Advertisement

ಸ್ಮಾರ್ಟ್ ಆರೋಗ್ಯ ಸೇತು

03:37 PM Apr 20, 2020 | mahesh |

ವಿಶ್ವ ಬ್ಯಾಂಕ್‌ನಿಂದ ಪ್ರಶಂಸೆಗೆ ಪಾತ್ರವಾದ ಭಾರತ ಸರ್ಕಾರದ ಕೊರೊನ ಟ್ರ್ಯಾಕಿಂಗ್‌ ಆಪ್‌ ಆರೋಗ್ಯ ಸೇತುವಿನ ಸುತ್ತ…

Advertisement

ಗೂಗಲ್‌ ಮತ್ತು ಆಪಲ್‌ ಸಂಸ್ಥೆಗಳು ಕೋವಿಡ್ ಟ್ರ್ಯಾಕಿಂಗ್‌ ಆ್ಯಪ್‌ ಅನ್ನು ಅಭಿವೃದ್ಧಿ ಪಡಿಸುವುದಕ್ಕೆ ಮುನ್ನವೇ, ಭಾರತ ಸರ್ಕಾರ ತನ್ನದೇ ಆದಕೋವಿಡ್ ಟ್ರ್ಯಾಕಿಂಗ್‌ ಆ್ಯಪ್‌ ಅನ್ನು ಅಭಿವೃದ್ಧಿ ಪಡಿಸಿತ್ತು. ಇದಕ್ಕೆ ವಿಶ್ವಬ್ಯಾಂಕ್‌ನಿಂದ ಪ್ರಶಂಸೆ ಸಿಕ್ಕಿದೆ. ಕೇವಲ 2.3 ಎಂ.ಬಿ ಗಾತ್ರ ಇರುವ ಈ ಆ್ಯಪ್‌, ಪ್ಲೇಸ್ಟೋರಿನಲ್ಲಿ ಉಚಿತವಾಗಿ ಲಭ್ಯವಿದೆ. ಬಿಡುಗಡೆಯಾದ ಒಂದು ವಾರದಲ್ಲೇ ಒಂದು ಕೋಟಿಗೂ ಹೆಚ್ಚು ಮಂದಿ ಇದನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಆಂಡ್ರಾಯ್ಡ್ ಮತ್ತು ಆ್ಯಪಲ್‌, ಎರಡೂ ಪ್ಲಾಟ್‌ ಫಾರ್ಮಿನಲ್ಲಿ ಆರೋಗ್ಯ ಸೇತು ಆ್ಯಪ್‌ ಲಭ್ಯವಿದೆ.

ಈ ಆ್ಯಪ್‌ ಅನ್ನು, ಸರ್ಕಾರಿ ಸಂಸ್ಥೆ ನ್ಯಾಷನಲ್‌ ಇನ್‌ಫಾರ್ಮೆಟಿಕ್ಸ್ ಸೆಂಟರ್‌ (ಎನ್‌ಐಸಿ) ಅಭಿವೃದ್ಧಿ ಪಡಿಸಿದೆ. ಕನ್ನಡ, ಇಂಗ್ಲಿಷ್‌ ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಈ ಆ್ಯಪ್‌ ಲಭ್ಯವಿದ್ದು, ಇನ್‌ಸ್ಟಾಲ್‌ ಮಾಡುವ ಸಂದರ್ಭದಲ್ಲಿ ಬಳಕೆದಾರ ತನಗೆ ಬೇಕಾದ ಭಾಷೆಯನ್ನು ಆರಿಸಿಕೊಳ್ಳಬಹುದಾಗಿದೆ. ಅಲರ್ಟ್‌ ನೋಟಿಫಿಕೇಷನ್‌ ಈ ಆ್ಯಪ್‌, ಬ್ಲೂಟೂತ್‌ ಮತ್ತು ಲೊಕೇಷನ್‌ ಡಾಟಾ ಸಹಾಯದಿಂದ ಕಾರ್ಯಾಚರಿಸುತ್ತದೆ. ಇದರ ಸಹಾಯದಿಂದ, ಬಳಕೆದಾರ ಕೋವಿಡ್‌- 19 ಸೋಂಕು ತಗುಲಿದ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದಾನೆಯೇ ಇಲ್ಲವೇ ಎಂಬುದನ್ನೂ ತಿಳಿದುಕೊಳ್ಳಬಹುದು. ಎರಡು ವಾರಗಳ ಕಾಲ ಸತತ ಪರೀಕ್ಷೆಗೊಳಪಡಿಸಿದ ನಂತರವೇ, ಆರೋಗ್ಯಸೇತು ಆಪ್‌ ಅನ್ನು ಬಿಡುಗಡೆ ಮಾಡಲಾಗಿದೆ. ಇದರ ಸಹಾಯದಿಂದ, ಭಾರತ ಸರ್ಕಾರ ಕೋವಿಡ್‌ -19 ತಗುಲಿದವರ ಮೇಲೆ ನಿಗಾ ಇರಿಸಲು ಸುಲಭವಾಗುತ್ತದೆ.

ಇದರಲ್ಲಿ, ಭಾರತದ ಎಲ್ಲಾ ರಾಜ್ಯಗಳ ಸಹಾಯವಾಣಿಗಳ ದೂರವಾಣಿ ನಂಬರ್‌ಗಳನ್ನು ನೀಡಲಾಗಿದೆ. ಇದರಲ್ಲಿರುವ ಇನ್ನೊಂದು ಮುಖ್ಯವಾದ ಸವಲತ್ತು ಎಂದರೆ, “ಅಲರ್ಟ್‌’ ನೀಡುವುದು.
ಇತರೆ ಕೊರೊನ ಸೋಂಕಿತ ವ್ಯಕ್ತಿ, ಬಳಕೆದಾರನನ್ನು ಸಮೀಪಿಸುವುದಕ್ಕೆ ಮುನ್ನವೇ, ಬಳಕೆದಾರನಿಗೆ ಅಲರ್ಟ್‌ ಸಂದೇಶ ಕಳಿಸುವ ಮೂಲಕ ಎಚ್ಚರಿಕೆಯನ್ನು ರವಾನಿಸುತ್ತದೆ. ಇದು ಯಾವಾಗ ಸಾಧ್ಯವೆಂದರೆ, ಆಯಾ ಕೊರೊನ ಸೋಂಕಿತರ ಮಾಹಿತಿ ಸರ್ಕಾರದ ಬಳಿ ಲಭ್ಯವಿದ್ದಾಗ, ಮತ್ತು ಅವರು ತಮ್ಮ ಮೊಬೈಲ್‌ ಫೋನಿನಲ್ಲಿ ಬ್ಲೂಟೂತ್‌ ಮತ್ತು ಲೊಕೇಷನ್‌
ಶೇರಿಂಗ್‌ ಡಾಟಾ ಆನ್‌ ಮಾಡಿಟ್ಟುಕೊಂಡಾಗ.

ಖಚಿತ ಹೇಗೆ?
ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಂಡ ನಂತರ, ಬ್ಲೂಟೂತ್‌ ಅನ್ನು ಸದಾಕಾಲ ಆನ್‌ ಮಾಡಿರಬೇಕಾಗುತ್ತದೆ. ಜೊತೆಗೆ “ಲೊಕೇಷನ್‌ ಶೇರಿಂಗ್‌’ ಆಯ್ಕೆಯಡಿ “ಆಲ್ವೇಸ್‌’ ಎಂಬುದನ್ನು ಆಯ್ಕೆ ಮಾಡಿಕೊಳ್ಳ ಬೇಕಾಗುತ್ತದೆ. ಆ್ಯಪ್‌ನ ಸಹಾಯದಿಂದ ಬಳಕೆದಾರರು ತಮ್ಮನ್ನು ತಾವು ಪರೀಕ್ಷೆಮಾಡಿಕೊಳ್ಳುವುದು ಸಾಧ್ಯ. ಯಾರಿಗೇ ಆದರೂ, ತಮ್ಮಲ್ಲಿ ಕೊರೊನ ಕಾಯಿಲೆಯ ಗುಣಲಕ್ಷಣಗಳು ಇದೆ ಎನಿಸಿದಲ್ಲಿ, ಅದನ್ನು ಖಚಿತಪಡಿಸಿಕೊಳ್ಳಲು ಈ ಆ್ಯಪ್‌ನ ಸಹಾಯ ಪಡೆದು ಕೊಳ್ಳಬಹುದು. ಆ್ಯಪ್‌ ಇನ್‌ ಸ್ಟಾಲ್‌ ಮಾಡಿಕೊಂಡ ನಂತರ ತೆರೆದುಕೊಳ್ಳುವ ಪುಟದಲ್ಲಿ “ಸೆಲ್ಫ್ ಅಸೆಸ್‌ಮೆಂಟ್‌ ಟೆಸ್ಟ್’ ಎಂಬ ಆಯ್ಕೆ ಇದೆ. ಅದನ್ನು ಕ್ಲಿಕ್‌ ಮಾಡಿದರೆ ಆ್ಯಪ್‌ ಬಳಕೆದಾರನನ್ನು ಹಲವು ಆರೋಗ್ಯ ಸಂಬಂಧಿ ಪ್ರಶ್ನೆಗಳನ್ನು ಕೇಳುತ್ತದೆ. ಉತ್ತರಗಳ ಆಯ್ಕೆಯನ್ನು ಕೂಡಾ ನೀಡುತ್ತದೆ. ಬಳಕೆದಾರ, ತನಗೆ ಸರಿಹೊಂದುವ ಉತ್ತರವನ್ನು ಆಯ್ಕೆ ಮಾಡಿಕೊಳ್ಳಬೇಕು. ಉದಾ: “ನೀವು ಕಳೆದ 14 ದಿನಗಳಲ್ಲಿ ವಿದೇಶ ಪ್ರಯಾಣ ಮಾಡಿದ್ದೀರಾ?’ ಎಂಬ ಪ್ರಶ್ನೆಗೆ “ಹೌದು’ ಅಥವಾ “ಇಲ್ಲ’ ಉತ್ತರಗಳ ಆಯ್ಕೆ ಇರುತ್ತದೆ. ಹೌದು ಎಂದು ಕ್ಲಿಕ್ಕಿಸಿದರೆ, ಯಾವ ದೇಶ ಎಂಬ ಪ್ರಶ್ನೆಗೆ ಬಳಕೆದಾರ ಉತ್ತರಿಸಬೇಕಾ ಗುತ್ತದೆ. ಈ ರೀತಿಯ ಏಳೆಂಟು ಪ್ರಶ್ನೆಗಳನ್ನು ಉತ್ತರಿಸಿದ ಬಳಿಕ, ಕಡೆಯಲ್ಲಿ ಆ್ಯಪ್‌ ತೀರ್ಪು ನೀಡುತ್ತದೆ. ತೀರ್ಪಿನಲ್ಲಿ ಬಳಕೆದಾರನಿಗೆ ಕೋವಿಡ್ ತಗುಲುವ ರಿಸ್ಕ್ ಎಷ್ಟಿದೆ ಎಂಬುದನ್ನು ತಿಳಿಸುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next