Advertisement

ಮದಗದ ಕೆರೆ ನೀರು ಸೋರಿಕೆ ತಡೆಗಟ್ಟಲು ತುರ್ತು ಕ್ರಮ

12:59 PM Jun 09, 2018 | |

ಕಡೂರು: ತಾಲೂಕಿನ ಐತಿಹಾಸಿಕ ಮದಗದಕೆರೆ ನೀರು ಸೋರಿಕೆಯಾಗುತ್ತಿದೆ ಎನ್ನುವ ರೈತರು ಮಾಡಿದ ಮನವಿಗೆ ಸ್ಪಂದಿಸಿದ ಶಾಸಕ ಬೆಳ್ಳಿ ಪ್ರಕಾಶ್‌ ಶುಕ್ರವಾರ ದಿಢೀರನೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸೊರಿಕೆಯಾಗುತ್ತಿರುವ ನೀರು ತಡೆಯಲು ತುರ್ತು ದುರಸ್ಥಿಗೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಕಳೆದ ಆರು ತಿಂಗಳ ಹಿಂದೆಯೇ ಕೊಂತ ದುರಸ್ಥಿ ಮಾಡಬೇಕು ಎಂದು ಮದಗದಕೆರೆಯಲ್ಲಿ ಇದ್ದಂತಹ 25 ಅಡಿ
ನೀರನ್ನು ಖಾಲಿ ಮಾಡಿಸಲಾಗಿತ್ತು. ಆದರೆ ಮಳೆಗಾಲ ಪ್ರಾರಂಭವಾದರೂ ದುರಸ್ಥಿ ಕಾರ್ಯ ನಡೆದಿರಲಿಲ್ಲ.

ಈಗ ಪ್ರಾರಂಭವಾದ ಮಳೆಗೆ ಸುಮಾರು 5 ಅಡಿ ನೀರು ಕೆರೆಗೆ ಬಂದಿದ್ದು, ಕೊಂತ ರಿಪೇರಿಯಾಗದೇ ನೀರು ಸೊರಿಕೆಯಾಗುತ್ತಿತ್ತು, ರಿಪೇರಿ ನೆಪದಲ್ಲಿ ಇರುವ 5 ಅಡಿ ನೀರನ್ನು ಮತ್ತೇ ಖಾಲಿ ಮಾಡಿದ್ದರಿಂದ ಆ ಭಾಗದ ರೈತರು
ಅಧಿಕಾರಿಗಳ ಮೇಲೆ ಆಕ್ರೋಶಗೊಂಡಿದ್ದರು. ತಾಲೂಕಿನಲ್ಲಿ ಅತೀ ದೊಡ್ಡ ಕೆರೆ ಮತ್ತು ರೈತರ ಜೀವನಾಡಿ ಹಾಗೂ ಇತಿಹಾಸ ಹೊಂದಿರುವ ಕೆರೆಯಾಗಿದೆ. ಈ ಕೆರೆ ತುಂಬಿದರೆ ಕೆಳಭಾಗದ ಕೆರೆಗಳಿಗೆ ನೀರು ಹರಿಯುತ್ತದೆ. ಇದರಿಂದ
ಕೆಳಭಾಗದ ಕೊಳವೆಬಾವಿಗಳಿಗೆ ಅಂರ್ತಜಲ ವೃದ್ಧಿಯಾಗಲಿದೆ ಎಂದರು.

ಶಾಶ್ವತ ದುರಸ್ಥಿ ಕಾರ್ಯಕ್ಕೆ ಹಣವಿಲ್ಲ. ತಾವು ಶಾಸಕರಾಗಿ ಇನ್ನೂ 15 ದಿನಗಳಾಗಿವೆ. ಈ ಹಿಂದೆ ಕೆರೆಯ ಕೊಂತ ರಿಪೇರಿಗೆ ಅನುದಾನ ಬಾರದೇ ಇರುವುದರಿಂದ ಮುಂದಿನ ವರ್ಷ ಈ ಕೆರೆಯ ಶಾಶ್ವತ ದುರಸ್ಥಿಗೆ 50 ಲಕ್ಷ ರೂ. ತರುತ್ತೇನೆ ಎಂದರು.

ಸುಮಾರು 10 ವರ್ಷಗಳ ಹಳೆಯದಾಗಿರುವ ಕೊಂತ ರಿಪೇರಿಗೆ ಸುಮಾರು 50 ಲಕ್ಷ ಅಂದಾಜು ರೂ. ವೆಚ್ಚ ತಗುಲಲಿದ್ದು, ಮುಂದಿನ ಬೇಸಿಗೆಗೆ ನೀರನ್ನು ಸಂಪೂರ್ಣ ಖಾಲಿ ಮಾಡಿಸಿ ಶಾಶ್ವತ ದುರಸ್ಥಿ ಕಾರ್ಯ ನಡೆಯಲಿದೆ. ಸದ್ಯಕ್ಕೆ ತುರ್ತಾಗಿ ನೀರನ್ನು ನಿಲ್ಲಿಸಲು ಎಲ್ಲಾ ರೀತಿಯ ಕ್ರಮ ಕೈಗೊಂಡು ದುರಸ್ಥಿ ಕಾರ್ಯ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

Advertisement

ಕೆರೆಯೆಂದರೆ ಶಾಸಕರು, ಅಧಿಕಾರಿಗಳು ಮಾತ್ರ ಜವಾಬ್ದಾರರು ಎಂಬದಾಗಿದೆ. ಕೆರೆಯ ನೀರನ್ನು ಬಳಸುವ ಎಲ್ಲರಿಗೂ ಇದು ನಮ್ಮ ಕೆರೆ ಎಂಬ ಭಾವನೆ ಬರಬೇಕು. ತೂಬಿನ ದುರಸ್ಥಿ ಸಂದಂರ್ಭ ಪ್ರತಿಯೊಬ್ಬ ರೈತರು ನಿಂತು ಸಹಕಾರ ನೀಡಬೇಕು, ಈ ಕಾರ್ಯಕ್ಕೆ ನೀರು ಬಳಸುವ ಎಲ್ಲರೂ ಜವಾಬ್ದಾರರಾಗಬೇಕು ಎಂದರು. 

ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್‌. ಎನ್‌. ಚನ್ನಬಸಪ್ಪ ಮಾತನಾಡಿ, ಕಳೆದ 10 ವರ್ಷಗಳಷ್ಟು ಹಳೇಯದಾಗಿರುವ ತೂಬಿನ ಸವಕಳಿಯಾಗಿ ಅನಾವಶ್ಯಕವಾಗಿ ಕೆರೆಯ ನೀರು ಸೊರಿಕೆಯಾಗುತ್ತಿದೆ, ತಾತ್ಕಾಲಿಕವಾಗಿ ಮರಳು ಚೀಲ ತುಂಬಿ ರಬ್ಬರ್‌ ಬುಷ್‌ ಅಳವಡಿಸುವ ಮೂಲಕ ಕೆರೆಯ ನೀರನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಅರೇಕಲ್‌ ಪ್ರಕಾಶ್‌, ಕೆ.ಎನ್‌. ಬೊಮ್ಮಣ್ಣ, ರಮೇಶ್‌ ನಾಯ್ಕ, ಚಿಕ್ಕಯ್ಯ, ರಾಮಾನಾಯ್ಕ, ಶಶಿ, ವೀರೇಶ್‌ ಬಾಬು, ವೀರಪ್ಪ, ಹಾಗೂ ನೂರಾರು ರೈತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next