Advertisement

ಆತ್ಮಚರಿತ್ರೆ ಐತಿಹಾಸಿಕ ದಾಖಲೆ

01:45 PM Apr 13, 2018 | |

ಶಿವಮೊಗ್ಗ: ಬದುಕಿನ ಬರಹಗಳಾದ ಆತ್ಮಕಥೆ, ಜೀವನಚರಿತ್ರೆ, ತಪ್ಪೊಪ್ಪಿಗೆ, ನೆನಪು, ಮರಣ ಪತ್ರ, ಇವೆಲ್ಲವೂ ಐತಿಹಾಸಿಕ ಮೌಲ್ಯ ಹೊಂದಿದ್ದು, ಪರ್ಯಾಯ ಇತಿಹಾಸದ ದಾಖಲೆಗಳೇ ಆಗಿವೆ ಎಂದು ನವದೆಹಲಿಯ ಜವಹರ್‌ಲಾಲ್‌ ನೆಹರು ವಿಶ್ವವಿದ್ಯಾಲಯದ ಪ್ರೊ| ಉದಯ್‌ ಕುಮಾರ್‌ ಅಭಿಪ್ರಾಯಪಟ್ಟರು.

Advertisement

ಕುವೆಂಪು ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗ ಆಯೋಜಿಸಿದ್ದ “ಸಾಮಾಜಿಕ ಚರಿತ್ರೆಯಾಗಿ ಬದುಕಿನ ಬರಹಗಳು: ಸಂಸ್ಕೃತಿಗಳಾಚೆಗಿನ ಓದುವಿಕೆ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಬದುಕಿನ ಬರಹಗಳು ವ್ಯಕ್ತಿಯೋರ್ವನ ಖಾಸಗಿ ಅಭಿವ್ಯಕ್ತಿ ಮಾತ್ರವಲ್ಲ. ಅವುಗಳು ಸಾಮಾಜಿಕ ಹಾಗೂ ರಾಜಕೀಯ ಸಂಕೇತಗಳು ಹೌದು. ದಿನಚರಿ, ಮರಣ ಪತ್ರಗಳಲ್ಲಿಯೂ ಇಂತಹ ಅಂಶಗಳನ್ನು ಗುರುತಿಸಬಹುದು. ನವ ಮಾಧ್ಯಮ ತಂತ್ರಜ್ಞಾನ, ಸಾಮಾಜಿಕ ಮಾಧ್ಯಮಗಳ ಮೂಲಕ ದಾಖಲಾಗುತ್ತಿರುವ ವಿಚಾರಗಳನ್ನು ಕೂಡ ಬದುಕಿನ ಬರಹಗಳಾಗಿ ಅಧ್ಯಯನ ಮಾಡುವ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು. 

ಇತ್ತೀಚೆಗೆ ದೇಶಾದ್ಯಂತ ಸಾಮಾಜಿಕ ಹಾಗೂ ರಾಜಕೀಯ ಕಾರಣಗಳಿಗಾಗಿ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿದ್ದು, ಇಂತಹ ವ್ಯಕ್ತಿಗಳ ಮರಣ ಪತ್ರಗಳು ಕೂಡ ಸಾಮಾಜಿಕ ಇತಿಹಾಸದ ದಾಖಲೆಗಳೇ ಆಗಿವೆ ಎಂದು ವಿಶ್ಲೇಷಿಸಿದರು. ರೋಹಿತ್‌ ವೇಮುಲನ ಆತ್ಮಹತ್ಯಾ ಪತ್ರ, “ಅಂಬೇಡ್ಕರ್‌ ಮತ್ತು ಅವರ ಸಿದ್ಧಾಂತ ಶಾಶ್ವತವಾಗಿರಲಿ’ ಎಂದು ಮಹಾರಾಷ್ಟ್ರದ ವಿಲಾಸ್‌ ಭೋಗ್ಲೆ ಬರೆದ ಮರಣ ಘೋಷಣೆ ಕೂಡ ಬದುಕಿನ ಬರಹದ ರೂಪಕಗಳಾಗಿರುತ್ತವೆ ಎಂದು ವಿವರಿಸಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ| ಜೋಗನ್‌ ಶಂಕರ್‌, ಭಾರತವು ಸುದೀರ್ಘ‌ ಇತಿಹಾಸ ಹೊಂದಿದ್ದರೂ ದಾಖಲಾಗಿರುವುದು ಅಲ್ಪ ಮಾತ್ರ. ವೇದ, ಪುರಾಣ, ಸ್ಮೃತಿಗಳಲ್ಲಿ ಕಂಡುಬರುವ ಕೆಲವು ಐತಿಹಾಸಿಕ ಉಲ್ಲೇಖಗಳನ್ನು ಆ ಕಾಲಘಟ್ಟದ ಬಿಡಿ ಚಿತ್ರಣಗಳಾಗಿ ನೋಡಬಹುದು. ಇನ್ನು ಲಭ್ಯವಿರುವ ಕೆಲವು ಐತಿಹಾಸಿಕ ದಾಖಲೆಗಳು ಕೂಡ ಗೊಂದಲಮಯವಾಗಿದ್ದು, ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಬದುಕಿನ ಬರಹಗಳನ್ನು ಸಾಮಾಜಿಕ ಚರಿತ್ರೆಯಾಗಿ ನೋಡುವ ಅಗತ್ಯವಿದೆ ಎಂದರು.

Advertisement

ವಿವಿ ಪರಿಕ್ಷಾಂಗ ಕುಲಸಚಿವ ರಾಜಾನಾಯ್ಕ, ಇಂಗ್ಲಿಷ್‌ ವಿಭಾಗದ ಮುಖ್ಯಸ್ಥ ಡಾ| ದತ್ತಾತ್ರೇಯ, ಪ್ರೊ| ರಾಜೇಂದ್ರ ಚೆನ್ನಿ ಸೇರಿದಂತೆ ವಿವಿಧ ಗಣ್ಯರು ಇದ್ದರು. ಐಶ್ವರ್ಯ ನಿರೂಪಿಸಿದರು. ನಂತರ ನಡೆದ ಗೋಷ್ಠಿಗಳಲ್ಲಿ ಮುಂಬೈ ಐಐಟಿಯ ಪ್ರೊ| ಶರ್ಮಿಲಾ ಶ್ರೀಕುಮಾರ್‌, ಮಂಗಳೂರು ವಿವಿ ಪ್ರೊ| ಪರಿಣಿತ ಶೆಟ್ಟಿ, ಬಳ್ಳಾರಿ ಶ್ರೀಕೃಷ್ಣದೇವರಾಯ ವಿವಿಯ ಪ್ರೊ| ರಾಬರ್ಟ್‌ ಜೋಸ್‌ ವಿಚಾರ ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next