Advertisement

ಮಿಶ್ರತ್ಯಾಜ್ಯ ಸಂಸ್ಕರಿಸಲು ಸ್ವಯಂಚಾಲಿತ ಯಂತ್ರ

10:30 AM Dec 31, 2022 | Team Udayavani |

ಬೆಂಗಳೂರು: ಬಿಬಿಎಂಪಿಯ 243 ವಾರ್ಡ್‌ ಗಳಲ್ಲಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗಾಗಿ ಹೊಸದಾಗಿ ಗುತ್ತಿಗೆದಾರರನ್ನು ನೇಮಿಸಲಾಗುತ್ತಿದೆ. ಅದರ ಜತೆಗೆ ಬ್ಲ್ಯಾಕ್‌ಸ್ಪಾಟ್‌ ಗಳಲ್ಲಿ ಶೇಖರಣೆಯಾಗುವ ಹಾಗೂ ತ್ಯಾಜ್ಯ ವಿಂಗಡಿಸದೆ ಸಂಗ್ರಹಿಸಲಾಗುವ ಕಸವನ್ನು ಬೇರ್ಪಡಿಸಲು ಸ್ವಯಂಚಾಲಿತ ತ್ಯಾಜ್ಯ ವಿಂಗಡಣಾ ಯಂತ್ರ ಅಳವಡಿಕೆಗೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಮುಂದಾಗಿದೆ.

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿ ನಿತ್ಯ 4,500 ರಿಂದ 5 ಸಾವಿರ ಟನ್‌ವರೆಗೆ ಮಿಶ್ರ ತ್ಯಾಜ್ಯ ಉತ್ಪತ್ತಿಯಾ ಗುತ್ತದೆ. ಅದರಲ್ಲಿ 3,500 ಟನ್‌ಗೂ ಹೆಚ್ಚಿನ ತ್ಯಾಜ್ಯ ಹಸಿ ತ್ಯಾಜ್ಯವಾಗಿದೆ. ಹೀಗೆ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮನೆಗಳಿಂದ ಸಂಗ್ರಹಿಸುವ ವೇಳೆ ಹಸಿ, ಒಣ ಮತ್ತು ಸ್ಯಾನಿಟರಿ ತ್ಯಾಜ್ಯ ಬೇರ್ಪಡಿಸಿ ನೀಡುವಂತೆ ಸಾರ್ವಜನಿಕರಿಗೆ ಬಿಬಿಎಂಪಿ ತಿಳಿಸಿದೆ.

ಅಲ್ಲದೆ, ಈ ಹಿಂದಿನಿಂದಲೂ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗು ತ್ತದೆ. ಮಿಶ್ರ ತ್ಯಾಜ್ಯ ನೀಡುವ ಮನೆಯವರಿಂದ ತ್ಯಾಜ್ಯ ಸಂಗ್ರಹಿಸದಂತೆ ಗುತ್ತಿಗೆದಾರರಿಗೂ ತಿಳಿಸಲಾಗಿತ್ತು. ಕೆಲ ತಿಂಗಳಿನಿಂದ ತ್ಯಾಜ್ಯ ಸಂಗ್ರಹ ಗುತ್ತಿಗೆದಾರರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ತ್ಯಾಜ್ಯ ಬೇರ್ಪಡಿಸಿ ಸಂಗ್ರಹಿಸುವ ಕ್ರಮ ಸಮರ್ಪಕವಾಗಿ ನಡೆಯುತ್ತಿಲ್ಲ.

ಹೀಗಾಗಿ ಎಲ್ಲೆಡೆ ಮಿಶ್ರ ತ್ಯಾಜ್ಯ ಸಂಗ್ರಹವಾಗುತ್ತಿದೆ. ಅದರ ಜತೆಗೆ ನಗರದಲ್ಲಿ ಬ್ಲ್ಯಾಕ್‌ಸ್ಪಾಟ್‌ಗಳಲ್ಲೂ ಮಿಶ್ರ ತ್ಯಾಜ್ಯ ಸಂಗ್ರಹವಾಗುತ್ತಿದೆ. ಈ ಕಾರಣದಿಂದಾಗಿ ತ್ಯಾಜ್ಯ ನಿರ್ವಹಣೆಯಲ್ಲಿ ಸಮಸ್ಯೆಯಾಗುತ್ತಿದೆ. ಅದನ್ನು ನಿವಾರಿಸುವ ಸಲುವಾಗಿ ಮಿಶ್ರತ್ಯಾಜ್ಯವನ್ನು ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯಗಳೆಂದು ವಿಂಗಡಿಸಿ ಪ್ರತ್ಯೇಕವಾಗಿ ಸಂಸ್ಕರಿಸುವ ಸಲುವಾಗಿ ಬಿಬಿಎಂಪಿ ಯಂತ್ರ ಖರೀದಿಸಲು ಮುಂದಾಗಿದೆ.

ಗಂಟೆಗೆ 5 ಸಾವಿರ ಕೆ.ಜಿ.ವಿಂಗಡಣೆ: ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಸ್ವಯಂಚಾಲಿತ ತ್ಯಾಜ್ಯ ವಿಂಗಡಣಾ ಯಂತ್ರವನ್ನು ಖರೀದಿಸಲು ಯೋಜನೆ ರೂಪಿಸಿದೆ. ಅದಕ್ಕಾಗಿ 7.75 ಕೋಟಿ ರೂ. ನಿಗದಿ ಮಾಡಲಾಗಿದ್ದು, ಯಂತ್ರ ಪೂರೈಕೆದಾರರಿಗಾಗಿ ಟೆಂಡರ್‌ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ. ಅದರ ಪ್ರಕಾರ ಪ್ರತಿ ಗಂಟೆಗೆ 5 ಸಾವಿರ ಕೆ.ಜಿ. ಮಿಶ್ರತ್ಯಾಜ್ಯ ವಿಂಗಡಿಸುವ ಸಾಮರ್ಥ್ಯವಿರುವ ಸ್ವಯಂಚಾಲಿತ ತ್ಯಾಜ್ಯ ವಿಂಗಡಣಾ ಯಂತ್ರ ಖರೀದಿಸಲಾಗುತ್ತದೆ. ಅಲ್ಲದೆ, ಪ್ರತಿ ಪಾಳಿಯಲ್ಲಿ ಸರಾಸರಿ 40 ಟನ್‌ ಮಿಶ್ರ ತ್ಯಾಜ್ಯವನ್ನು ಪ್ರತ್ಯೇಕಿಸಬೇಕಿದೆ.

Advertisement

ಸ್ವಯಂಚಾಲಿತ ಯಂತ್ರ ಕಾರ್ಯನಿರ್ವಹಣೆ ಹೇಗೆ?: ಸ್ವಯಂಚಾಲಿತ ತ್ಯಾಜ್ಯ ವಿಂಗಡಣಾ ಯಂತ್ರವು ಮೂರು ಹಂತದಲ್ಲಿ ತ್ಯಾಜ್ಯವನ್ನು ವಿಂಗಡಿಸಲಿದೆ. 50 ಮಿ.ಮೀ. ಗಾತ್ರದ ತ್ಯಾಜ್ಯ, 50ರಿಂದ 300 ಮಿ.ಮೀ. ಹಾಗೂ 300 ಮಿ.ಮೀ.ಗೂ ಹೆಚ್ಚಿನ ಗಾತ್ರದ ತ್ಯಾಜ್ಯಗಳು ಬೇರ್ಪಡಣೆಯಾಗಲಿವೆ. ಅದರ ಜತೆಜತೆಗೆ ಕಬ್ಬಿಣ ಸೇರಿ ಇನ್ನಿತರ ವಸ್ತುಗಳನ್ನು ಬೇರ್ಪಡಿಸಲು ಮ್ಯಾಗ್ನೆಟ್‌ಗಳನ್ನು ಅಳವಡಿಸಲಾಗಿರುತ್ತದೆ. ಆ ಮ್ಯಾಗ್ನೆಟ್‌ಗಳು ಮಿಶ್ರತ್ಯಾಜ್ಯ ಸಾಗುವಾಗ, ತಮ್ಮ ಶಕ್ತಿಯಿಂದ ಕಬ್ಬಿಣವನ್ನು ಎಳೆದುಕೊಳ್ಳಲಿದೆ. ಹಾಗೆಯೇ, ಮಿಶ್ರತ್ಯಾಜ್ಯದಲ್ಲಿ ಹಸಿ ಮತ್ತು ಒಣ ತ್ಯಾಜ್ಯಗಳನ್ನು ಗಾಳಿಯ ಆಧಾರದಲ್ಲಿ ಬೇರ್ಪಡಿಸಲಾಗುತ್ತದೆ. ಅದಾದ ನಂತರ ಹಸಿ ತ್ಯಾಜ್ಯವನ್ನು ಸಂಸ್ಕರಿಸಿ ಗೊಬ್ಬರ ಅಥವಾ ಮಿಥೇನ್‌ ಗ್ಯಾಸ್‌ ಉತ್ಪಾದನೆಗೆ ಬಳಸಲಾಗುತ್ತದೆ. ಒಣ ತ್ಯಾಜ್ಯದಲ್ಲಿ ಪ್ರಮುಖವಾಗಿ ಪ್ಲಾಸ್ಟಿಕ್‌ನ್ನು ಸಿಮೆಂಟ್‌ ಕಾರ್ಖಾನೆ ಅಥವಾ ಮರುಬಳಕೆ ವಸ್ತು ತಯಾರಿಸುವ ಕಾರ್ಖಾನೆಗಳಿಗೆ ಕಳುಹಿಸಲಾಗುತ್ತದೆ.

ಒಡಿಎಫ್ ನಿಯಂತ್ರಣಕ್ಕೆ  ವ್ಯವಸ್ಥೆ: ಸ್ವಯಂಚಾಲಿತ ಘನತ್ಯಾಜ್ಯ ವಿಂಗಡಣಾ ಯಂತ್ರವನ್ನು ಪೂರೈಸುವ ಗುತ್ತಿಗೆದಾರರು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ನಿಗದಿ ಮಾಡುವ ಸ್ಥಳಕ್ಕೆ ಯಂತ್ರವನ್ನು ತಂದು ಅದು ಕಾರ್ಯನಿರ್ವಹಿಸುವಂತೆ ಜೋಡಿಸ ಬೇಕಿದೆ. ಅಲ್ಲದೆ, 3 ತಿಂಗಳ ಕಾಲ ಅದು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಗುತ್ತಿಗೆದಾರರ ಹೊಣೆಯಾಗಿದೆ. ಅಲ್ಲದೆ, ಅದಾದ ನಂತರವೂ ಯಂತ್ರದಲ್ಲಿ ಏನಾದರೂ ಸಮಸ್ಯೆಯಾದರೆ, ಅದರ ದುರಸ್ತಿ ಸೇರಿ ನಿರ್ವಹಣೆ ಗುತ್ತಿಗೆದಾರರದ್ದೇ ಆಗಿರಲಿದೆ. ಹಾಗೆಯೇ, ಯಂತ್ರ ಅಳವಡಿಸುವ ಘಟಕದಲ್ಲಿ ಘನತ್ಯಾಜ್ಯದಿಂದ ಉಂಟಾಗುವ ದುರ್ವಾಸನೆ ತಡೆ ಹಾಗೂ ತ್ಯಾಜ್ಯ ನೀರು ಸಂಗ್ರಹಿಸುವುದಕ್ಕೆ ವ್ಯವಸ್ಥೆಯನ್ನೂ ಗುತ್ತಿಗೆದಾರರು ಮಾಡಬೇಕಿದೆ.

-ಗಿರೀಶ್‌ ಗರಗ

Advertisement

Udayavani is now on Telegram. Click here to join our channel and stay updated with the latest news.

Next