಕರ್ಷಕವಾದ ಕ್ಯಾಂಟೀನ್ ಆಗಿ ಪರಿವರ್ತಿಸುತ್ತಾಳೆ. ಇದು ಕೂಡ ಒಂದು ರೀತಿಯ ಜುಗಾದ್. ಇನ್ನೊಂದು ರೀತಿಯಲ್ಲಿ ‘ಜುಗಾದ್’ ಎಂದರೆ ಚತುರತೆ. ಇಂಟರ್ನೆಟ್‌ನಲ್ಲಿ ಜುಗಾದ್ ಎಂದರೆ, ಸೈಕಲ್ ರಿಕ್ಷಾಗಳು, ಟ್ರಾಕ್ಟರ್‌ನ ಹಿಂದೆ ಜೋಡಿಸಿದ ಲಾರಿಯಂತಿರುವ ವಾಹನ, ಒಂದಷ್ಟು ಹಲಗೆಗಳು, ಹಳೆಯ ಜೀಪಿನ ಭಾಗಗಳು ಸೇರಿ ಅತ್ತ ಗಾಡಿಯೂ ಅಲ್ಲದ ಇತ್ತ ಸರಿಯಾದ ವೆಹಿಕಲ್ ಕೂಡ ಅಲ್ಲದ, ಹಳೆಯ ಬಿಡಿಭಾಗಗಳನ್ನು ಜೋಡಿಸಿದ ವಾಹನಗಳು ಕಾಣಸಿಗುತ್ತವೆ. ಇನ್ನೊಂದು ರೀತಿಯಲ್ಲಿ ಇದು ಗುಜರಿಗೆ ಹಾಕಬಹುದಾದ ವಸ್ತುಗಳನ್ನು ಮರುಬಳಕೆ ಮಾಡುವ ವಿಧಾನ. ಟೆಕ್ನಾಲಜಿ, ಡಿಸೈನ್‌ನಲ್ಲಿ ರಿಸರ್ಚ್ ಮಾಡುವವರೂ ಇವನ್ನೆಲ್ಲ ಗಮನಿಸುತ್ತಾರಂತೆ. ಇನ್ನು ದೈನಂದಿನ ಜೀವನದಲ್ಲೂ ಹೀಗೆ ತಮ್ಮ ಜೀವನವನ್ನು ಖರ್ಚಿಲ್ಲದೆ ಸುಗಮಗೊಳಿಸುವ ಚತುರರಿರುತ್ತಾರೆ. ಇತ್ತೀಚೆಗೆ, ತಾನೇ ಒಬ್ಬಳು ಜಾಣೆ ಚೂಡಿದಾರದ ಪ್ಯಾಂಟ್ ಬಟ್ಟೆಯಿಂದ ಜೀನ್ಸ್ ಮೇಲೆ ಹಾಕುವ ಟಾಪ್ ಅನ್ನು ತಾನೇ ಡಿಸೈನ್ ಕೊಟ್ಟು ಹೊಲಿಸಿಕೊಂಡಿದ್ದು ನೋಡಿದೆ. ವಾಷಿಂಗ್ ಮೆಶಿನ್‌ನಲ್ಲಿ ಲಸ್ಸಿ ಮಾಡುವ, ನಂದಿನಿ ಹಾಲು ಪ್ಯಾಕೆಟ್‌ನಲ್ಲಿ ಮೆಹೆಂದಿ ಕೋನ್ ಮಾಡುವ, ಹಳೆ ಆಭರಣಗಳನ್ನೇ ಪಾಲಿಶ್ ಮಾಡಿ ಹೊಸ ಆಭರಣದಂತೆ ಕಂಗೊಳಿಸುವ ‘ಜುಗಾದ್’ ಎನ್ನುವುದು ಫ್ಯಾಷನ್, ಅಡುಗೆ, ತಂತ್ರಜ್ಞಾನ ಎಲ್ಲೆಡೆ ಇದೆ. ಹಳೇ ಸೀರೆಗಳಿಂದ ಕಾಲೊರೆಸು ಮಾಡುವ, ಕೌದಿ ಮಾಡುವ, ಹೀಗೆ ನಮ್ಮ ತಾಯಂದಿರು, ಅಜ್ಜಿಯರು ವಸ್ತುಗಳನ್ನು ‘ರೀ-ಸೈಕಲ್’ ಮಾಡುತ್ತಿದ್ದರು. ಒಟ್ಟಿನಲ್ಲಿ, ಕೈಗೆ ಸಿಗುವ ಸಂಪನ್ಮೂಲಗಳನ್ನು ಹೇಗಾದರೂ ಬಳಸಿ ‘ಸದ್ಯದ’ ಸಮಸ್ಯೆಯನ್ನು ಹೇಗಾದರೂ ಪರಿಹರಿಸಿಕೊಳ್ಳುವ ಅದಮ್ಯ ಕಾರ್ಯಶೀಲತೆಗೆ ಸಾಕ್ಷಿಯಂತಿದೆ ಜುಗಾದ್. – ಜಯಶ್ರೀ ಕದ್ರಿ