ಕೇಂದ್ರ ಸರಕಾರದ ಈ ಬಾರಿ ಬಜೆಟ್‌ನಲ್ಲಿ ಆಟೋಮೊಬೈಲ್ ಕ್ಷೇತ್ರದ ಬಗ್ಗೆ ನಿರ್ಲಕ್ಷ್ಯ ತೋರಿದ್ದು, ಈ ಕ್ಷೇತ್ರವನ್ನು ಬಾಧಿಸಲಿದೆ. ಕೊರೊನೋತ್ತರ ಪರಿಸ್ಥಿತಿಯ ಕಾಲಘಟ್ಟದಲ್ಲಿ ಇದೀಗ ಚೇತರಿಕೆಯತ್ತ ಸಾಗುತ್ತಿರುವ ಹಂತದಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಕನಿಷ್ಠ ಕೆಲವು ಉತ್ತೇಜನ ಗಳನ್ನಾದರೂ ನೀಡಿದ್ದರೆ ಈ ಕ್ಷೇತ್ರಕ್ಕೆ ಒಂದಷ್ಟು ಲಾಭವಾಗುತ್ತಿತ್ತು.
ಎಲೆಕ್ಟ್ರಿಕಲ್ ವಾಹನ ಕ್ಷೇತ್ರಕ್ಕೆ ಪೂರಕವಾಗಿ ಉತ್ತೇಜನ ಯೋಜನೆ ಗಳನ್ನು ಘೋಷಿಸಲಾಗಿದೆ. ಈ ಕ್ಷೇತ್ರದ ಬೆಳವಣಿಗೆಗೆ ಇದು ಉತ್ತೇಜನ ದಾಯಕವಾಗಲಿದೆ. ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಬದಲಾವಣೆಗಳಿಗೆ ಹಾಗೂ ಚಾರ್ಚಿಂಗ್ ಪಾಯಿಂಟ್‌ಗಳ ಸ್ಥಾಪನೆಗೆ ಪೂರಕವಾಗಿ ಯೋಜನೆ ಗಳನ್ನು ಉಲ್ಲೇಖೀಸಲಾಗಿದೆ. ಇದು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಪ್ರೋತ್ಸಾಹದಾಯಕವಾಗಿದೆ. ಪ್ರವರ್ಧಮಾನಕ್ಕೆ ಬರುತ್ತಿರುವ ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರಕ್ಕೆ ವೇಗ ನೀಡುವ ಸಾಧ್ಯತೆಗಳಿವೆ.
ಆಟೋಮೊಬೈಲ್ ಪ್ರಸ್ತುತ ಅವಶ್ಯ ಕ್ಷೇತ್ರದಲ್ಲಿ ಬರುತ್ತದೆ. ಆರ್ಥಿಕ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಒಂದು ಪ್ರಮುಖ ಕ್ಷೇತ್ರ. ವಿವಿಧ ರೂಪದಲ್ಲಿ ದೇಶದ ಆರ್ಥಿಕತೆ ಮಹತ್ವದ ಕೊಡುಗೆಯನ್ನು ನೀಡುತ್ತಿದೆ. ಅದುದರಿಂದ ಇದನ್ನು ಆದ್ಯತೆಯ ಕ್ಷೇತ್ರವಾಗಿ ಪರಿಗಣಿಸುವುದು ಅವಶ್ಯವಾಗಿತ್ತು. ವಾಹನ ಸಾಲಗಳ ಮೇಲೆ ಕೆಲವು ರಿಯಾತಿಗಳ ಘೋಷಣೆ, ಜಿಎಸ್‌ಟಿಯಲ್ಲಿ ಇಳಿಕೆ, ಬಿಡಿಭಾಗಗಳ ತೆರಿಗೆಯಲ್ಲಿ ಇಳಿಕೆ ಮುಂತಾದ ಕ್ರಮಗಳು ಆಟೋಮೊಬೈಲ್ ಕ್ಷೇತ್ರದ ಚೇತರಿಕೆಗೆ ಪೂರಕವಾಗುತ್ತಿತ್ತು. ಆದರೆ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರಕ್ಕೆ ಸ್ವಲ್ಪ ಪ್ರಯೋಜನೆ ಗಳನ್ನು ನೀಡಿದ್ದು ಬಿಟ್ಟರೆ ಉಳಿದಂತೆ ಇಡೀ ಆಟೋಮೊಬೈಲ್ ಕ್ಷೇತ್ರವನ್ನು ಅವಗಣಿಸಿರುವುದು ಕಂಡುಬಂದಿದೆ. ಕನಿಷ್ಠ ಕೆಲವು ರಿಯಾಯತಿ, ಕೊಡುಗೆಗಳನ್ನು ನೀಡಿದ್ದರೆ ಕ್ಷೇತ್ರ ಮಾತ್ರವಲ್ಲದೆ ಆರ್ಥಿಕತೆಗೂ ಪೂರಕವಾಗುತ್ತಿತ್ತು.
ವಾಹನಗಳಿಗೆ ಡಿಪ್ರಿಸಿಯೇಶನ್ ದರ ಏರಿಕೆ ನಿರೀಕ್ಷೆ ಇಟ್ಟುಕೊಳ್ಳ ಲಾಗಿತ್ತು. ಏರಿಕೆ ಮಾಡಿದ್ದರೆ ವಾಹನಗಳ ಖರೀದಿಯಲ್ಲಿ ಹೆಚ್ಚಳವಾಗಿ ಮಾರಾಟದಲ್ಲಿ ಏರಿಕೆಯಾಗುತ್ತಿತ್ತು. ಇದರ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಉಲ್ಲೇಖ ಮಾಡದಿರುವುದು ಆಟೋಮೊಬೈಲ್ ಕ್ಷೇತ್ರದ ಮೇಲೆ ಪರಿಣಾಮ ಬೀರಲಿದೆ. ಕೇಂದ್ರ ಸರಕಾರ ಈಗಾಗಲೇ ಗುಜರಿ ನೀತಿಯನ್ನು ಪ್ರಕಟಿಸಿದೆ. ಇದು ಪ್ರಥಮವಾಗಿ ಮೆಟ್ರೋ ನಗರಗಳಲ್ಲಿ ಅನುಷ್ಠಾನಕ್ಕೆ ಬಂದು ಬಳಿಕ ಸಣ್ಣ ನಗರಗಳಲ್ಲಿ ಜಾರಿಗೆ ಬರಲಿದೆ. ಗುಜರಿ ನೀತಿಯಲ್ಲಿ ಕೆಲವು ರಿಯಾಯಿತಿ ಅಂಶಗಳನ್ನು ಉಲ್ಲೇಖಿಸಲಾಗಿತ್ತು. ಆದರೆ ಹೊಸ ವಾಹನಗಳ ಖರೀದಿಗೆ ಹೆಚ್ಚುವರಿಯಾಗಿ ಒಂದಷ್ಟು ಉತ್ತೇಜನದಾಯಕ ಕ್ರಮಗಳನ್ನು ಘೋಷಿಸಿದ್ದರೆ ಆಟೋಮೊಬೈಲ್ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗುತ್ತಿತ್ತು.
ವಾಣಿಜ ಕ್ಷೇತ್ರ,ಉದ್ದಿಮೆ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಕೆಲವು ಉತ್ತೇಜನಗಳು ಘೋಷಿಸಲಾಗಿದೆ. 100 ಪಿಎಂ ಗತಿಶಕ್ತಿ ಕಾರ್ಗೋ ಟರ್ಮಿನಲ್, ಡಿಜಟಲ್ ರುಪಿ, ಇ-ಪಾಸ್‌ಪೋರ್ಟ್, ಯುನಿಫೈಡ್ ಲಾಜಿಸ್ಟಿಕ್ ಇಂಟರ್‌ಫೇಸ್, ಡಿಜಟಲ್ ಯೂನಿವರ್ಸಿಟಿ ಮುಂತಾದ ಕ್ರಮಗಳು ಪ್ರೋತ್ಸಾಹದಾಯಕವಾಗಿವೆ. ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ ವಿಸ್ತರಣೆ ಸೇರಿದಂತೆ ಉದ್ಯಮ ಸ್ನೇಹಿ ಕ್ರಮಗಳು ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಲಿವೆ. 25,000 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಯೋಜನೆಯಲ್ಲಿ ಮಂಗಳೂರು-ಬೆಂಗಳೂರು ಹೆದ್ದಾರಿಗೂ ಅನುದಾನ ಲಭ್ಯತೆ ಅಪೇಕ್ಷಣೀಯವಾಗಿದೆ.