ಬೀದರ: ರಾಜ್ಯದ ಸೌಹಾರ್ದ ಸಹಕಾರ ಚಳವಳಿ ವೇಗವಾಗಿ ಬೆಳೆಯುತ್ತಿದ್ದು, ಸರ್ಕಾರ ಹಾಗೂ ಸಾರ್ವಜನಿಕರ ಗಮನ ಸೆಳೆದಿದೆ. ಸೌಹಾರ್ದ ಸಹಕಾರಿಗಳಿಗೆ ಸ್ವಾಯತ್ತತೆಯ ಅವಶ್ಯಕತೆ ಇದೆ ಎಂದು ಸಂಯುಕ್ತ ಸಹಕಾರಿಯ ಅಧ್ಯಕ್ಷ ಬಿ.ಎಚ್. ಕೃಷ್ಣಾರೆಡ್ಡಿ ಹೇಳಿದರು.
ನಗರದ ಶಾರದಾ ರುಡ್‌ಶೆಟ್‌ನಲ್ಲಿ ಜಿಲ್ಲಾ ಸೌಹಾರ್ದ ಸಹಕಾರಿಗಳ ಅಧ್ಯಕ್ಷರು ಹಾಗೂ ಸಿಇಒಗಳಿಗಾಗಿ ಆಯೊಜಿಸಲಾಗಿದ್ದ ಸಂಪರ್ಕ ಸಭೆ ಹಾಗೂ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಸೌಹಾರ್ದ ಸಹಕಾರಿ ಕ್ಷೇತ್ರದ ಬೆಳವಣಿಗೆ ಸಮಾಧಾನಕರ ವಾಗಿದೆಯಾದರೂ ಈ ಕ್ಷೇತ್ರದ ಅಭಿವೃದ್ಧಿಗೆ ಇನ್ನೂ ಅನೇಕ ಕೆಲಸಗಳು ಬಾಕಿ ಇವೆ ಎಂದರು.
ಸೌಹಾರ್ದ ಸಹಕಾರಿ ಕ್ಷೇತ್ರದ ಅಭಿವೃದ್ಧಿಗಾಗಿ ಸಂಯುಕ್ತ ಸಹಕಾರಿ ಸಹಕಾರಿಯ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ಸೌಹಾರ್ದ ಸಹಕಾರಿಗಳು ಇದರ ಅನುಷ್ಠಾನಕ್ಕೆ ಸಹಕಾರ ಹಾಗೂ ಮಾರ್ಗದರ್ಶನ ಮಾಡಬೇಕು. ರಾಜ್ಯದಲ್ಲಿ ಸೌಹಾರ್ದ ಸಹಕಾರಿ ಕಾಯ್ದೆ ಜಾರಿ ಬಳಿಕ ಹಲವು ಬಾರಿ ತಿದ್ದುಪಡಿಗಳು ಆಗಿವೆ. ಸಂಯುಕ್ತ ಸಹಕಾರಿಯ ಮತ್ತು ಸೌಹಾರ್ದ ಸಹಕಾರಿ ಕ್ಷೇತ್ರದ ಮೂಲ ಆಶಯಕ್ಕೆ ಧಕ್ಕೆ ಬರುವ ಹಾಗೆ ತಿದ್ದುಪಡಿಗಳಾಗಿವೆ. ಸಹಕಾರಿಗಳ ಸ್ವಾಯತ್ತತೆಗೆ ಹಾಗೂ ಮನಸ್ಸಿಗೆ ನೋವು ಉಂಟಾಗಿದೆ. ಸಹಕಾರಿ ಸಂಸ್ಥೆಗಳ ಕಾರ್ಯಾಚರಣೆಯಲ್ಲಿ ಹಲವಾರು ತೊಡಕುಗಳು ಆಗುತ್ತಿವೆ. ಇವುಗಳ ನಿವಾರಣೆ ಹಾಗೂ ಸೌಹಾರ್ದ ಸಹಕಾರಿ ಕಾಯ್ದೆಯ
ಮೂಲ ಆಶಯ ಪುನರ್ ಸ್ಥಾಪನೆ ಮಾಡುವುದು ನಮ್ಮ ಆದ್ಯತಾ ವಲಯವಾಗಿದೆ ಎಂದರು.
ಸಂಯುಕ್ತ ಸಹಕಾರಿಯ ನಿಕಟಪೂರ್ವ ಅಧ್ಯಕ್ಷ ಗುರುನಾಥ ಜಾಂತಿಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದಲ್ಲಿ 4150ಕ್ಕೂ ಹೆಚ್ಚು ಸೌಹಾರ್ದ ಸಹಕಾರಿಗಳು ಕಾರ್ಯ ನಿರ್ವಹಿಸುತ್ತಿವೆ. 1078ಕ್ಕೂ ಹೆಚ್ಚು ಇ- ಸ್ಟಾಂಪಿಂಗ್ ಕೇಂದ್ರಗಳು ಇದ್ದು, ರಾಜ್ಯದ ಬೊಕ್ಕಸಕ್ಕೆ ಪ್ರತಿದಿನ 1.25 ಕೋಟಿಗೂ ಹೆಚ್ಚು ರಾಜಸ್ವ ನೀಡುತ್ತಿದೆ. ಈ ಕ್ಷೇತ್ರ ರಾಜ್ಯದ ಸೌಹಾರ್ದ ಸಹಕಾರಿ ಕ್ಷೇತ್ರದಲ್ಲಿ 50ಲಕ್ಷಕ್ಕೂ ಹೆಚ್ಚು ಸದಸ್ಯರು ತೊಡಗಿಸಿಕೊಂಡಿದ್ದಾರೆ. 50,000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ಹೇಳಿದರು.
ಸಂಯುಕ್ತ ಸಹಕಾರಿ ವ್ಯವಸ್ಥಾಪಕ ನಿರ್ದೇಶಕ ಶರಣಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಕಾರಿಯ ನಿರ್ದೇಶಕರಾದ ಸಂಜೀವ ಮಹಾಜನ, ತಿಮಯ್ನಾ ಶೆಟ್ಟಿ, ಶ್ರೀಧರ, ಹಿರಿಯ ಸಹಕಾರಿಗಳಾದ ರಮೇಶ ವೈದ್ಯ, ನಾಗಲಿಂಗ ಪತ್ತಾರ, ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷ ಸಂಜೀವಕುಮಾರ ಪಾಟೀಲ, ಶಿವಬಸಪ್ಪಾ ಚನ್ನಮಲ್ಲೇ, ರಾಜಶೇಖರ ನಾಗಮೂರ್ತಿ, ಶಿವಾನಂದ ಮಂಠಾಳಕರ್. ಸಂಜಯ ಕ್ಯಾಸಾ ಉಪಸ್ಥಿತರಿದ್ದರು. ಸಂಜಯ ಕೊರಟಕರ ಸ್ವಾಗತಿಸಿದರು. ಶಿವಕುಮಾರ ಬಿ.ಎಸ್. ನಿರೂಪಿಸಿದರು. ಎಸ್. ಶಂಕರ ವಂದಿಸಿದರು.